ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್‌.ಪಾಟೀಲ್‌ ಸಮಿತಿ ಶಿಫಾರಸ್ಸಿನಂತೆ 5 ವಿಭಾಗಕ್ಕೆ ಚಿಂತನೆ,  ಪ್ರತಿ ವಿಭಾಗಕ್ಕೂ ಮೇಯರ್‌, ಆಯುಕ್ತ, ಇದರ ಮೇಲ್ವಿಚಾರಣೆಗೆ ಮತ್ತೊಬ್ಬ ಮೇಯರ್‌

ಗಿರೀಶ್‌ ಗರಗ

ಬೆಂಗಳೂರು(ಜೂ.01):  ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದ್ದಂತೆ 2015ರಲ್ಲಿ ಸಲ್ಲಿಕೆಯಾದ ಬಿಬಿಎಂಪಿ ಪುನಾರಚನಾ ವರದಿ ಕುರಿತ ಚರ್ಚೆಗಳು ಮುನ್ನಲೆಗೆ ಬಂದಿದೆ.

ಬಿಬಿಎಂಪಿ ಚುನಾವಣೆಗೆ ಇರುವ ತೊಡಕುಗಳ ನಿವಾರಿಸಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಹಿಂದಿನ ಸರ್ಕಾರದ ವಾರ್ಡ್‌ ಮರುವಿಂಗಡಣೆ ಕ್ರಮವನ್ನು ಪರಿಶೀಲಿಸಿ, ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಲು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ಬೆಂಗಳೂರಿನ ಕೆಲ ಶಾಸಕರು, ಮಾಜಿ ಮೇಯರ್‌ಗಳನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಅದರ ಜತೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಲ್ಲಿಕೆಯಾಗಿದ್ದ ನಿವೃತ್ತ ಐಎಎಸ್‌ ಬಿ.ಎಸ್‌. ಪಾಟೀಲ್‌ ನೇತೃತ್ವದ ಸಮಿತಿಯ ಬಿಬಿಎಂಪಿ ಪುನಾರಚನೆ ವರದಿ ಪರಿಶೀಲನೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ.

ಪಾಲಿಕೆಯಿಂದ ಪಾಲಿಕೆಗೆ ಅನಧಿಕೃತ 34,541 ಕೋಟಿ ರೂ. ಫಲಕ ತೆರವು

ಬಿ.ಎಸ್‌. ಪಾಟೀಲ್‌ ವರದಿಯಲ್ಲೇನಿದೆ?:

ಬಿಬಿಎಂಪಿ ವಿಸ್ತೀರ್ಣ ಹೆಚ್ಚಿದ್ದು, ಒಂದು ಸ್ಥಳೀಯ ಸಂಸ್ಥೆಯಿಂದ ಜನರಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಬಿಬಿಎಂಪಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್‌.ಪಾಟೀಲ್‌ ನೇತೃತ್ವದ ಸಮಿತಿ ರಚಿಸಿದ್ದರು. ಸಮಿತಿಯು 2015ರಲ್ಲಿ ವರದಿ ನೀಡಿದ್ದು, ಅದರಲ್ಲಿ ಬಿಬಿಎಂಪಿಯನ್ನು 5 ಪಾಲಿಕೆಗಳಾಗಿ ವಿಂಗಡಿಸಬೇಕು. ಪ್ರತಿ ಪಾಲಿಕೆಗೆ ಪ್ರತ್ಯೇಕ ಮೇಯರ್‌, ಆಯುಕ್ತರನ್ನು ನೇಮಿಸಬೇಕು. ಅದರ ಜತೆಗೆ ಐದೂ ಪಾಲಿಕೆಯನ್ನು ನೋಡಿಕೊಳ್ಳಲು ಜನರೇ ಆಯ್ಕೆ ಮಾಡುವ 5 ವರ್ಷ ಅಧಿಕಾರವಿರುವ ಮೇಯರ್‌ ಇರಬೇಕು. ಒಟ್ಟಾರೆ ಮೇಯರ್‌ ಇನ್‌ಕೌನ್ಸಿಲ್‌ ಮಾದರಿಯ ಆಡಳಿತ ಜಾರಿಗೊಳಿಸಬೇಕು ಎಂದು ಸಮಿತಿ ಬಿಬಿಎಂಪಿ ಪುನಾರಚನಾ ವರದಿಯಲ್ಲಿ ಶಿಫಾರಸು ಮಾಡಿತ್ತು.

ಗ್ರೇಟರ್‌ ಬೆಂಗಳೂರು ರಚನೆ?

ಬಿ.ಎಸ್‌.ಪಾಟೀಲ್‌ ವರದಿಯಂತೆ ಬಿಬಿಎಂಪಿ ಪುನಾರಚನೆ ಮಾಡದಿದ್ದರೆ, 2010ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ ಹೊಸ ವಾರ್ಡ್‌ಗಳನ್ನು ಗ್ರೇಟರ್‌ ಬೆಂಗಳೂರನ್ನಾಗಿ ಪರಿಗಣಿಸಬೇಕು. ಅಲ್ಲಿಗೆ ಪ್ರತ್ಯೇಕ ಪಾಲಿಕೆ ರಚಿಸಿ, ಪ್ರತ್ಯೇಕ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು ಎಂಬ ಚರ್ಚೆಯನ್ನೂ ಸರ್ಕಾರದ ಮಟ್ಟದಲ್ಲಿ ನಡೆಸಲಾಗುತ್ತಿದೆ. ಹೀಗಾದಾಗ ಬೆಂಗಳೂರಿಗೆ ಇಬ್ಬರು ಮೇಯರ್‌, ಆಯುಕ್ತರು ದೊರೆಯಲಿದ್ದು, ಆಡಳಿತ ನಡೆಸಲು ಸುಲಭವಾಗಲಿದೆ ಎಂಬ ವಾದವೂಯಿದೆ.

243ರಲ್ಲಿ ಬದಲಿಸಿ ಚುನಾವಣೆ

ಬಿಬಿಎಂಪಿ ಪುನಾರಚನೆ ಅಥವಾ ಗ್ರೇಟರ್‌ ಬೆಂಗಳೂರು ರಚಿಸುವ ಪ್ರಕ್ರಿಯೆ ವಿಳಂಬವಾದರೆ, ಬಿಜೆಪಿ ಸರ್ಕಾರ ವಾರ್ಡ್‌ಗಳನ್ನು ಮರುವಿಂಗಡಿಸಿ ರಚಿಸಲಾದ 243 ವಾರ್ಡ್‌ಗಳಿಗೇ ಚುನಾವಣೆ ನಡೆಸುವಂತೆ ಮಾಡಲಾಗುತ್ತದೆ. ಅದಕ್ಕೂ ಮುನ್ನ ವಾರ್ಡ್‌ ಮರು ವಿಂಗಡಣೆ ವೇಳೆ ಕಾಂಗ್ರೆಸ್‌ ಮತಗಳು ಛಿದ್ರವಾಗುವಂತೆ ಮಾಡಿದ್ದ ಅಂಶಗಳನ್ನು ಪರಿಗಣಿಸಿ ವಾರ್ಡ್‌ಗಳನ್ನು ಮತ್ತೊಮ್ಮೆ ಮರು ವಿಂಗಡಿಸುವ ಪ್ರಕ್ರಿಯೆ ನಡೆಸಬೇಕು ಎಂಬ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

198 ವಾರ್ಡ್‌ಗೆ ಹೆಚ್ಚಿನ ಬೇಡಿಕೆ

ಬಿ.ಎಸ್‌.ಪಾಟೀಲ್‌ ವರದಿ ಅನುಷ್ಠಾನ, ಗ್ರೇಟರ್‌ ಬೆಂಗಳೂರು ರಚನೆ ಹಾಗೂ 243 ವಾರ್ಡ್‌ಗಳ ಮರುವಿಂಗಡಣೆಯಂತಹ ಕ್ರಮಗಳಿಗೆ ಸಾಕಷ್ಟುಸಮಯ ಬೇಕಾಗಲಿದೆ. ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲದೆ ಈಗಾಗಲೇ ಮೂರುವರೆ ವರ್ಷಗಳು ಕಳೆದಿದ್ದು, ಈ ವರ್ಷದ ಸೆಪ್ಟಂಬರ್‌ಗೆ 4 ವರ್ಷಗಳಾಗಲಿವೆ. ಹಿಂದೆ ಚುನಾವಣೆ ನಡೆಸುವಂತೆ ಕಾಂಗ್ರೆಸ್‌ ನಾಯಕರೇ ಬಿಜೆಪಿ ಮೇಲೆ ಒತ್ತಡ ಹೇರಿದ್ದರು. ಇದೀಗ ಚುನಾವಣೆ ನಡೆಸುವುದನ್ನು ವಿಳಂಬ ಮಾಡಿದರೆ ಪಕ್ಷಕ್ಕೆ ಕೆಟ್ಟಹೆಸರು ಬರಲಿದೆ. ಹೀಗಾಗಿ 243 ವಾರ್ಡ್‌ಗಳನ್ನು ರದ್ದು ಮಾಡಿ, ಹಿಂದೆ ಇದ್ದಂತಹ 198 ವಾರ್ಡ್‌ಗಳನ್ನು ಮರುಸ್ಥಾಪಿಸಿ ಚುನಾವಣೆ ನಡೆಸಬೇಕು ಎಂಬ ಒತ್ತಡ ಮಾಜಿ ಕಾರ್ಪೋರೇಟರ್‌ಗಳದ್ದಾಗಿದೆ.

ಬೆಂಗಳೂರು: ಲೈಸನ್ಸ್‌ ಇಲ್ಲದೆ ಕೃಷಿ ಜಾಗದಲ್ಲಿ 7 ಅಂತಸ್ತಿನ ಕಾಲೇಜು ನಿರ್ಮಾಣ

ವರ್ಷಾಂತ್ಯದೊಳಗೆ ಚುನಾವಣೆ

ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈಗಾಗಲೇ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ, ಕೆಪಿಸಿಸಿಯಿಂದ ಚುನಾವಣೆಗೆ ಸಿದ್ಧತೆ ನಡೆಸಲು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಬಿಬಿಎಂಪಿ ಚುನಾವಣಾ ಪೂರ್ವತಯಾರಿ ಸಮಿತಿಯನ್ನೂ ರಚಿಸಿದೆ. ಅಲ್ಲದೆ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷ ಮತ್ತೊಮ್ಮೆ ಶಕ್ತಿ ಪ್ರದರ್ಶನ ಮಾಡಲು ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಪಕ್ಷದೊಳಗೆ ಚರ್ಚೆಯೂ ನಡೆದಿದೆ. ಹೀಗಾಗಿ ಈ ವರ್ಷದ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ.

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಚುನಾವಣೆ ಪೂರ್ವದಲ್ಲೇ ಹಲವು ಸಭೆ ನಡೆಸಿದ್ದಾರೆ. ಸರ್ಕಾರ ರಚನೆಯಾದ ನಂತರವೂ ಸಭೆಗಳನ್ನು ನಡೆಸಲಾಗುತ್ತಿದೆ. ಶೀಘ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಅಂತ ಮಾಜಿ ಮೇಯರ್‌ ಸಂಪತ್‌ರಾಜ್‌ ತಿಳಿಸಿದ್ದಾರೆ.