Asianet Suvarna News Asianet Suvarna News

ಬೆಂಗಳೂರು: ಲೈಸನ್ಸ್‌ ಇಲ್ಲದೆ ಕೃಷಿ ಜಾಗದಲ್ಲಿ 7 ಅಂತಸ್ತಿನ ಕಾಲೇಜು ನಿರ್ಮಾಣ

ನಿರ್ಮಾಣ ಹಂತದ ಅಕ್ರಮ ಕಟ್ಟಡದಲ್ಲಿ ಕಾಲೇಜು, ಕೃಷಿ ಪ್ರದೇಶದಲ್ಲಿ ಯಾವುದೇ ಅನುಮತಿ ಇಲ್ಲದೇ ಕಟ್ಟಡ ನಿರ್ಮಾಣ, ಶಿಕ್ಷಣ ಸಂಸ್ಥೆ ಮಾಲೀಕರಿಗೆ ಬಿಬಿಎಂಪಿಯಿಂದ ನೋಟಿಸ್‌

Construction of College on Agricultural Land Without License in Bengaluru grg
Author
First Published May 30, 2023, 7:59 AM IST

ಪೀಣ್ಯದಾಸರಹಳ್ಳಿ(ಮೇ.30):  ಬಿಬಿಎಂಪಿ ವಾರ್ಡ್‌ 14ರ ವ್ಯಾಪ್ತಿಯ ಸಿಡೇದಹಳ್ಳಿ ಸರ್ವೆ ನಂ.25 ಕೃಷಿ ಪ್ರದೇಶದಲ್ಲಿ ಬಿಬಿಎಂಪಿ ಸೇರಿದಂತೆ ಯಾವುದೇ ರೀತಿಯ ಸ್ಥಳೀಯ ಸಂಸ್ಥೆಗಳ ಅನುಮತಿಯಾಗಲಿ, ಕಟ್ಟಡ ನಕ್ಷೆ ಮಂಜೂರಾತಿಯಾಗಲಿ ಪಡೆಯ ದೆ ಅನಧಿಕೃತವಾಗಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಏಳು ಅಂತಸ್ತಿನ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದೆ. ತಕ್ಷಣವೇ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವಂತೆ ಬಿಬಿಎಂಪಿ ಅಧಿಕಾರಿಗಳು ಸೌಂದರ್ಯ ಶಿಕ್ಷಣ ಸಂಸ್ಥೆ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ವಿವರ ನೀಡಿದ ಬಿಬಿಎಂಪಿ ಅಸಿಸ್ಟೆಂಟ್‌ ಎಕ್ಸಿಕ್ಯುಟಿವ್‌ ಇಂಜಿನಿಯರ್‌ ರಂಗನಾಥ್‌, ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಬಂದಿರುವ ದೂರುಗಳನ್ನಾಧರಿಸಿ ಸೌಂದರ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪಿ.ಮಂಜಪ್ಪ ಅವರಿಗೆ ನೋಟಿಸ್‌ ನೀಡಿದ್ದು, ನೋಟಿಸ್‌ ನೀಡಿದ ಏಳು ದಿನಗಳೊಳಗಾಗಿ ಕಟ್ಟಡ ನಕ್ಷೆ ಮಂಜೂರಾತಿ ಸೇರಿದಂತೆ ಸಂಬಂಧಿಸಿದ ದಾಖಲೆಗಳನ್ನು ಬಿಬಿಎಂಪಿ ಕಚೇರಿಗೆ ಸಲ್ಲಿಸ ಬೇಕು, ಇಲ್ಲದಿದ್ದಲ್ಲಿ ಏಳು ದಿನಗಳ ನಂತರ ಅಧಿಕಾರಿಗಳೇ ಸ್ಥಳಕ್ಕೆ ತೆರಳಿ ಸ್ಥಳ ಮಹಜರು ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

DK Shivakumar: 6 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಡಿಸಿಎಂ ಡಿಕೆಶಿ

ಸದ್ಯ ಕಾಲೇಜು ನಿರ್ಮಾಣ ಮಾಡುತ್ತಿರುವ ಜಾಗ ಕೃಷಿ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿದೆ. ಆದರೆ, ಸದ್ಯ ಈ ಜಾಗದಲ್ಲಿ ಬೃಹತ್‌ ಕಾಲೇಜು ಕಟ್ಟಡ ನಿರ್ಮಾಣ ಮಾಡುತ್ತಿರುವುದು ಅಕ್ರಮವಾಗಿದೆ. ಅಲ್ಲದೆ ಈ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಸುಮಾರು ಮೂರು ವರ್ಷಗಳಿಗೂ ಹೆಚ್ಚು ಸಮಯದಿಂದ ಈ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ಸಹ ಬಿಬಿಎಂಪಿ ಅಧಿ ಕಾರಿಗಳು ಕ್ರಮಕ್ಕೆ ಮುಂದಾಗದಿರುವುದನ್ನು ನೋಡಿದರೆ ಅಧಿಕಾರಿಗಳು ಶಾಮೀಲಾಗಿರುವ ಅನುಮಾನಗಳು ಗೋಚರಿಸುತ್ತಿವೆ.

ಇನ್ನೊಂದೆಡೆ ನಿರ್ಮಾಣ ಹಂತದ ಕಟ್ಟಡವಾಗಿದ್ದರೂ ಸಹ ತಳ ಮಹಡಿಯಲ್ಲಿ ಕಾಲೇಜು ಮಕ್ಕಳಿಗೆ ಪಾಠ ಪ್ರವಚನ ನಡೆಯುತ್ತಲೇ ಇದೆ. ಇತ್ತ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೂ ಸಹ ಯಾವುದೇ ಮುಂಜಾಗೃತಾ ಕ್ರಮಗಳನ್ನೂ ಸಹ ತೆಗೆದುಕೊಂಡಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಯಾವುದೇ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದೆ ಸಂಸ್ಥೆಯು ತರಗತಿಗಳನ್ನು ನಡೆಸುತ್ತಿದ್ದು, ಪ್ರಾಣಾಪಾಯಗಳಾದಲ್ಲಿ ಕ್ರಮ ಜರುಗಿಸದ ಬಿಬಿಎಂಪಿ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಅಂತ ದೂರುದಾರ ಭರತ್‌ ಸೌಂದರ್ಯ ಎಂಬುವರು ತಿಳಿಸಿದ್ದಾರೆ.  

Follow Us:
Download App:
  • android
  • ios