Asianet Suvarna News Asianet Suvarna News

ಅಂತರ್ಜಾತಿ ವಿವಾಹವಾಗಿದ್ದ ಹಿಂದೂ ಮಹಿಳೆ ಶವ ಅನಾಥ: ಹೆಗಲು ಕೊಟ್ಟ ಮುಸ್ಲಿಂ ಯುವಕರು

ಹಿಂದೂ ಸಂಪ್ರದಾಯದಂತೆ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು
ಧರ್ಮ ದಂಗಲ್‌, ಹಲಾಲ್‌ ಕಟ್‌, ಹಿಜಾಬ್‌ ಸಂಘರ್ಷದ ನಡುವೆ ಧರ್ಮ ಸಹಿಷ್ಣುತೆ ಕಾರ್ಯ
ಮಾನವೀಯತೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಥಳೀಯರು 

Inter caste marriage Hindu woman dead body orphan Muslim youths shouldered sat
Author
First Published Feb 14, 2023, 8:22 PM IST

ವರದಿ - ಪುಟ್ಟರಾಜು. ಆರ್. ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಾಮರಾಜನಗರ (ಫೆ.14): ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಧರ್ಮ ದಂಗಲ್, ವ್ಯಾಪಾರ ಬಹಿಷ್ಕಾರ ಹೀಗೆ ಕೋಮು ಸೌಹಾರ್ದ ಕದಡುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಚಾಮರಾಜನಗರ ಜಿಲ್ಲೆಯಲ್ಲೊಂದು ಸರ್ವ ಧರ್ಮ ಸಹಿಷ್ಣುತೆಯ ಮಾನವೀಯ ಕಾರ್ಯ ನಡೆದಿದೆ. ಗ್ರಾಮದಲ್ಲಿ ಸಾವನ್ನಪ್ಪಿದ್ದ ಹಿಂದು ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಮುಸ್ಲಿಂ ಯುವಕರು ಹೆಗಲು ಕೊಟ್ಟು ಅಂತ್ಯಕ್ರಿಯೆಗೆ ನೆರವಾಗಿದ್ದಾರೆ. 

ರಾಜ್ಯದಲ್ಲಿ ಹಿಜಾಬ್, ಧರ್ಮ ಧಂಗಲ್, ದೇವಸ್ಥಾನಗಳ ಆವರಣ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರ ಬಹಿಷ್ಕಾರ, ಅಲಾಲ್ ಕಟ್ ಸೇರಿ ಅನೇಕ ಹಿಂದು ಮತ್ತು ಮುಸ್ಲಿಂ ಧರ್ಮಗಳಲ್ಲಿ ಶಾಂತಿ ಕದಡುವಂತಹ ವಿಚಾರಗಳು ವ್ಯಾಪಕ ಮುನ್ನೆಲೆಗೆ ಬರುತ್ತಿವೆ. ಚಾಮರಾಜನಗರದ ಅಹಮದ್ ಬಡಾವಣೆಯಲ್ಲಿ ನಂಜಮ್ಮ ಎಂಬ ಹಿಂದೂ  ವೃದ್ಧೆ ವಯೋಸಹಜ ಅನಾರೋಗ್ಯ ದಿಂದ ಮೃತಪಟ್ಟಿದ್ದರು. ಈ ವೇಳೆ ಹತ್ತಿರದ ಸಂಬಂಧಿಕರಿಗೆ ವಿಚಾರ ಮುಟ್ಟಿಸಿದಾಗ ಅವರು ಬಂದು ನೋಡಿಕೊಂಡು ಮರಳಿ ಹೋಗಿಬಿಟ್ಟರು. ಆದರೆ ಯಾರೂ ಸಹ ಈಕೆಯ  ಶವ ಸಂಸ್ಕಾರ ನಡೆಸಲು  ಮುಂದಾಗಲಿಲ್ಲ. ಈ ವಿಷಯ ತಿಳಿದ ಅಹಮದ್ ಬಡಾವಣೆಯ ಮುಸ್ಲಿಂ ಯುವಕರು ಕುಟುಂಬದ ನೆರವಿಗೆ ದಾವಿಸಿ ಸ್ಮಶಾನಕ್ಕೆ ನಂಜಮ್ಮನ ಶವ ಹೊತ್ತು ಸಾಗಿಸಿ ಹಿಂದೂ ಸಂಪ್ರದಾಯದಂತೆ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದೇ ನಮ್ಮ ಭಾರತ: ಹಿಂದೂ ಮಹಿಳೆಯ ಅಂತ್ಯಕ್ರಿಯೆ ಮಾಡಿದ ಮುಸ್ಲಿಂ ಯುವಕರು

ಕುಟುಂಬದಿಂದ ದೂರವಾಗಿದ್ದ ನಂಜಮ್ಮ: ನಂಜಮ್ಮನ ಶವಸಂಸ್ಕಾರಕ್ಕೆ ಸಂಬಂಧಿಕರು ಬಾರದೆ ಇರಲು ಕಾರಣವೂ ಇದೆ. ನಂಜಮ್ಮ ಅಂತರ್ಜಾತಿ ವಿವಾಹವಾಗಿದ್ದರು. ಹಾಗಾಗಿ ಇವರ ಬಂಧು ಬಳಗದವರೆಲ್ಲಾ ದೂರ ಆಗಿದ್ದರು. ಹಲವು ವರ್ಷಗಳ ಹಿಂದೆ ಈಕೆಯ ಪತಿ ತೀರಿಕೊಂಡಿದ್ದರು. ಹಾಗಾಗಿ ನಂಜಮ್ಮ ತಮ್ಮ ಮಗಳೊಂದಿಗೆ ಚಾಮರಾಜನಗರದ ಅಹಮದ್ ಬಡಾವಣೆಯಲ್ಲಿ ಬಾಡಿಗೆ ಶೆಡ್‌ನಲ್ಲಿ ವಾಸವಿದ್ದರು. ನಂತರದ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದ ನಂಜಮ್ಮಳಿಗೆ ಔಷದ ಉಪಾಚಾರಕ್ಕೆ ಬಡಾವಣೆಯ ಅಕ್ಕ ಪಕ್ಕದ ಮುಸ್ಲಿಂ ಕುಟುಂಬಗಳು ಹಣದ ನೆರವನ್ನು ಸಹ ನೀಡಿದ್ದರು.

ಅಂತ್ಯಕ್ರಿಯೆ ನೆರವೇರಿಸಲು ಬಾರದ ಕುಟುಂಬಸ್ಥರು: ನಂಜಮ್ಮ ತಮ್ಮ ವಯಸ್ಕ ಹಂತದಲ್ಲಿ ಪ್ರೀತಿಸಿ ಅಂತರ ಜಾತಿ ವಿವಾಹವಾಗಿದ್ದರು ಎಂಬ ಒಂದೇ ಕಾರಣಕ್ಕೆ ಅವರ ಕುಟುಂಬ ಸದಸ್ಯರು ಹಾಗೂ ಗಂಡನ ಮನೆಯವರು ಯಾರೊಬ್ಬರೂ ಅಂತ್ಯಕ್ರಿಯೆ ನೆರವೇರಿಸಲು ಮುಂದೆ ಬರಲಿಲ್ಲ. ಈ ವೇಳೆ ಮೊಮ್ಮಗಳ ಪತಿಯನ್ನು ಹೊರತುಪಡಿಸಿ ಮೃತದೇಹಕ್ಕೆ ಹೆಗಲು ಕೊಡಲು ಹಾಗೂ ಅಂತ್ಯಕ್ರಿಯೆ ನಡೆಸಲು ಯಾರೂ ಮುಂದೆ ಬರಲಿಲ್ಲ. ಈ ವಿಷಯವನ್ನು ತಿಳಿದ ಸ್ಥಳೀಯ ಮುಸ್ಲಿಂ ಯುವಕರು ತಾವೇ ಹೋಗಿ ಶವಸಂಸ್ಕಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ತಂದಿದ್ದಾರೆ. ನಂತರ ಹಿಂದೂ ರುದ್ರಭೂಮಿಯವರೆಗೆ ಶವಕ್ಕೆ ಹೆಗಲುಕೊಟ್ಟು ಸಾಗಿದ್ದಾರೆ. ಅಲ್ಲಿ ಹಿಂದೂ ಸಂಪ್ರದಾಯದ ವಿಧಿ- ವಿಧಾನಗಳನ್ನು ಮಾಡಿ ನಂತರ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಕ್ಕೆ ನೆರವಾಗಿದ್ದಾರೆ.

ನೇತ್ರಾವತಿಯಿಂದ ಭಜರಂಗದಳ ಮುಖಂಡನ ಶವ ಮೇಲಕ್ಕೆತ್ತಿದ ಮುಸ್ಲಿಂ ಯುವಕರು, ಕರಾವಳಿಯ ಸೌಹಾರ್ದತೆ ಬಗ್ಗೆ ಚರ್ಚೆ

ಕೋಮು ಸಂಘರ್ಷ, ಧರ್ಮದಂಗಲ್‌ನಂತಹ ಘಟನೆಗಳಿಂದ ಮನುಷ್ಯರ ನಡುವೆಯೇ ಕಂದಕ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಯುವಕರು ಎಲ್ಲರ ಮೈಯಲ್ಲು ಹರಿಯುತ್ತಿರುವುದು ಕೆಂಪು ರಕ್ತವೇ. ನಾವೆಲ್ಲಾ ಮನುಷ್ಯರು ಎಂಬ ಭಾವನೆಯಿಂದ ಹಿಂದೂ ಮಹಿಳೆ ಅಂತ್ಯ ಸಂಸ್ಕಾರ ನೆರವೇರಿಸಿ ಸಾಮರಸ್ಯ ಮೆರೆದಿದ್ದಾರೆ.

Follow Us:
Download App:
  • android
  • ios