Tumakur : ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಲು ಸೂಚನೆ
ಮಿಷನ್ ಇಂದ್ರಧನುಷ್ 5 ಅಭಿಯಾನದಲ್ಲಿ ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಲು ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು : ಮಿಷನ್ ಇಂದ್ರಧನುಷ್ 5 ಅಭಿಯಾನದಲ್ಲಿ ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಲು ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಿಷನ್ ಇಂದ್ರಧನುಷ್ 5.0-ದಡಾರ-ರುಬೆಲ್ಲಾ ಲಸಿಕಾಕರಣದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಆಗಸ್ಟ್, ಸೆಪ್ಟೆಂಬರ್ ನಲ್ಲಿ ಮೊದಲ ಹಾಗೂ 2ನೇ ಸುತ್ತಿನ ಲಸಿಕಾಕರಣದಲ್ಲಿ ಶೇ.100 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿರುವಂತೆ 3ನೇ ಸುತ್ತಿನಲ್ಲೂ ಗುರಿ ಮೀರಿ ಸಾಧಿಸಬೇಕೆಂದು ನಿರ್ದೇಶನ ನೀಡಿದರು.
ಈ ಲಸಿಕಾಕರಣದಲ್ಲಿ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳು, ಗರ್ಭಿಣಿ ಸ್ತ್ರೀಯರು ಲಸಿಕೆಯಿಂದ ವಂಚಿತರಾಗದಂತೆ ನಿಗಾವಹಿಸಬೇಕು. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಅಂಗನವಾಡಿಗಳಲ್ಲಿ ಉಚಿತ ಲಸಿಕೆ ನೀಡುವ ಬಗ್ಗೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಟಾಂಟಾಂ ಮಾಡಲು ಕ್ರಮವಹಿಸಬೇಕು.
ಇಂಧ್ರಧನುಶ್ ಲಸಿಕೆ ಹಾಕಿ ಮಗುವಿಗೆ 'ತೇಜಸ್ವಿ ಸೂರ್ಯ' ಎಂದು ನಾಮಕರಣ ಮಾಡಿದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ!
ಕಟ್ಟಡ ನಿರ್ಮಾಣ ಸ್ಥಳ, ತೋಟದ ಮನೆ, ವಲಸಿಗರ ಮನೆ ಅಪಾಯದಂಚಿನ ಪ್ರದೇಶಗಳಿಗೆ ಭೇಟಿ ನೀಡಿ ಗರ್ಭಿಣಿ ಮತ್ತು ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಸೂಚಿಸಿದರು.
ಹೊಸದಾಗಿ ಮಕ್ಕಳು ಶಾಲೆಗೆ ನೋಂದಣಿಯಾಗುವ ವೇಳೆ ಈ ಹಿಂದೆ ಪಡೆದಿರುವ ಲಸಿಕೆಗಳ ಬಗ್ಗೆ ಪರಿಶೀಲಿಸಿ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರನ್ನು ಪ್ರೇರೇಪಿಸಬೇಕು. ರೈಲ್ವೆ ಹಳಿಗಳ ಪಕ್ಕದಲ್ಲಿ ವಾಸವಿರುವ ವಲಸೆ ಗರ್ಭಿಣಿ ಮತ್ತು 5 ವರ್ಷದೊಳಗಿನ ಮಕ್ಕಳಿಗೂ ತಪ್ಪದೆ ಲಸಿಕೆ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಸಿ.ಆರ್.ಮೋಹನ್ ಮಾತನಾಡಿ, ೯ರಿಂದ ೧೪ರವರೆಗೆ ಜಿಲ್ಲಾದ್ಯಂತ ಹಮ್ಮಿಕೊಂಡಿರುವ 3ನೇ ಸುತ್ತಿನ ಇಂದ್ರಧನುಷ್ ಲಸಿಕಾಕರಣದಲ್ಲಿ 0-2 ವರ್ಷದೊಳಗಿನ 3309, 2-5 ವರ್ಷದೊಳಗಿನ 56 ಹಾಗೂ 719 ಗರ್ಭಿಣಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 642 ಲಸಿಕಾ ಸ್ಥಳ ತೆರೆಯಲು ಕ್ರಮವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇಂದ್ರಧನುಷ್ ಅಭಿಯಾನ ಕುರಿತು ಆರೋಗ್ಯ ಇಲಾಖೆ ಹೊರತಂದಿರುವ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ(ಪ್ರಭಾರ) ಡಾ. ಚಂದ್ರಶೇಖರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಮೇಗೌಡ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ತಾಲೂಕು ಆರೋಗ್ಯಾಧಿಕಾರಿಗಳು ಇದ್ದರು.