ಕೊರೋನಾ 3ನೇ ಅಲೆ ಆತಂಕದ ನಡುವೆ ಸಾಂಕ್ರಾಮಿಕ ರೋಗ
* ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ತೀವ್ರ ಜ್ವರ, ಪಾಲಕರಲ್ಲಿ ಹೆಚ್ಚಿದ ಭೀತಿ
* ರಾಯಚೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘೀ ಪ್ರಕರಣ
* ಅಸ್ವಚ್ಛತೆ ಹೆಚ್ಚಾಗಿರುವುದು ಈ ದುಸ್ಥಿತಿಗೆ ಕಾರಣ
ರಾಮಕೃಷ್ಣ ದಾಸರಿ
ರಾಯಚೂರು(ಸೆ.20): ಕೊರೋನಾ ಮೂರನೇ ಅಲೆಯ ಆತಂಕದ ಸಮಯದಲ್ಲಿಯೇ ಜಿಲ್ಲೆಯಲ್ಲಿ ಡೆಂಘೀ, ಮಲೇರಿಯಾ ಸೇರಿ ಇತರೆ ಸಾಂಕ್ರಾಮಿಕ ಕಾಯಿಲೆಗಳ ಸಂಖ್ಯೆಯು ಹೆಚ್ಚಾಗುತ್ತಿರುವುದು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಗೆ ಹೊಸ ತಲೆನೋವನ್ನುಂಟು ಮಾಡಿದೆ.
ಕಳೆದ ಇಪ್ಪತ್ತು ದಿನಗಳಿಂದ ನಗರ, ಪಟ್ಟಣ, ಗ್ರಾಮೀಣ ಪ್ರದೇಶದ ಜನರಲ್ಲಿ ಅದರಲ್ಲಿಯೂ ಮುಖ್ಯವಾಗಿ ಮಕ್ಕಳಲ್ಲಿ ತೀವ್ರ ಜ್ವರ, ಡೆಂಘೀ, ನ್ಯೂಮೋನಿಯಾ, ಕೆಮ್ಮು, ಆಯಾಸ, ನೆಗಡಿ ಸೇರಿ ಇತರೆ ಸಾಂಕ್ರಾಮಿಕ ರೋಗಗಳು ಪತ್ತೆಯಾಗುತ್ತಿವೆ. ರಾಯಚೂರು, ಮಾನ್ವಿ, ದೇವದುರ್ಗ ಮತ್ತು ಲಿಂಗಸುಗೂರು ಪ್ರದೇಶಗಳಲ್ಲಿ ಸಾಂಕ್ರಾಮಿಕ ಕಾಯಿಲೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ತಿಂಗಳಿನಿಂದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸುಮಾರು 610ಕ್ಕೂ ಹೆಚ್ಚು ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದರಿಂದ ಕೊರೋನಾ ಮೂರನೇ ಅಲೆ ಆರಂಭವಾಗಿದೆಯೇ ಎನ್ನುವ ಆತಂಕವು ಸೃಷ್ಟಿಯಾಗಿದೆ. ರಿಮ್ಸ್‌ನಲ್ಲಿ ದಾಖಲಾದ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಕಾಲಕಾಲಕ್ಕೆ ಕೊರೋನಾ ಪರೀಕ್ಷೆಗಳನ್ನು ನಡೆಸುತ್ತಿದ್ದು, ಇಲ್ಲಿವರೆಗೆ ಯಾವುದೇ ಪಾಸಿಟಿವ್ ಪ್ರಕರಣವು ಪತ್ತೆಯಾಗದಿರುವುದು ಕೊಂಚ ನೆಮ್ಮದಿ ನೀಡಿದೆ.
ರಾಯಚೂರಲ್ಲಿ ಆಸ್ಪತ್ರೆಗಳೆಲ್ಲ ಫುಲ್: ಡೆಂಗ್ಯೂ ಜ್ವರಕ್ಕೆ ಮತ್ತೊಂದು ಮಗು ಬಲಿ
ಇಬ್ಬರು ಬಲಿ, ಡೆಂಘೀ ಶಂಕೆ:
ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲೂಕು ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಾಯಿಲೆಯಿಂದ ದಾಖಲಾಗುತ್ತಿರುವವರ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಶಂಕಿತ ಡೆಂಘೀ ಕಾಯಿಲೆಯಿಂದ ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶಂಕಿತ ಡೆಂಘೀ ಕಾಯಿಲೆಗೆ ತುತ್ತಾಗಿದ್ದ ಮಾನ್ವಿ ಪಟ್ಟಣದ 5 ವರ್ಷದ ಬಾಲಕ ಸಿದ್ಧಾರ್ಥ ಮಂಜುನಾಥ ಇತ್ತೀಚೆಗೆ ಮೃತಪಟ್ಟಿದ್ದನು. ಅದೇ ರೀತಿ ಸಿಂಧನೂರು ನಗರದ ಮಹಿಬೂಬಿಯಾ ಕಾಲೋನಿಯ 6 ವರ್ಷದ ಬಾಲಕಿ ಸೋನು ಸಹ ಡೆಂಘೀ ಜ್ವರದಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಅದರ ಜೊತೆಗೆ ಈಗಾಗಲೇ ಜಿಲ್ಲೆಯಾದ್ಯಂತ 970 ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ 40ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ.
ರಾಯಚೂರು ಜಿಲ್ಲೆಯಲ್ಲಿ ಸದಾ ಬಿಸಿಲಿನ ತಾಪವೇ ಹೆಚ್ಚಾಗಿರುವುದು ಸಾಮಾನ್ಯ. ಆದರೆ ಕಳೆದ ತಿಂಗಳಿನಿಂದ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಹೆಚ್ಚಾಗಿದೆ. ವಾತಾವರಣದಲ್ಲಿ ಉಂಟಾದ ಬದಲಾವಣೆ, ಸ್ವಚ್ಛತೆ ಕಾಪಾಡದೇ ಇರುವುದು, ಸೊಳ್ಳೆಗಳ ಉತ್ಪತಿ ಹೆಚ್ಚಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳು ದಾಖಲಾಗುತ್ತಿವೆ. ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಅಸ್ವಚ್ಛತೆ ಹೆಚ್ಚಾಗಿರುವುದು ಈ ದುಸ್ಥಿತಿಗೆ ಕಾರಣವಾಗಿದೆ.
ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದು, ಹವಾಮಾನದಲ್ಲಿ ಬದಲಾವಣೆಯಾಗಿರುವುದರಿಂದ ತೀವ್ರ ಜ್ವರದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಜ್ವರ ಕಾಣಿಸಿಕೊಂಡ ತಕ್ಷಣ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು, ಡೆಂಘೀ, ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಾದ್ಯಂತ ಅಗತ್ಯ ಜಾಗೃತಿ ಮೂಡಿಸಲು ಕ್ರಮವಹಿಸಲಾಗಿದೆ ಎಂದು ರಾಯಚೂರು ಡಿಎಚ್‌ಒ ಡಾ.ನಾಗರಾಜ ತಿಳಿಸಿದ್ದಾರೆ.