ಬಿಬಿಎಂಪಿಯ ಎಲ್ಲ 243 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಬೆಂಗಳೂರು (ಮೇ.25): ಬಿಬಿಎಂಪಿಯ ಎಲ್ಲ 243 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198ರಿಂದ 243ಕ್ಕೆ ಹೆಚ್ಚಾಗಿವೆ. ಹೀಗಾಗಿ, ಇಂದಿರಾ ಕ್ಯಾಂಟೀನ್‌ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜತೆಗೆ ಕಳೆದ ಮೂರ್ನಾಲ್ಕು ವರ್ಷದಿಂದ ಇಂದಿರಾ ಕ್ಯಾಂಟೀನ್‌ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಿಲ್ಲ. 

ಈ ಅನುದಾನ ನೀಡಬೇಕು. ಹೊಸದಾಗಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಕಟ್ಟಡ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಒದಗಿಸಲು ಹಾಗೂ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಮರು ಆರಂಭಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು. ಇಂದಿರಾ ಕ್ಯಾಂಟೀನ್‌ನಲ್ಲಿನ ಆಹಾರದ ಗುಣಮಟ್ಟಹೆಚ್ಚಿಸುವ ಮೂಲಕ ಇನ್ನಷ್ಟುಜನರನ್ನು ಕ್ಯಾಂಟೀನ್‌ ಕಡೆ ಸೆಳೆಯಲು ಹೆಚ್ಚಿನ ಮೊತ್ತದ ಅನುದಾನ ಕೇಳಲಾಗುವುದು. ಆದರೆ, ಆಹಾರದ ದರ ಹೆಚ್ಚಿಸುವ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸದಸ್ಯರಲ್ಲದವರಿಗೆ ಸೈಟ್‌: 7 ಜನರಿಗೆ 3 ತಿಂಗಳು ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್‌

ಅಡುಗೆ ಮನೆ ದುರಸ್ತಿ: ಇಂದಿರಾ ಕ್ಯಾಂಟೀನ್‌ ಅಡುಗೆ ಮನೆಗಳನ್ನು ಶೀಘ್ರದಲ್ಲಿ ದುರಸ್ತಿ ಪಡಿಸಲಾಗುವುದು. ಇಂದಿರಾ ಕ್ಯಾಂಟೀನ್‌ನಲ್ಲಿ ನೀಡಲಾಗುವ ಆಹಾರದ ಪ್ರಮಾಣ ಹೆಚ್ಚಳದ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈವರೆಗೆ 10 ಮೊಬೈಲ್‌ ಕ್ಯಾಂಟೀನ್‌ ಮುಚ್ಚಲಾಗಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ ಜಯರಾಮ್‌ ರಾಯಪುರ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟಿನ್‌ ನಿರಿಕ್ಷೆಯಲ್ಲಿ ಕಾರ್ಮಿಕರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಬಡವರ ಪರ ಇದ್ದ ಯೋಜನೆಗಳಿಗೆ ಮರುಜೀವ ಬಂದಂತಾಗಿದೆ. ಈ ಪೈಕಿ ಇಂದಿರಾ ಕ್ಯಾಂಟಿನ್‌ ಸಹ ಒಂದಾಗಿದ್ದು ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಮರುಜೀವ ಬಂದು ಬಡವರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಜನ ಇದ್ದಾರೆ. ಈ ಹಿಂದೆ ರಾಜ್ಯದಲ್ಲಿ ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 2013ರಲ್ಲಿ ಬಡವರಿಗಾಗಿ ಪ್ರಾರಂಭಿಸಲಾಗಿದ್ದ ಇಂದಿರಾ ಕ್ಯಾಂಟೀನ್‌ 2018ರವರೆಗೆ ಚಾಲನೆಯಲ್ಲಿತ್ತು. 

ನಂತರದಲ್ಲಿ ಸರ್ಕಾರ ಬದಲಾದ ಸಂದರ್ಭದಲ್ಲಿ ಹಲವು ಕಾರಣಗಳಿಂದ ಇಂದಿರಾ ಕ್ಯಾಂಟಿನ್‌ ಮುಚ್ಚಲಾಗಿತ್ತು. ಇದರಿಂದ ಬಹಳಷ್ಟುಕಡು ಬಡವರಿಗೆ ಭಾರಿ ನಿರಾಸೆ ಉಂಟಾಗಿತ್ತು. ಬಹಳಷ್ಟುಮಂದಿ ನಿರ್ಗತಿಕರಿಗೆ ಇಂದಿರಾ ಕ್ಯಾಂಟೀನ್‌ನಿಂದ ಅತಿ ಕಡಿಮೆ ಬೆಲೆಯಲ್ಲಿ ಮೂರು ಹೊತ್ತು ಹೊಟ್ಟೆತುಂಬಿಸಿಕೊಳ್ಳುತ್ತಿದ್ದರು. ನಗರದ ಹಳೆ ಬಸ್‌ ನಿಲ್ದಾಣದಲ್ಲಿ ಈ ಹಿಂದೆ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟಿನ್‌ ನಿಂದ ಪೌರಕಾರ್ಮಿಕರು, ಕೂಲಿ ಕಾರ್ಮಿಕರು. ಕಡು ಬಡವರುಗಳಿಗೆ ಅನ್ನಪೂರ್ಣೆಯಾಗಿದ್ದ ಇಂದಿರಾ ಕ್ಯಾಂಟಿನ್‌ ಮುಚ್ಚಿದ್ದರಿಂದ ಬಹಳಷ್ಟುಮಂದಿ ಬಡವರು ಮತ್ತು ಕಾರ್ಮಿಕರಿಗೆ ತೊಂದರೆಯಾಗಿತು. 

ಬಿಜೆಪಿ ಸರ್ಕಾರದ ಗಂಗಾ ಕಲ್ಯಾಣ ಅಕ್ರಮ ಬಗ್ಗೆ ಕೇಸ್‌: ಪ್ರಕರಣ ಸಿಐಡಿಗೆ ಒಪ್ಪಿಸಲು ನಿರ್ಧಾರ

ಕೇವಲ 10 ರಿಂದ 15 ರುಪಾಯಿಗಳಲ್ಲಿ ಹೊಟ್ಟೆತುಂಬಿಸಿಕೊಳ್ಳುವ ಅವಕಾಶ ತಪ್ಪಿಹೋಗಿತ್ತು. ಆದರೆ ಈಗ ಮತ್ತೆ ಕಾಂಗ್ರೆಸ್‌ ಸರ್ಕಾರ ಬಂದಿರುವ ಕಾರಣ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸುವರೆ ಎಂದು ಚಾತಕದ ಪಕ್ಷಿಯಂತೆ ಕಾಯುತ್ತಿದ್ದಾರೆ. ಮುಚ್ಚಿರುವ ಇಂದಿರಾ ಕ್ಯಾಂಟೀನ್‌ ಬಾಗಿಲು ತೆರೆಯಲು ಸಿದ್ಧತೆ ಮಾಡಲಾಗುತ್ತಿದೆ ಎನ್ನಲಾಗಿದೆ. ಸರ್ಕಾರವು ತನ್ನ ಹಿಂದಿನ ಜನಪ್ರಿಯಾ ಹಾಗೂ ಜನಪರ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಹೊಸ ಸ್ಪರ್ಶ ನೀಡಲಿದೆ ಎನ್ನಲಾಗಿದೆ.