Asianet Suvarna News Asianet Suvarna News

ಸದಸ್ಯರಲ್ಲದವರಿಗೆ ಸೈಟ್‌: 7 ಜನರಿಗೆ 3 ತಿಂಗಳು ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್‌

ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿ ಸದಸ್ಯರಲ್ಲದ ವ್ಯಕ್ತಿಗಳಿಗೂ ಸೈಟು ಹಂಚಿಕೆ ಮಾಡಿದ್ದ ಆರೋಪ ಸಂಬಂಧ ನಗರದ ‘ಏರ್‌ಕ್ರಾಫ್ಟ್‌ ಎಂಪ್ಲಾಯಿಸ್‌ ಹೌಸ್‌ ಬಿಲ್ಡಿಂಗ್‌ ಕೋ-ಆಪರೇಟಿವ್‌ ಸೊಸೈಟಿ ಲಿಮಿಟೆಡ್‌’ ಅಧ್ಯಕ್ಷ ಹಾಗೂ ಆರು ಮಂದಿ ನಿರ್ದೇಶಕರಿಗೆ ತಲಾ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ. 

Site for non members High Court sentenced 7 people to 3 months in jail gvd
Author
First Published May 25, 2023, 6:59 AM IST

ಬೆಂಗಳೂರು (ಮೇ.25): ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿ ಸದಸ್ಯರಲ್ಲದ ವ್ಯಕ್ತಿಗಳಿಗೂ ಸೈಟು ಹಂಚಿಕೆ ಮಾಡಿದ್ದ ಆರೋಪ ಸಂಬಂಧ ನಗರದ ‘ಏರ್‌ಕ್ರಾಫ್ಟ್‌ ಎಂಪ್ಲಾಯಿಸ್‌ ಹೌಸ್‌ ಬಿಲ್ಡಿಂಗ್‌ ಕೋ-ಆಪರೇಟಿವ್‌ ಸೊಸೈಟಿ ಲಿಮಿಟೆಡ್‌’ ಅಧ್ಯಕ್ಷ ಹಾಗೂ ಆರು ಮಂದಿ ನಿರ್ದೇಶಕರಿಗೆ ತಲಾ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ. ಸೊಸೈಟಿಯ ಸದಸ್ಯರಾದ ಎಂ.ಶಶಿಧರನ್‌ ಹಾಗೂ ವಿ.ಮುನಿಯಪ್ಪ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಹಾಗೂ ಎಂ.ಜಿ.ಉಮಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸೊಸೈಟಿಯ ಅಧ್ಯಕ್ಷ ಕೆ.ಭೂಪಾಲ, ನಿರ್ದೇಶಕರಾದ ಎಸ್‌.ಎನ್‌.ಶಿವಮೂರ್ತಿ, ಸೋಮಣ್ಣ, ಎಸ್‌.ಸದಾಶಿವಪ್ಪ, ಕೆ.ಸಿ.ಸರಳಾ, ಡಿ.ಶ್ರೀನಿವಾಸ್‌ ಹಾಗೂ ಸಿ.ಎಚ್‌.ಶಂಕರ್‌ ಅವರನ್ನು ದೋಷಿಗಳೆಂದು ತೀರ್ಮಾನಿಸಿರುವ ಹೈಕೋರ್ಟ್‌, ಎಲ್ಲರಿಗೂ ಮೂರು ತಿಂಗಳು ಸಾಧಾರಣ ಜೈಲು ಶಿಕ್ಷೆ ಹಾಗೂ ತಲಾ .2 ಸಾವಿರ ದಂಡ ವಿಧಿಸಿದೆ. ಒಂದೊಮ್ಮೆ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 15 ದಿನಗಳ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಯುವತಿಗೆ ಲಾಂಗ್‌ ತೋರಿಸಿ ಬೆದರಿಕೆ ಪ್ರಕರಣ: ಬಂಧನ ವೇಳೆ 3ನೇ ಮಹಡಿಯಿಂದ ಬಿದ್ದು ಆರೋಪಿ ಸಾವು

ಹೈಕೋರ್ಟ್‌ ಏಕಸದಸ್ಯ ಪೀಠವು 2017ರಲ್ಲಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಿ, ಎರಡು ನಿವೇಶನಗಳನ್ನು ಸೊಸೈಟಿಯ ಸದಸ್ಯರಲ್ಲದ ಮೂರನೇ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ. ಪ್ರಕರಣದ ಏಳೂ ಆರೋಪಿಗಳ ವಿರುದ್ಧದ ಆರೋಪಗಳು ಸಂಶಯಾತೀತವಾಗಿ ಸಾಬೀತಾಗಿದೆ. ಹಾಗಾಗಿ ಅವರಿಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ: ಸೊಸೈಟಿಯ ಸದಸ್ಯರು ಮನೆ ನಿರ್ಮಿಸಲು ಜಮೀನು ವಶಪಡಿಸಿಕೊಂಡು ಬಡಾವಣೆ ನಿರ್ಮಿಸಿದೆ. ಆದರೆ, ಸೊಸೈಟಿ ಮತ್ತು ಸದಸ್ಯರ ನಡುವೆ ಕೆಲವೊಂದು ವಿವಾದ ಉಂಟಾಗಿ ಹೈಕೋರ್ಟ್‌ ಮೊರೆ ಹೋಗಲಾಗಿತ್ತು. ಏಕ ಸದಸ್ಯ ನ್ಯಾಯಪೀಠ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸಹಕಾರ ಇಲಾಖೆ ಜಂಟಿ ನಿರ್ದೇಶಕರಿಗೆ ನಿರ್ದೇಶಿಸಿತ್ತು. ಅದರಂತೆ ತನಿಖೆ ನಡೆಸಿದ್ದ ಜಂಟಿ ನಿರ್ದೇಶಕರು, ಸಂಬಂಧಪಟ್ಟವ್ಯಕ್ತಿಗಳ ವಿರುದ್ಧ 11 ಆರೋಪ ಹೊರಿಸಿ 2012ರಲ್ಲಿ ವರದಿ ಸಲ್ಲಿಸಿದ್ದರು.

ನಂತರ ಹಿರಿಯ ಸದಸ್ಯರ ಪಟ್ಟಿ(ಜೇಷ್ಠತಾ) ಸಿದ್ಧಪಡಿಸಬೇಕು. ಆ ಪಟ್ಟಿಸರ್ಕಾರದಿಂದ ಅನುಮೋದನೆ ಪಡೆಯುವವರೆಗೂ ನಿವೇಶನ ಹಂಚಿಕೆ ಕೋರಿ ಸದಸ್ಯರು ಸಲ್ಲಿಸಿದ ಯಾವುದೇ ಮನವಿ ಪರಿಗಣಿಸಬಾರದು ಎಂದು ಸೊಸೈಟಿಯ ಕಾರ್ಯಕಾರಿ ಸಮಿತಿಗೆ ಜಂಟಿ ನಿರ್ದೇಶಕರು 2013ರ ಏಪ್ರಿಲ್‌ನಲ್ಲಿ ನಿರ್ದೇಶಿಸಿದ್ದರು. ಆದರೆ ಜಂಟಿ ನಿರ್ದೇಶಕರ ನಿರ್ದೇಶನಗಳನ್ನು ಸೊಸೈಟಿ ಜಾರಿಗೊಳಿಸಿಲ್ಲ ಎಂದು ಆರೋಪಿಸಿ ಸೊಸೈಟಿಯ ಸದಸ್ಯರು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ರಾಜ್ಯ ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಅನುಮೋದಿಸಿದ ಸದ್ಯಸರ ಜೇಷ್ಠತಾ ಪಟ್ಟಿಅನುಸರಿಸದೆ ಯಾವುದೇ ನಿವೇಶನ ಹಂಚಿಕೆ ಮಾಡಬಾರದು ಮತ್ತು ಮಾರಾಟ ಕ್ರಯ ಮಾಡಿಕೊಡಬಾರದು ಎಂದು 2017ರ ಆ.7ರಂದು ಮಧ್ಯಂತರ ಆದೇಶ ಮಾಡಿತ್ತು.

ಬಿಜೆಪಿ ಸರ್ಕಾರದ ಗಂಗಾ ಕಲ್ಯಾಣ ಅಕ್ರಮ ಬಗ್ಗೆ ಕೇಸ್‌: ಪ್ರಕರಣ ಸಿಐಡಿಗೆ ಒಪ್ಪಿಸಲು ನಿರ್ಧಾರ

ಈ ಮಧ್ಯೆ 2020ರಲ್ಲಿ ಸೊಸೈಟಿಯ ಸದಸ್ಯರಾದ ಎಂ.ಶಶಿಧರನ್‌ ಮತ್ತು ವಿ.ಮುನಿಯಪ್ಪ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ, ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಅವರಿಂದ ಸದಸ್ಯರ ಜೇಷ್ಠತಾ ಪಟ್ಟಿಗೆ ಅನುಮೋದನೆ ಪಡೆಯದೆ ಸೊಸೈಟಿಯು ಸದಸ್ಯರಲ್ಲದ ಮೂರನೇ ವ್ಯಕ್ತಿಗಳಿಗೆ 2020ರ ಮಾ.3ರಂದು ಎರಡು ನಿವೇಶನ ಮಾರಾಟ ಮಾಡಿ ಕ್ರಯ ಮಾಡಿಕೊಡಲಾಗಿದೆ. ಆದ್ದರಿಂದ ಸಂಬಂಧಪಟ್ಟಅರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

Follow Us:
Download App:
  • android
  • ios