ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರು. ಮೊತ್ತದ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು (ಮೇ.25): ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರು. ಮೊತ್ತದ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ. 2021ರಲ್ಲಿ ನಡೆದಿರುವ ಈ ಗಂಗಾ ಕಲ್ಯಾಣ ಯೋಜನೆಯ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಗುರುವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಗಂಗಾ ಕಲ್ಯಾಣ ಯೋಜನೆಯ ಗುತ್ತಿಗೆ ಪಡೆದಿದ್ದ ಖಾಸಗಿ ಕಂಪನಿ ಅಕ್ರಮ ನಡೆಸಿದೆ ಎಂದು ಆರೋಪಿಸಿ ವಿಧಾನಸೌಧ ಠಾಣೆಗೆ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ವ್ಯವಸ್ಥಾಪಕರು ದೂರು ಸಲ್ಲಿಸಿದ್ದರು. ಅದರನ್ವಯ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೆ ಕೇಸರಿ ಕದನ: ಬಿಜೆಪಿ ಸರ್ಕಾರದ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಸಮರ
ಎರಡು ವರ್ಷಗಳ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರು. ಹಣ ಲಪಟಾಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವಿಧಾನಸಭೆಯಲ್ಲೂ ಕಾಂಗ್ರೆಸ್ ಪಕ್ಷದ ನಾಯಕರು ದನಿ ಎತ್ತಿದ್ದರು. ಕೊನೆಗೆ ಗಂಗಾ ಕಲ್ಯಾಣ ಯೋಜನೆಯ ಅವ್ಯವಹಾರ ಪರಿಶೀಲನೆಗೆ ರಚಿಸಲಾಗಿದ್ದ ಸದನ ಸಮಿತಿ, ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಮಧ್ಯಂತರ ವರದಿ ಸಲ್ಲಿಸಿತ್ತು. ಕೊನೆಗೆ ಹಗರಣದ ಕುರಿತು ಪೊಲೀಸರ ತನಿಖೆ ಶುರುವಾಗಿದೆ.
ಸಚಿವ ಖರ್ಗೆ ಟ್ವೀಟ್: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಮೀಸಲಾದ ಹಣವನ್ನು ದೋಚಿರುವುದನ್ನು ರಾಜ್ಯ ಬಿಜೆಪಿ ನಾಯಕರು ನಿರಾಕರಿಸುತ್ತಿದ್ದರು. ಆದರೀಗ ಗಂಗಾ ಕಲ್ಯಾಣ ಯೋಜನೆಯ ಅಕ್ರಮದ ಕುರಿತು ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಶೀಘ್ರವೇ ಸಿಐಡಿ ತನಿಖೆ ಶುರುವಾಗಲಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಬೋರ್‌ವೆಲ್ ಅನ್ನು 40 ಪರ್ಸೆಟ್ ಸರ್ಕಾರ ಕೊರೆಸಲಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದಾರೆ.
