*   ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮುಚ್ಚಿದ ಕ್ಯಾಂಟೀನ್‌*  ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ 6 ತಿಂಗಳಿಂದ ವೇತನವನ್ನೇ ನೀಡಿಲ್ಲ*  ಕ್ಯಾಂಟೀನ್‌ಗೆ ಬೇಕಾದ ಕಿರಾಣಿ ನೀಡುವ ವ್ಯಾಪಾರಿಗಳಿಗೆ ನೀಡಬೇಕಾದ 2 ಲಕ್ಷ ಹಣ ಬಾಕಿ 

ನಾರಾಯಣ ಹೆಗಡೆ

ಹಾವೇರಿ(ಜು.06): ಬಡವರು, ಕಾರ್ಮಿಕರು, ಜಿಲ್ಲಾಸ್ಪತ್ರೆಗೆ ಬರುವ ನೂರಾರು ಜನರ ಪಾಲಿಗೆ ಕಾಮಧೇನು ಎನಿಸಿದ್ದ ಇಂದಿರಾ ಕ್ಯಾಂಟೀನ್‌ ಕಳೆದ 8 ತಿಂಗಳಿಂದ ಬಾಗಿಲು ಮುಚ್ಚಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಬಡ ಜನರಿಗೆ ಸಮಸ್ಯೆಯಾಗಿದೆ.

ಹಸಿವಿನಿಂದ ಯಾರೂ ಬಳಲಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಸ್ಥಾಪಿಸಿದ್ದ ಕ್ಯಾಂಟೀನ್‌ ಈಗ ಕೇವಲ ನಾಮಫಲಕಕ್ಕೆ ಸೀಮಿತವಾಗಿದೆ. ಇಲ್ಲಿನ ಜಿಲ್ಲಾಸ್ಪತ್ರೆಯ ಎದುರಿನ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಈ ಕ್ಯಾಂಟಿನ್‌ ಸ್ಥಾಪಿಸಲಾಗಿದೆ. ಬಸ್‌ ನಿಲ್ದಾಣಕ್ಕೂ ಹತ್ತಿರವಾಗಿದ್ದರಿಂದ ಮಾರುಕಟ್ಟೆ, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಗಳು, ಸಂತೆ ಮತ್ತು ತರಕಾರಿ ಮಾರುಕಟ್ಟೆಗೆ ಬರುತ್ತಿದ್ದ ರೈತರು, ಆಟೊ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ಬಡ ಮಧ್ಯಮ ವರ್ಗದ ಜನರು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಹೊಟ್ಟೆತುಂಬಿಸಿಕೊಳ್ಳುತ್ತಿದ್ದರು. ಆದರೆ ಕಳೆದ 8 ತಿಂಗಳಿಂದ ಈ ಕ್ಯಾಂಟೀನ್‌ ಬಾಗಿಲು ಮುಚ್ಚಿರುವ ಕಾರಣ ಬಡಜನರು ಊಟಕ್ಕೆ ಪರದಾಡುವಂತಾಗಿದೆ.

ಕೃಷಿ ಕಾರ್ಮಿಕರಿಗೆ ಬಂತು ಲೇಬರ್‌ ಬ್ಯಾಂಕ್‌..!

ನಗರದ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಕ್ಯಾಂಟಿನ್‌ ಆರಂಭಿಸಿ ನವಪ್ರಯಾಸ ನವದೆಹಲಿ ಸಂಸ್ಥೆಯವರು 2019ರಿಂದ ಗುತ್ತಿಗೆ ಆಧಾರದಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದರು. ಸರ್ಕಾರದ ಆದೇಶದಂತೆ ಬೆಳಗಿನ ಉಪಾಹಾರಕ್ಕೆ .5, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟಕ್ಕೆ .10 ದರ ನಿಗದಿಪಡಿಸಲಾಗಿತ್ತು. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ .52.49 ಗಳಿಗೆ ಆಹಾರ ವಿತರಣೆಯ ಟೆಂಡರ್‌ ಮಂಜೂರು ಮಾಡಲಾಗಿತ್ತು. ಗ್ರಾಹಕರಿಂದ .25 ಮತ್ತು ಉಳಿದ .27.49 ಸಹಾಯಧನವನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಪ್ರತಿ ತಿಂಗಳು ಉಪಾಹಾರ ಮತ್ತು ಊಟ ಸೇವಿಸಿದ ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ಬಿಲ್‌ ಪಾವತಿಸಲಾಗುತ್ತಿತ್ತು. ನಮ್ಮಲ್ಲಿ ಅನುದಾನದ ಕೊರತೆಯಿಲ್ಲ. ಆದರೆ, ಗುತ್ತಿಗೆದಾರರು 6 ತಿಂಗಳ ಬಿಲ್‌ಗಳನ್ನೇ ಸಲ್ಲಿಸಿಲ್ಲ. ಟೆಂಡರ್‌ ಪಡೆದ ಗುತ್ತಿಗೆದಾರರು ಉಪ ಗುತ್ತಿಗೆ ಕೊಟ್ಟಿದ್ದರು. ಸಮರ್ಪಕವಾಗಿ ನಿರ್ವಹಣೆ ಮಾಡದೇ ಆಗಾಗ್ಗೆ ದೂರುಗಳು ಬಂದವು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ನೋಟಿಸ್‌ ಕೊಟ್ಟಿದ್ದೇವೆ ಎನ್ನುತ್ತಾರೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು.

ಕೋವಿಡ್‌ ಸಮಯದಲ್ಲಿ ಕ್ಯಾಂಟೀನ್‌ನಲ್ಲಿ ಊಟ ಕೊಡುತ್ತಿದ್ದೆವು. ಬಡಜನರು ಕೈ ಮುಗಿದು ಊಟ ಮಾಡಿ ಹೋಗುತ್ತಿದ್ದರು. ಆದರೆ, ಗುತ್ತಿಗೆದಾರರು ಕ್ಯಾಂಟೀನ್‌ ನಡೆಸಲು ಆಸಕ್ತಿ ತೋರದೆ ನಿರ್ಲಕ್ಷ್ಯ ವಹಿಸಿದರು. ಇದರಿಂದ ಕ್ಯಾಂಟೀನ್‌ಗೆ ಬೀಗ ಬಿದ್ದಿದೆ. ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಐವರು ಸಿಬ್ಬಂದಿಗೆ 6 ತಿಂಗಳ ಸಂಬಳವನ್ನೇ ಕೊಟ್ಟಿಲ್ಲ. ನಾವು ನಿರುದ್ಯೋಗಿಗಳಾಗಿದ್ದೇವೆ ಎಂದು ಕ್ಯಾಂಟೀನ್‌ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್‌ಗೆ ಹಾಲು, ತರಕಾರಿ, ಅಕ್ಕಿ, ತೆಂಗಿನಕಾಯಿ ಪೂರೈಸಿದ ವ್ಯಾಪಾರಿಗಳಿಗೆ ಗುತ್ತಿಗೆದಾರರು ಸುಮಾರು .2 ಲಕ್ಷ ಹಣವನ್ನು ಕೊಟ್ಟಿಲ್ಲ. ಅವರೆಲ್ಲರಿಗೂ ಮೋಸವಾಗಿದೆ. ನಮಗೆ ಸಂಬಳ ಕೊಡಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಕೇಳಿದರೆ ಮೊದಲು ನಿಮ್ಮ ಗುತ್ತಿಗೆದಾರರನ್ನು ಹುಡುಕಿಕೊಂಡು ಬನ್ನಿ ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ, ನಮ್ಮ ಗೋಳನ್ನು ಕೇಳುವವರಿಲ್ಲದಂತಾಗಿದೆ ಎಂದು ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರು ದೂರುತ್ತಿದ್ದಾರೆ.

ಪಂಚಮಸಾಲಿ ಮೀಸಲಾತಿಗಾಗಿ ವಿಧಾನಸೌಧದ ಒಳಗೂ ಶಕ್ತಿ ಪ್ರದರ್ಶನ: ಕೂಡಲ ಶ್ರೀ

ಬಡವರ ಪಾಲಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟಿನ್‌ ಮುಚ್ಚಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಕ್ಯಾಂಟೀನ್‌ ಪುನಾರಂಭಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಈ ಕುರಿತು ಕೆಆರ್‌ಎಸ್‌ ಪಕ್ಷ ಧ್ವನಿ ಎತ್ತಿತ್ತು. ಜಿಲ್ಲೆಯ ಹಲವು ಕಡೆ ಇದೇ ಪರಿಸ್ಥಿತಿಯಾಗಿದ್ದು, ಎಲ್ಲ ಕಡೆ ಕ್ಯಾಂಟೀನ್‌ ಪುನರಾರಂಭಿಸುವ ಕಾರ್ಯವಾಗಬೇಕು ಎಂದು ಕೆಆರ್‌ಎಸ್‌ ಪಕ್ಷದ ಜಿಲ್ಲಾಧ್ಯಕ್ಷ ಉಜಣೆಪ್ಪ ಕೋಡಿಹಳ್ಳಿ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಾರ್ಯಾದೇಶ ನೀಡಿ ತ್ವರಿತವಾಗಿ ಕಾರ್ಯಾರಂಭಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಅಂತ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.