ಗಮನಿಸಿ: ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲ್ವೆ ಸಮಯ ಮತ್ತೆ ಬದಲಾಗಿದೆ
ತಾಳಗುಪ್ಪದಿಂದ ಬೆಂಗಳೂರಿಗೆ ಪ್ರತಿದಿನ ಬೆಳಿಗ್ಗೆ ಹೊರಡುವ ಇಂಟರ್‌ಸಿಟಿ ರೈಲಿನ ವೇಳಾಪಟ್ಟಿಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಆದೇಶ ನೀಡಲಾಗಿತ್ತು. ಆದರೆ ಸಮಯ ಬದಲಾವಣೆಯಿಂದ ಪ್ರಯಾಣಿಕರು ತೊಂದರೆಗೆ ಒಳಗಾಗುತ್ತಿರುವುದರಿಂದ ಎರಡೇ ದಿನದಲ್ಲಿ ನಿರ್ಧಾರ ಬದಲಾಯಿಸಲಾಗಿದೆ.
ಶಿವಮೊಗ್ಗ/ಬೆಂಗಳೂರು[ಮಾ. 02] ರೈಲ್ವೆ ಮಾರ್ಗದ ಅಭಿವೃದ್ಧಿ ಕಾಮಗಾರಿ ಸಲುವಾಗಿ ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲಿನ ವೇಳಾಪಟ್ಟಿ ತಾತ್ಕಾಲಿಕ ಬದಲಾವಣೆ ಮಾಡಲಾಗಿತ್ತು. ನಿಗದಿತ ವೇಳೆಗಿಂತ ರೈಲು ಒಂದು ಗಂಟೆ ತಡವಾಗಿ ಹೊರಡುವುದಾಗಿ ನಿರ್ಧರಿಸಲಾಗಿತ್ತು. ಮೇ 1ರಿಂದ ಜೂನ್ 6ರವರೆಗೆ ಈ ಹೊಸ ವೇಳಾಪಟ್ಟಿಯಂತೆ ರೈಲು ಶಿವಮೊಗ್ಗದಿಂದ ತಡವಾಗಿ ನಿರ್ಗಮಿಸಬೇಕಿತ್ತು.
ಆದರೆ, ರೈಲ್ವೆ ಇಲಾಖೆಯ ನಿರ್ಧಾರಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ್ದರಿಂದ ಸಮಯ ಬದಲಾವಣೆಯ ನಿರ್ಧಾರವನ್ನು ಇಲಾಖೆ ತಕ್ಷಣದಿಂದಲೇ ಹಿಂದಕ್ಕೆ ತೆಗೆದುಕೊಂಡಿದೆ. ಮೇ 3ರಿಂದಲೇ ಅನ್ವಯವಾಗುವಂತೆ ರೈಲು ಹೊಸ ಸಮಯದ ಅನುಗುಣವಾಗಿ ಸಂಚರಿಸಲಿದೆ.
ಕೇಳ್ರಪ್ಪೋ ಇನ್ಮೇಲೆ ರೈಲು ಹೊರಡುವ 20 ನಿಮಿಷ ಮೊದ್ಲು ನಿಲ್ದಾಣದಲ್ಲಿ ಇರ್ಬೇಕು!
ತಾಳಗುಪ್ಪದಿಂದ ರೈಲು ಬೆಳಿಗ್ಗೆ 3.50ಕ್ಕೆ ಹೊರಟು 6.05ಕ್ಕೆ ಶಿವಮೊಗ್ಗ ತಲುಪುತ್ತದೆ. ಶಿವಮೊಗ್ಗದಿಂದ ಬೆಳಿಗ್ಗೆ 6.40ಕ್ಕೆ ಬೆಂಗಳೂರಿಗೆ ಹೊರಡುತ್ತಿತ್ತು. ರೈಲು ಮಾರ್ಗದ ಅಭಿವೃದ್ಧಿ ಕಾಮಗಾರಿ ಸಲುವಾಗಿ 6.40ರ ಬದಲು ಬೆಳಿಗ್ಗೆ 7.40ಕ್ಕೆ ರೈಲು ಹೊರಡುವಂತೆ ಸಮಯ ಬದಲಾಯಿಸಲಾಗಿತ್ತು. ಜನರಿಂದ ಆಕ್ಷೇಪ ಕೇಳಿ ಬಂದಿದ್ದಕ್ಕೆ ಶಿವಮೊಗ್ಗದಿಂದ ಬೆಳಿಗ್ಗೆ 7.20ಕ್ಕೆ ಹೊರಡಲಿದೆ.
ಮೈಸೂರು ವಿಭಾಗದ ಕಡೂರು ಮತ್ತು ಅರಸೀಕೆರೆ ಜಂಕ್ಷನ್ ನಡುವೆ ಮಹತ್ವದ ಸಿವಿಲ್ ಎಂಜಿನಿಯರಿಂಗ್ ಕೆಲಸ ನಡೆಯುತ್ತಿರುವುದರಿಂದ ಮೇ 3ರಿಂದ ಜೂನ್ 6ರವರೆಗೆ 20652 ಸಂಖ್ಯೆಯ ರೈಲು ಶಿವಮೊಗ್ಗದಿಂದ 60 ನಿಮಿಷಕ್ಕೆ ಬದಲಾಗಿ 40 ನಿಮಿಷ ತಡವಾಗಿ ಹೊರಡಲಿದೆ. ಚಿಕ್ಕ ನಿಲ್ದಾಣಗಳ ಬದಲು ದೊಡ್ಡ ನಿಲ್ದಾಣದಲ್ಲಿಯೇ ರೈಲು ನಿಲ್ಲಿಸುವುದು ಉತ್ತಮ ಎಂಬ ವಿಚಾರದಡಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.