ನವದೆಹಲಿ(ಜ.06): ಪ್ರಯಾಣಕ್ಕೆ 20 ನಿಮಿಷ ಮೊದಲೇ ನಿಲ್ದಾಣದಲ್ಲಿರಬೇಕು ಎಂಬ ವಿಮಾನ ನಿಲ್ದಾಣದ ನಿಯಮವನ್ನು ರೈಲ್ವೆ ಇಲಾಖೆ ಅಳವಡಿಸಿಕೊಳ್ಳಲು ಮುಂದಾಗಿದೆ. 

ಭದ್ರತಾ ತಪಾಸಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಕ್ಕೆ ಈ ನಿಯಮ ಸಹಕಾರಿಯಾಗಲಿದ್ದು, ಅತ್ಯುನ್ನತ ತಂತ್ರಜ್ಞಾನದ ಭದ್ರತಾ ಯೋಜನೆ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಮತ್ತು ಕರ್ನಾಟಕದ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.

ಇನ್ನೂ 202 ನಿಲ್ದಾಣಗಳಲ್ಲಿ ಈ ಯೋಜನೆಯ ಜಾರಿಗೆ ನೀಲನಕ್ಷೆ ಸಿದ್ಧವಾಗಿದೆ ಎಂದು ರೈಲ್ವೆ ಸುರಕ್ಷತಾ ಪಡೆಯ ನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ. 

ವಿಮಾನ ನಿಲ್ದಾಣದಂತೆಯೇ ರೈಲ್ವೆ ನಿಲ್ದಾಣವನ್ನೂ ಪ್ರಯಾಣಕ್ಕೆ 20 ನಿಮಿಷಗಳ ಮುಂಚಿತವಾಗಿ ಬರುವ ಪ್ರಯಾಣಿಕರು ತಲುಪಿದ ನಂತರ ಸೀಲ್ ಮಾಡುವ ಯೋಜನೆ ಹೊಂದಿದ್ದು, ತಾಂತ್ರಿಕವಾಗಿ ಇದನ್ನು ನಿರ್ವಹಿಸುವುದರ ಬಗ್ಗೆ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. 

ಪ್ರತಿ ಪ್ರವೇಶ ಹಂತದಲ್ಲೂ ಭದ್ರತಾ ತಪಾಸಣೆ ಇರಲಿದೆ. ಆದರೆ ಏರ್‌ಪೋರ್ಟ್‌ಗಳ ಮಾದರಿಯಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಬೇಗ ಬರುವ ಅವಶ್ಯಕತೆ ಇರುವುದಿಲ್ಲ. ರೈಲು ಹೊರಡುವುದಕ್ಕೆ 15-20 ನಿಮಿಷಗಳು ಮುಂಚಿತವಾಗಿ ಬಂದರೆ ಸಾಕು ಎಂದು ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.