ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಯಲಹಂಕ ರೈಲು ನಿಲ್ದಾಣದಲ್ಲಿ ಕೊಯಮತ್ತೂರು-ಮುಂಬೈ ಎಕ್ಸ್‌ಪ್ರೆಸ್ ರೈಲಿಗೆ ಹೊಸ ನಿಲುಗಡೆಗೆ ಚಾಲನೆ ನೀಡಿದರು. ಈ ಸೌಲಭ್ಯದಿಂದ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಬೆಂಗಳೂರಿನ ಇತರ ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆ ಮಾಡಲು ಯಲಹಂಕದಲ್ಲಿ ಹೊಸ ಮೆಗಾ ರೈಲ್ವೆ ಟರ್ಮಿನಲ್ ನಿರ್ಮಿಸಲು ಯೋಜಿಸಲಾಗಿದೆ.
ಬೆಂಗಳೂರು: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸೋಮವಾರ ಯಲಹಂಕ ರೈಲು ನಿಲ್ದಾಣದಲ್ಲಿ ಕೊಯಮತ್ತೂರು-ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ)-ಕೊಯಮತ್ತೂರು ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 11014/11013) ಯಲಹಂಕ ನಿಲುಗಡೆಗೆ ಹಸಿರು ನಿಶಾನೆ ತೋರಿಸಿದರು.
ಯಲಹಂಕದಲ್ಲಿ ಹೊಸ ಮೆಗಾ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಯೋಜನೆ
ಈ ವೇಳೆ ಮಾತನಾಡಿದ ಸೋಮಣ್ಣ, ಈ ರೈಲು ಯಲಹಂಕದಲ್ಲಿ ನಿಲುಗಡೆ ಆಗುವುದರಿಂದ ಈ ಪ್ರದೇಶದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಇತ್ತೀಚಿನ ದಿನಗಳಲ್ಲಿ ಯಲಹಂಕ ತ್ವರಿತ ಗತಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದು, ಬೆಂಗಳೂರು ನಗರದಲ್ಲಿನ ರೈಲು ನಿಲ್ದಾಣಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಯಲಹಂಕದಲ್ಲಿ ಹೊಸ ಮೆಗಾ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಯೋಜಿಸಲಾಗಿದೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳನ್ನು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸ ಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಡಾ. ಕೆ. ಸುಧಾಕರ್ ಮಾತನಾಡಿ ''ಈ ರೈಲಿಗೆ ಯಲಹಂಕದಲ್ಲಿ ನಿಲುಗಡೆ ನೀಡಿರುವುದರಿಂದ ವಿದ್ಯಾರ್ಥಿಗಳು, ಕಾರ್ಮಿಕರು, ವೃತ್ತಿಪರರು ಮತ್ತು ಈ ಪ್ರದೇಶದ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಯಲಹಂಕದ ತ್ವರಿತ ಬೆಳವಣಿಗೆಯನ್ನು ಪರಿಗಣಿಸಿ ಹೆಚ್ಚಿನ ರೈಲುಗಳಿಗೆ ನಿಲುಗಡೆ ಒದಗಿಸುವುದನ್ನು ಪರಿಗಣಿಸುವಂತೆ ಅವರು ರೈಲ್ವೆ ಸಚಿವರನ್ನು ವಿನಂತಿಸಿದರು.
ಚಿಕ್ಕಬಾಣಾವರ–ಗೊಲ್ಲಹಳ್ಳಿ ಮತ್ತು ಸೋಲದೇವನಹಳ್ಳಿ ರಸ್ತೆ ಮೇಲ್ಸೇತುವೆ (ಆರ್‌ಒಬಿ) ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ, ಈ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಿದೆ ಎಂದರು.
ಯಲಹಂಕದಲ್ಲಿ ಹೆಚ್ಚುವರಿ ನಿಲುಗಡೆ ಒದಗಿಸಿದ್ದಕ್ಕಾಗಿ ಎಸ್.ಆರ್. ವಿಶ್ವನಾಥ್ ಅವರು ಮಾನ್ಯ ಸಚಿವರಿಗೆ ಧನ್ಯವಾದ ಅರ್ಪಿಸಿದರು. ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಸಿರೋಯಾ, ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಪುರಿಯಾ ಇದ್ದರು.
ಬೆಂಗಳೂರು ಕಂಟೋನ್ಮೆಂಟ್- ವೈಟ್‌ಫೀಲ್ಡ್ ಚತುಷ್ಪಥ ಯೋಜನೆ ಉತ್ತಮವಾಗಿ ಪ್ರಗತಿಯಲ್ಲಿದೆ. ಸುರಕ್ಷತೆಯನ್ನು ಸುಧಾರಿಸಲು ಭಾರತೀಯ ರೈಲ್ವೆ ಎಲ್ಲಾ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ಹಂತ ಹಂತವಾಗಿ ತೆಗೆದುಹಾಕುವತ್ತ ಕೆಲಸ ಮಾಡುತ್ತಿದೆ. ವೈಟ್‌ಫೀಲ್ಡ್ ಮತ್ತು ಕೋಲಾರವನ್ನು ಹೊಸಕೋಟೆ ಮೂಲಕ ಸಂಪರ್ಕಿಸುವ ಹೊಸ ನೇರ ರೈಲು ಮಾರ್ಗವನ್ನು ಸಹ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ರೈಲು ವೇಳಾಪಟ್ಟಿ ಹೀಗಿದೆ
ಜೂನ್ 29ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 11014 ಕೊಯಮತ್ತೂರು–ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ರೈಲು ಯಲಹಂಕ ರೈಲು ನಿಲ್ದಾಣಕ್ಕೆ ಸಂಜೆ 4:41 ಗಂಟೆಗೆ ಆಗಮಿಸಿ, ಸಂಜೆ 4:43 ಗಂಟೆಗೆ ನಿರ್ಗಮಿಸಲಿದೆ. 30 ಜೂನ್ 2026ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್ –ಕೊಯಮತ್ತೂರು ಎಕ್ಸ್ಪ್ರೆಸ್ ರೈಲು ಯಲಹಂಕ ರೈಲು ನಿಲ್ದಾಣಕ್ಕೆ ಸಂಜೆ 7:28 ಗಂಟೆಗೆ ಆಗಮಿಸಿ, ಸಂಜೆ 7:30 ಗಂಟೆಗೆ ನಿರ್ಗಮಿಸಲಿದೆ.


