ಯಾದಗಿರಿ ಜಿಲ್ಲೆಯ ಸೈದಾಪುರ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಸ್ಥಗಿತಗೊಂಡಿರುವ ಇಂಟರ್‌ಸಿಟಿ ರೈಲು ಮರುಆರಂಭ ಮತ್ತು ಪ್ರಮುಖ ರೈಲುಗಳಿಗೆ ನಿಲುಗಡೆ ನೀಡುವಂತೆ ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಯಾದಗಿರಿ (ಸೆ.27): ರೈಲು ನಿಲ್ದಾಣ ಆರಂಭಗೊಂಡು ಒಂದು ದಶಕ ಕಳೆದರೂ ನಿರೀಕ್ಷಿತ ಮಟ್ಟದ ಮೂಲಸೌಕರ್ಯ ಇಲ್ಲಿ ಅಭಿವೃದ್ಧಿಯಾಗಿಲ್ಲ. ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಆಧುನಿಕ ಹಾಗೂ ಹೈಟೆಕ್ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಆಗ್ರಹಿಸಿದರು.
ಈ ಕುರಿತು ಸಿಕಿಂದ್ರಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್‌ಎಂ) ಸೈದಾಪುರ ರೈಲು ನಿಲ್ದಾಣದ ವ್ಯವಸ್ಥಾಪಕರ ಮೂಲಕ ಉಮೇಶ್ ಕೆ. ಮುದ್ನಾಳ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಸೈದಾಪುರ ರೈಲು ನಿಲ್ದಾಣದಿಂದ ರೈಲ್ವೆ ಇಲಾಖೆಗೆ ಆದಾಯ ಬರುತ್ತಿದ್ದರೂ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸುವಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಆರೋಪಿಸಿದರು. ನಿಲ್ದಾಣದಲ್ಲಿ ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರು, ಆಸನ ವ್ಯವಸ್ಥೆ ಹಾಗೂ ಪ್ಲಾಟ್‌ಫಾರಂಗಳಿಗೆ ಸಂಪೂರ್ಣ ಮೇಲ್ಛಾವಣಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯ
ಸೈದಾಪುರ ಪಟ್ಟಣದ ಸಂಚಾರ ದಟ್ಟಣೆ ಹಾಗೂ ರೈಲ್ವೆ ಹಳಿ ದಾಟುವ ಸಂದರ್ಭದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹಲವು ವರ್ಷಗಳಿಂದ ಈ ಬೇಡಿಕೆ ಇದ್ದರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ರೈಲ್ವೆ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಬಹುದಿನಗಳ ಬೇಡಿಕೆಗಳಿಗೆ ರೈಲ್ವೆ ಇಲಾಖೆ ಶೀಘ್ರ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು.ತಪ್ಪಿದಲ್ಲಿ ಪ್ರಯಾಣಿಕರಿಗೆ ಸಾಮಾಜಿಕ ನ್ಯಾಯ ದೊರೆಯುವವರೆಗೆ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿ. ಸೋಮಣ್ಣ ಕಣ್ಣಿಗೆ ಬೀಳಲಿಲ್ವಾ?
ರಾಜ್ಯದಲ್ಲಿ ಈಗಾಗಲೇ ಹತ್ತಾರು ರೈಲ್ವೆ ನಿಲ್ದಾಣಗಳನ್ನು ರೈಲ್ವೆ ಸಚಿವ ವಿ. ಸೋಮಣ್ಣ ಅಭಿವೃದ್ಧಿ ಮಾಡಿದ್ದಾರೆ. ಆದರೆ, ಅವರ ಕಣ್ಣಿಗೆ ದಶಕಗಳಿಂದ ಮೂಲಸೌಕರ್ಯಗಳ ಕೊರತೆಯಿಂದಲೇ ನಲುಗುತ್ತಿರುವ ನಮ್ಮ ಸೈದಾಪುರ ರೈಲ್ವೆ ನಿಲ್ದಾಣ ಕಣ್ಣಿಗೆ ಬೀಳಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಒಮ್ಮೆ ಅವರ ಕಣ್ಣಿಗೆ ನಮ್ಮ ನಿಲ್ದಾಣ ಬಿದ್ದರೆ ಅಭಿವೃದ್ಧಿ ಮಾಡದೇ ಬಿಡಲಾರರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಹನುಮಂತ ವಡವಟ್ಟಿ, ಬಸಯ್ಯಸ್ವಾಮಿ ಕಣೇಕಲ್, ಶ್ರೀಶೈಲ್ ಸೈದಾಪುರ, ವಿಶ್ವನಾಥ, ತಾಯಪ್ಪ, ಪ್ರಭು, ಭೀಮು, ಮಲ್ಲೇಶ, ಬನ್ನಪ್ಪ, ಶರಣಪ್ಪ, ಗೋವಿಂದ, ರಾಘವೇಂದ್ರ, ತಾಯಪ್ಪ, ಹಣಮಂತ್ರಾಯ, ವೆಂಕಟರಾಯ, ಸಿದ್ದಪ್ಪ, ಆಂಜನೇಯ, ನಜೀರ್, ಸಿದ್ರಾಮ, ದೇವಪ್ಪ, ಚಂದ್ರಕಾಂತ, ಯಂಕಪ್ಪ, ಭೀಮಣ್ಣ, ಈಶಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
----ಇಂಟರ್‌ಸಿಟಿ ರೈಲು ಮರುಆರಂಭಕ್ಕೆ ಪಟ್ಟು
ಕೊರೊನಾ ಅವಧಿಯಲ್ಲಿ ಸ್ಥಗಿತಗೊಂಡ ಇಂಟರ್‌ಸಿಟಿ ಪ್ಯಾಸೆಂಜರ್ ರೈಲು ಸೇವೆಯನ್ನು ಇದುವರೆಗೆ ಪುನರಾರಂಭಿಸಿಲ್ಲ. ರೈಲು ಸೇವೆ ಪುನರಾರಂಭಿಸುವಂತೆ ರೈಲ್ವೆ ಸಚಿವರು, ಡಿಆರ್‌ಎಂ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶೀಘ್ರವೇ ಇಂಟರ್‌ಸಿಟಿ ರೈಲು ಆರಂಭಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
----13 ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ
ಉದ್ಯೋಗ, ವ್ಯಾಪಾರ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸಂಚರಿಸುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಎರಡು ಸಾಮಾನ್ಯ ಬೋಗಿಗಳನ್ನು ಅಳವಡಿಸಬೇಕು ಎಂದು ಗ್ರಾಮಸ್ಥರು ರೈಲ್ವೆ ಇಲಾಖೆ ಅಧಿಕಾರಿಗಳು, ಸಚಿವರನ್ನು ಒತ್ತಾಯಿಸಿದರು.


