ಅನುದಾನ ಬಿಡುಗಡೆಯಾಗದ ಹಿನ್ನೆಲೆ ಹಾಗೂ ಗುತ್ತಿಗೆದಾರರ ಕಿರುಕುಳದಿಂದ ಬೇಸತ್ತ ಗದಗದ ಕೆಆರ್‌ಐಡಿಎಲ್ ಎಇಇ ಫರ್ವೇಜ್ ಧಾರವಾಡ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 13ರಂದು ಬೆಂಗಳೂರಿಗೆ ತೆರಳಿದ್ದ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಕುಟುಂಬಸ್ಥರು ಬೆಟಗೇರಿ ಪೊಲೀಸ್ ಠಾಣೆಗೆ ದೂರು.

-ಗದಗ (ಸೆ.27): ಸರ್ಕಾರದಿಂದ ಇಲಾಖೆಗೆ ಬರಬೇಕಾದ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆಯಾಗದ ಹಿನ್ನೆಲೆ ಹಾಗೂ ಉಪ ಗುತ್ತಿಗೆದಾರರ ನಿರಂತರ ಕಿರುಕುಳದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾಗಿ ಆರೋಪಿಸಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್) ಗದಗ ಉಪವಿಭಾಗದ ಎಇಇ (ಸಹಾಯಕ ಕಾರ್ಯಪಾಲಕ ಎಂಜಿನಿಯರ್‌) ಫರ್ವೇಜ್ ಧಾರವಾಡ ಎಂಬುವರು ಆತ್ಮಹತ್ಯೆ ಪತ್ರ ಬರೆದಿಟ್ಟು, ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗುವ ಮುನ್ನ ಫರ್ವೇಜ್ ಧಾರವಾಡ ಎಂಡಿ ಗೆ ಪತ್ರ

ನಾಪತ್ತೆಯಾಗುವುದಕ್ಕೂ ಮುನ್ನ ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ (ಎಂಡಿ) ಪತ್ರ ಬರೆದಿರುವ ಫರ್ವೇಜ್, ಉಪವಿಭಾಗಕ್ಕೆ ಸರ್ಕಾರದ ಅನುದಾನ ಬಾರದ ಕಾರಣ ಉಪ ಗುತ್ತಿಗೆದಾರರು ನಿತ್ಯ ಮನೆ ಮುಂದೆ ಹಾಗೂ ಕಚೇರಿಗೆ ಬಂದು ಗಲಾಟೆ ಮಾಡುತ್ತಿದ್ದಾರೆ. ಫೋನ್ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ನಾನು ಸೋತಿದ್ದೇನೆ. ಹೀಗಾಗಿ, ನನ್ನ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಿದ್ದು, ನನ್ನ ಸಾವಿಗೆ ನಾನೇ ಕಾರಣ. ಉಪವಿಭಾಗಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಿ ಬೇರೆ ಎಇಇ ನಿಯೋಜಿಸಿ, ಜತೆಗೆ ನನ್ನ ಕುಟುಂಬಕ್ಕೆ ಯಾರೂ ಕಿರುಕುಳ ನೀಡದಂತೆ ನೋಡಿಕೊಳ್ಳಿ ಎಂದು ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

ಹಣ ಬಿಡುಗಡೆಗೆ ಪತ್ರ ಬರೆದರೂ ಹಣ ಇನ್ನೂ ಬಂದಿಲ್ಲ

ಕೆಲವು ಹಳೆಯ ಕಾಮಗಾರಿಗಳಿಗೆ ಬೇರೆ ಇಲಾಖೆಯಿಂದ ಹಣ ಬಾರದೇ ತಮ್ಮ ಇಲಾಖೆಯಿಂದಲೇ 6 ಕೋಟಿ ರು. ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಹಣ ಬಿಡುಗಡೆಗೆ ಪತ್ರ ಬರೆದರೂ ಹಣ ಇನ್ನೂ ಬಂದಿಲ್ಲ. ಕೆಲವು ಕಾಮಗಾರಿಗಳ ಅನುದಾನ ಕೇಂದ್ರ ಕಚೇರಿಯಿಂದಲೇ ಬಿಡುಗಡೆ ಆಗಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಬಳಿಕ, ಸೆ.13ರಂದು ಬೆಂಗಳೂರಿನಲ್ಲಿ ಇಲಾಖೆಯ ಸಭೆಯಿದೆ ಎಂದು ತೆರಳಿದ್ದ ಅವರು, ಬೆಂಗಳೂರು ತಲುಪಿದ್ದಾಗಿ ಪತ್ನಿಗೆ ಫೋನ್‌ ಕರೆ ಮಾಡಿದ್ದಾರೆ. ನಂತರ, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದ್ದರಿಂದ ಅನುಮಾನಗೊಂಡ ಕುಟುಂಬಸ್ಥರು, ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ವಿಚಾರಣೆ ನಡೆಸಿದಾಗ ಫರ್ವೇಜ್‌ ಅವರು ಆಫೀಸಿಗೆ ಬಂದಿಲ್ಲ ಎಂಬ ವಿಷಯ ತಿಳಿಯಿತು. ಇದೇ ವೇಳೆ, ಅವರ ಕಚೇರಿ ಪರಿಶೀಲಿಸಿದಾಗ ಡೆತ್‌ನೋಟ್‌ ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಕುಟುಂಬ ಸದಸ್ಯರು ಸೆ.16ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಪತ್ತೆಗೆ ಕುಟುಂಬಸ್ಥರ ಮನವಿ:

ಫರ್ವೇಜ್‌ ಧಾರವಾಡ ಅವರು ಪತ್ನಿ, ಪುತ್ರಿ, ತಂದೆ, ತಾಯಿ ಮತ್ತು ಸಹೋದರರನ್ನು ಹೊಂದಿದ್ದಾರೆ. ಆತ್ಮಹತ್ಯೆಯ ಅಂಶ ಉಲ್ಲೇಖವಾಗಿರುವುದರಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಕೂಡಲೇ ವಿಶೇಷ ಪೊಲೀಸ್ ತಂಡ ರಚಿಸಿ ಅಧಿಕಾರಿಯನ್ನು ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ಕಣ್ಣೀರ ಮನವಿ ಮಾಡಿದ್ದಾರೆ.

ಈ ಕುರಿತು ಸಮಗ್ರ ತನಿಖೆಯಾಗಬೇಕು. ಸರ್ಕಾರದಿಂದ ಅನುದಾನ ಬರದೇ ಇದ್ದರೂ ಅವರಿಗೆ ಹಣ ಕೊಡುವಂತೆ ಯಾರು ಒತ್ತಾಯ ಮಾಡಿದ್ದರು, ಯಾರಿಂದ ಅವರಿಗೆ ಒತ್ತಡವಿತ್ತು ಎನ್ನುವ ಬಗ್ಗೆ ಪೊಲೀಸ್ ಅಧಿಕಾರಿಗಳು ಕೂಡಲೇ ಕೂಲಂಕಷವಾದ ತನಿಖೆ ನಡೆಸಬೇಕು. ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಗಮನ ಹರಿಸಬೇಕು. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎನ್ನುತ್ತಾರೆ ಕುಟುಂಬಸ್ಥರು.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇನ್ನು ಮುಂದೆ ನಿತ್ಯ ಇಂಥ ಘಟನೆ ಶುರು

ಆರ್‌ಐಡಿಎಲ್‌ನ ಎಇಇ ನಾಪತ್ತೆ ಒಂದೇ ಘಟನೆ ಅಲ್ಲ, ಇನ್ನು ಮುಂದೆ ಇಂತಹ ಘಟನೆಗಳು ಪ್ರತಿದಿನ ಪ್ರಾರಂಭವಾಗುತ್ತವೆ.

- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ