ಬಾಗಲಕೋಟೆ: ಕೃಷ್ಣಾ ಅಬ್ಬರಕ್ಕೆ ನದಿ ತೀರದ ಜನ ತಬ್ಬಿಬ್ಬು, ಹೆಚ್ಚಿದ ಪ್ರವಾಹ ಆತಂಕ
* ಮನೆಯೊಳಗೆ ನುಗ್ಗಿದರೂ ಸ್ಥಳಾಂತರಗೊಳ್ಳದ ಜನತೆ
* ರಬಕವಿಯೂ ನೆರೆಯ ಭಯದಿಂದ ಮುಕ್ತವಾಗಿಲ್ಲ
* ಪ್ರತಿ ವರ್ಷ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾಳು ಮಾಡುತ್ತಿರುವ ಪ್ರವಾಹ
ಶಿವಾನಂದ ಪಿ.ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಜು.28): ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೊರಬಿಡುತ್ತಿರುವ ನೀರು ಜಲಾನಯನ ಪ್ರದೇಶದಲ್ಲಿನ ಮಳೆಯ ಕಾರಣ ಮಂಗಳವಾರ ಮತ್ತಷ್ಟು ನೀರು ಹಿಪ್ಪರಗಿ ಜಲಾಶಯಕ್ಕೆ ಹರಿದು ಬರುತ್ತಿದೆ. ಅಣೆಕಟ್ಟೆಗೆ ಅಂಟಿಕೊಂಡೇ ಇರುವ ಕುಲಹಳ್ಳಿ ಗ್ರಾಮದೊಳಗೆ ನೀರು ನುಗ್ಗುತ್ತಿದ್ದು, ನದಿ ಸಮೀಪವಿರುವ ಕುಟುಂಬಗಳನ್ನು ಸರ್ಕಾರಿ ಶಾಲೆಗಳಲ್ಲಿ ಹಾಗೂ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಸ್ಥಳಾಂತರಿಸುವಲ್ಲಿ ತಾಲೂಕಾಡಳಿತ ಕ್ರಮ ಕೈಗೊಂಡಿದೆ.
ತಾಲೂಕಿನ ಕುಲಹಳ್ಳಿಯಲ್ಲಿ ಎರಡು ಕಡೆಗಳಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಿದ್ದು, ಸರ್ಕಾರಿ ಶಾಲೆಗಳಲ್ಲಿ 50ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಅನೇಕ ಕುಟುಂಬಗಳಿಗೆ ಎಚ್ಚರಿಕೆ ನೀಡುವ ಮೂಲಕ ಬೇಗ ಮನೆ ಖಾಲಿ ಮಾಡಿ ಸ್ಥಳಾಂತರಗೊಳ್ಳುವಂತೆ ಗ್ರಾಮ ಪಂಚಾಯ್ತಿ ಹಾಗೂ ತಾಲೂಕಾಡಳಿತ ಅಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡುತ್ತಿದ್ದಾರೆ.
ಮನೆಯೊಳಗೆ ನುಗ್ಗಿದರೂ ಸ್ಥಳಾಂತರಗೊಳ್ಳದ ಜನತೆ:
ಕುಲಹಳ್ಳಿ ಗ್ರಾಮದ ಸುತ್ತಲಿನ ಹೊಲ ಹಾಗೂ ವಾರ್ಡ್‌ನಂ.5 ರಲ್ಲಿನ ಸುತ್ತಲಿನ ನೂರಾರು ಮನೆಗಳಿಗೆ ನೀರು ನುಗ್ಗಿದರೂ ಇನ್ನೂ ಮನೆಗಳನ್ನು ಖಾಲಿ ಮಾಡದೆ ಹಾಗೆ ಇದ್ದಾರೆ. ಇಂದು ರಾತ್ರಿ ಮತ್ತಷ್ಟು ನೀರು ಆಗಮಿಸುವ ಮೂಲಕ ಅನಾಹುತವಾಗುವ ಮುನ್ನವೇ ಅಧಿಕಾರಿಗಳ ತಂಡ ಮನೆಗಳಲ್ಲಿರುವ ಕುಟುಂಬಗಳನ್ನು ಒತ್ತಾಯದಿಂದ ಕರೆತಂದು ಸ್ಥಳಾಂತರ ಮಾಡುವಲ್ಲಿ ಹರಸಾಹಸ ಮಾಡುತ್ತಿದ್ದಾರೆ.
ಪ್ರವಾಹ ಸಂತ್ರಸ್ತರ ಬದುಕೇ ಬರ್ಬಾದ್! ರಸ್ತೆಯಲ್ಲೇ ಬದುಕು
ವರ್ಷ ಹಿಂಗಾದ್ರ ನಮ್‌ಗತಿ ಏನ್ರೀ..?:
ಪ್ರತಿ ವರ್ಷ ಹೊಲ-ಗದ್ದೆಗಳಿಗೆ ನದಿ ನೀರು ನುಗ್ಗಿ ಬೆಳೆ ಹಾಳು ಮಾಡುವುದಲ್ಲದೆ ಬದುಕನ್ನೇ ಮೂರಾಬಟ್ಟೆಮಾಡುತ್ತಿದೆ. ಪ್ರತಿ ವರ್ಷ ಹೀಗಾದ್ರೆ ನಾವ್ ಬದೂಕಾದಾದ್ರೂ ಹೇಗೆ? ಎಂಬ ಓರ್ವ ಮಹಿಳೆಯ ಪ್ರಶ್ನೆ ಎಂಥವರ ಕರಳು ಕಿತ್ತು ತಿನ್ನುವಂತಿತ್ತು. ಹಸುಗೂಸು ಸೇರಿದಂತೆ ಮಕ್ಕಳೊಂದಿಗೆ ಶಾಲೆಯಲ್ಲಿದ್ದೇವೆ. ತುತ್ತು ಊಟ ನೀಡುತ್ತಾರೆ. ಆದರೆ ನಮ್ಮ ಬಂಗಾರದ ಬೆಳೆಗೆ ನ್ಯಾಯ ಒದಗಿಸೋರಾರಯರು? ಸಾಲ ಮಾಡಿ ಬೆಳೆ ಮಾಡಿದ್ದೇವೆ. ಅದೆಲ್ಲ ನೀರು ಪಾಲಾಗಿ ನಮ್ಮ ಬದುಕಿಗೆ ಕೊಳ್ಳೆ ಇಟ್ಟಿದೆ. ಕಾಟಾಚಾರಕ್ಕೆಂಬಂತೆ ಪರಿಹಾರ ನೀಡುವ ಸರ್ಕಾರದ ಭರವಸೆಯನ್ನು ಎದುರು ನೋಡುತ್ತಾ ಕುಳಿತಿದ್ದು,ಬಂದ ಪರಿಹಾರ ಸಾಲದ ಬಡ್ಡಿ ಮೊತ್ತದ ನಾಲ್ಕಾಣೆ ಭಾಗವೂ ಆಗುವುದಿಲ್ಲ. ಶಾಶ್ವತ ಪರಿಹಾರಕ್ಕೆ ಕಳೆದ 10 ವರ್ಷಗಳಿಂದಲೂ ಸರ್ಕಾರಕ್ಕೆ,ಶಾಸಕರಿಗೆ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲವೆಂದು ನೊಂದ ಸಂತ್ರಸ್ತರು ಒಕ್ಕೊರಲಿನಿಂದ ಬೇಸರದ ಮಾತುಗಳನ್ನಾಡಿದರು.
ಇತ್ತ ನಗರ ಪ್ರದೇಶವಾಗಿರುವ ರಬಕವಿಯೂ ನೆರೆಯ ಭಯದಿಂದ ಮುಕ್ತವಾಗಿಲ್ಲ. ಆಲಮಟ್ಟಿ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿರುವ ಕಾರಣ ಮತ್ತು ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ಹೊಸೂರು-ರಬಕವಿ ಮುಖ್ಯಹಳ್ಳಕ್ಕೆ ನೀರು ಬಿಡುತ್ತಿರುವುದರಿಂದ ಮತ್ತು ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಹಿರೇ ಹಳ್ಳದ ಪಕ್ಕದ ರಬಕವಿ ನಗರದ ಹೊಸಪೇಟ ಲೇನ್,ಮುತ್ತೂರ ಗಲ್ಲಿ,ಮಟ್ಟಿಕಲ್ಲಿ ಲೇನ್, ಬೀಳಗಿ ಲೇನ್,ಸಾಬೋಜಿ ಲೇನ್‌ಮತ್ತು ಕಡಾಲಕಟ್ಟಿಗಲ್ಲಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಸಾಂಗಲಿ ಶಹರದಲ್ಲಿ ಮುಳುಗಡೆ ಪ್ರದೇಶದಲ್ಲಿ ಕನಿಷ್ಠ 5ಅಡಿ ನೀರು ಕೆಳಕ್ಕಿಳಿದಿದ್ದರೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿನ ಕೃಷ್ಣೆಯ ಆರ್ಭಟ ಕಮ್ಮಿಯಾಗದೇ ದಿನೇದಿನೇ ಹೆಚ್ಚುತ್ತಿದೆ.
ಜಲಾಶಯಗಳಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣವನ್ನು ಕೊಂಚ ಏರಿಸಿದರೆ ಮಾತ್ರ ತಾಲೂಕಿನ ಜನತೆ ನಿರುಮ್ಮಳರಾಗಲು ಸಾಧ್ಯ. ಆದರೆ ಈ ಬಗ್ಗೆ ತೀರ್ಮಾನಿಸಬೇಕಾದವರು ತಮ್ಮದೇ ರಾಜಕೀಯ ಪ್ರಹಸನದಲ್ಲಿ ನಿರತವಾಗಿರುವ ಕಾರಣ ಪ್ರವಾಹ ನಿರ್ವಹಣೆಯಲ್ಲಿ ಕಳೆದೆರಡು ದಿನಗಳಿಂದ ಸರ್ಕಾರ ವಿಫಲವಾಗಿದೆ ಎಂಬ ಶಂಕೆ ಜನರಲ್ಲಿ ಮೂಡುತ್ತಿರುವುದು ಸತ್ಯ.