ಬೆಂಗಳೂರು(ನ.13): ದೇಶದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರ ನಡುವೆಯೇ ಬೆಂಗಳೂರಿಗೆ ಕಹಿ ಎನ್ನಿಸುವ ಇನ್ನೊಂದು ಸುದ್ದಿ ಬಂದಿದೆ. ಅದು- ಬೆಂಗಳೂರು ನಮ್ಮ ದೇಶದ ಮಧುಮೇಹದ ರಾಜಧಾನಿಯಾಗುವತ್ತ ಧಾವಿಸುತ್ತಿದೆ ಎಂಬ ಸುದ್ದಿ.

ಮೆಟ್ರೋಪೋಲಿಸ್‌ ಹೆಲ್ತ್‌ಕೇರ್‌ ಡಯಾಗ್ನೋಸ್ಟಿಕ್‌ ಕಂಪನಿ ನಡೆಸಿದ ಅಧ್ಯಯನದಲ್ಲಿ ಬೆಂಗಳೂರಿನ ಶೇ.18ರಷ್ಟು ಜನರಲ್ಲಿ ಮಧುಮೇಹ ಪತ್ತೆಯಾಗಿದೆ. ಆತಂಕಕಾರಿ ಸಂಗತಿಯೆಂದರೆ, 2017ರಿಂದ 2019ರ ನಡುವೆ ಬೆಂಗಳೂರಿನಲ್ಲಿ ಮಧುಮೇಹಿಗಳ ಸಂಖ್ಯೆ ಶೇ.64ರಷ್ಟು ಏರಿಕೆಯಾಗಿದೆ.

2019ರಲ್ಲಿ ಬೆಂಗಳೂರಿನ ಮೆಟ್ರೋಪೋಲಿಸ್‌ ಹೆಲ್ತ್‌ಕೇರ್‌ ಲ್ಯಾಬ್‌ಗಳಲ್ಲಿ ಒಟ್ಟು 2,36,381 ರಕ್ತದ ಸ್ಯಾಂಪಲ್‌ಗಳನ್ನು ಮಧುಮೇಹಕ್ಕಾಗಿ ಪರೀಕ್ಷಿಸಲಾಗಿದೆ. ಅವುಗಳ ಪೈಕಿ ಶೇ.18ರಷ್ಟು ಜನರು ಮಧುಮೇಹದಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ 30-40 ವಯಸ್ಸಿನವರಲ್ಲೇ ಅತಿಹೆಚ್ಚು, ಅಂದರೆ ಶೇ.17ರಷ್ಟು ಜನರಲ್ಲಿ ಮಧುಮೇಹ ಕಂಡುಬಂದಿದೆ. 40-50 ವಯಸ್ಸಿನ ಶೇ.16ರಷ್ಟು ಜನರಲ್ಲಿ, 20-30 ವಯಸ್ಸಿನ ಶೇ.16ರಷ್ಟು ಜನರಲ್ಲಿ ಮಧುಮೇಹ ಪತ್ತೆಯಾಗಿದೆ ಎಂದು ಹ್ಯಾನ್ಸ್‌ ನ್ಯೂಸ್‌ ಸವೀರ್‍ಸ್‌ ವರದಿ ಮಾಡಿದೆ.

ಮಹಾಮಾರಿ ಕೊರೋನಾಗೆ ಬಿಪಿ, ಶುಗರ್‌ ರೋಗಿಗಳೇ ಅಧಿಕ ಬಲಿ!

ಇದೇ ವೇಳೆ, ಕೇರಳದ ಕೊಚ್ಚಿಯಲ್ಲಿ ಪರೀಕ್ಷೆಗೆ ಒಳಪಡಿಸಿದ 70 ಸಾವಿರಕ್ಕೂ ಹೆಚ್ಚು ರಕ್ತದ ಮಾದರಿಗಳಲ್ಲಿ ಶೇ.16ರಷ್ಟುಜನರಲ್ಲಿ ಮಧುಮೇಹ ಪತ್ತೆಯಾಗಿದೆ. ದೇಶದ ಒಟ್ಟು ಸರಾಸರಿ ಪರಿಗಣಿಸಿದರೆ ಭಾರತದಲ್ಲಿ (2017ರಲ್ಲಿ) ಶೇ.8.7ರಷ್ಟುಜನರಿಗೆ ಮಧುಮೇಹವಿದೆ ಎಂದು ಹೇಳಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಶೇ.18ರಷ್ಟುಜನರಲ್ಲಿ ಮಧುಮೇಹ ಪತ್ತೆಯಾಗಿರುವುದರಿಂದ ಐಟಿ ರಾಜಧಾನಿ ಬೆಂಗಳೂರು ಇದೀಗ ಮಧುಮೇಹದ ರಾಜಧಾನಿಯೂ ಆಗುವತ್ತ ಧಾವಿಸುತ್ತಿದೆ ಎಂಬ ಆತಂಕ ಮೂಡಿದೆ.

ಇನ್ನು ಬೆಂಗಳೂರಿನಲ್ಲಿ ಮಹಿಳೆಯರಿಗಿಂತ ಪುರುಷರಲ್ಲೇ ಮಧುಮೇಹ ಹೆಚ್ಚು ಕಂಡುಬಂದಿದೆ. ಪರೀಕ್ಷೆಗೆ ಒಳಪಟ್ಟಒಟ್ಟು ಪುರುಷರಲ್ಲಿ ಶೇ.25ರಷ್ಟು ಜನರಲ್ಲಿ ಮಧುಮೇಹವಿದ್ದರೆ, ಶೇ.23ರಷ್ಟು ಮಹಿಳೆಯರಲ್ಲಿ ಮಧುಮೇಹ ಕಂಡುಬಂದಿದೆ. ಜೀವನಶೈಲಿಗೆ ಸಂಬಂಧಿಸಿದ ರೋಗವಾಗಿರುವ ಇದು 2025ರ ವೇಳೆಗೆ ದೇಶದಲ್ಲಿ ದುಪ್ಪಟ್ಟಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಅತಿಯಾದ ನಗರೀಕರಣದಿಂದಾಗಿ ಹೆಚ್ಚುತ್ತಿರುವ ಆಲಸ್ಯದ ಜೀವನಶೈಲಿ, ಅನಾರೋಗ್ಯಕರ ಆಹಾರ, ಅನಿಯಂತ್ರಿತ ಮದ್ಯ ಹಾಗೂ ತಂಬಾಕು ಸೇವನೆ, ನಿದ್ದೆ ಹಾಗೂ ವ್ಯಾಯಾಮದ ಕೊರತೆ ಮತ್ತು ಒತ್ತಡದ ಹೆಚ್ಚಳ ಇವು ಮಧುಮೇಹ ಹೆಚ್ಚಲು ಕಾರಣವಾಗಿವೆ.