Asianet Suvarna News Asianet Suvarna News

ಬೆಳಗಾವಿ: 25 ದಿನವಾದರೂ ಸಿಗದ ಚಿರತೆ, ಹೆಚ್ಚಿದ ಆತಂಕ

ಗಾಲ್ಫ್‌ ಮೈದಾನದ ಒಳಗಡೆ ಸಿಬ್ಬಂದಿ ನಿರಂತರವಾಗಿ ಶೋಧ ನಡೆಸುತ್ತಿದ್ದಾರೆ. ಚಿರತೆ ಸೆರೆ ಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ

Increased Anxiety Due to Not Yet Leopard Catch in Belagavi grg
Author
First Published Aug 30, 2022, 11:50 AM IST

ಬೆಳಗಾವಿ(ಆ.30):  ಕಳೆದ 25 ದಿನಗಳಿಂದ ನಗರದ ಜನರಲ್ಲಿ ಆತಂಕ ಮೂಡಿಸಿರುವ ಚಿರತೆಯ ಕಾರ್ಯಾಚರಣೆ ಸೋಮವಾರವೂ ವಿಫಲವಾಗಿದೆ. ಅರಣ್ಯ ಸಿಬ್ಬಂದಿ ಗಾಲ್ಫ್‌ ಮೈದಾನದಲ್ಲಿ ಚಿರತೆಯ ಶೋಧ ಮುಂದುವರಿಸಿದ್ದಾರೆ.

ಇಲ್ಲಿನ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್‌ ಮೈದಾದನದಲ್ಲಿ ಬಹಿರಂಗವಾಗಿ ಚಿರತೆ ಕಾಣಿಸಿಕೊಂಡಿದ್ದು ಕೇವಲ ನಾಲ್ಕು ಬಾರಿ. ಕಳೆದ ಸೋಮವಾರ ಶರವೇಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಕಣ್ಣು ಮುಂದೆಯೇ ಗಾಲ್ಫ್‌ನಲ್ಲಿ ಮರೆಯಾಗಿರುವ ಚಿರತೆ ಶೋಧಕ್ಕೆ ಸಕ್ರೆಬೈಲು ಆನೆ ಬಿಡಾರದ ಎರಡೂ ಆನೆಗಳು ಸೇರಿದಂತೆ ಸುಮಾರು 350ಕ್ಕೂ ಅಧಿಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದರೂ ಚಾಲಾಕಿ ಚಿರತೆ ಮಾತ್ರ ಪತ್ತೆಯಾಗಲಿಲ್ಲ. ಗಾಲ್ಫ್‌ ಮೈದಾನದ ಒಳಗಡೆ ಸಿಬ್ಬಂದಿ ನಿರಂತರವಾಗಿ ಶೋಧ ನಡೆಸುತ್ತಿದ್ದಾರೆ. ನಗರದಲ್ಲಿ ಜನರ ಆತಂಕಕ್ಕೆ ಕಾರಣವಾಗಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಬೆಳಗಾವಿ: ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಲಾಕಿ ಚಿರತೆ, 23ನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯಾಚರಣೆ

ಕಳೆದ ಎರಡೂ ದಿನಗಳಿಂದ ಗಾಲ್ಫ್‌ ಮೈದಾನದಲ್ಲಿರುವ ಚಿರತೆ ಟ್ರ್ಯಾಪ್‌ ಕ್ಯಾಮರಾದಲ್ಲಿ ಪತ್ತೆಯಾಗಿಲ್ಲ. ಕಾರ್ಯಾಚರಣೆಯ ವೇಳೆ ಹೆಜ್ಜೆ ಗುರುತು ಪತ್ತೆಯಾಗಿವೆ. ಮಳೆಯ ಕಾರಣದಿಂದ ಯಲ್ಲೋ ಅಲರ್ಟ್‌ ಇರುವುದರಿಂದ ಸಿಬ್ಬಂದಿಯಿಂದ ಒಳಗಡೆ ಶೋಧ ಕಾರ್ಯ ನಡೆಸಿದ್ದಾರೆ. ಚಿರತೆ ಹಿಡಿಯಬೇಕಾದರೆ 4 ದಿನ ಚಿರತೆನ್ನು ಮುಕ್ತವಾಗಿ ಬಿಡಬೇಕಿದೆ. ಆದರೆ, ಜನರ ಅಪೇಕ್ಷೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಮಳೆ ಕೂಡ ಆಗುತ್ತಿದೆ. ಕೆಲವೊಂದು ಸಮಸ್ಯೆ ಆಗುತ್ತಿದೆ. ಚಿರತೆ ಚಲನವಲನ ತೋರಿಸಿಲ್ಲ. ಇವತ್ತು ಅಥವಾ ನಾಳೆ ಯಲ್ಲೋ ಅಲರ್ಟ್‌ ಇರುವುದರಿಂದ ಕ್ಯಾಮೆರಾ ಟ್ರ್ಯಾಪ್‌ ಮೂಲಕವೇ ಕಾರ್ಯಾಚರಣೆ ಮಾಡುತ್ತೇವೆ. ಇನ್ನು ಮಳೆ ಇರುವ ಹಿನ್ನೆಲೆ ಈಗ ಒಳಗಡೆ ಕೇವಲ ಆನೆಯ ಮೂಲಕ ಕನಿಷ್ಠ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕಡಾಡಿ ಭೇಟಿ, ಪರಿಶೀಲನೆ

ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ 25ನೇ ದಿನಕ್ಕೆ ಕಾಲಿಟ್ಟಹಿನ್ನೆಲೆಯಲ್ಲಿ ಸೋಮವಾರ ನಗರದ ಗಾಲ್ಫ್‌ ಮೈದಾನಗೆ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅರಣ್ಯಾಧಿಕಾರಿಗಳ ಜತೆಗೆ ಚಿರತೆ ಕಾರ್ಯಾಚರಣೆ ಬಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಚರ್ಚೆ ನಡೆಸಿದರು. ಕಾರ್ಯಾಚರಣೆ ಬಗ್ಗೆ ಸಂಪೂರ್ಣ ವಿವರವನ್ನು ಪಡೆದ ಬಳಿಕ ಗಾಲ್ಫ್‌  ಮೈದಾನ ಸುತ್ತಿದ ಈರಣ್ಣ ಕಡಾಡಿ ಬೋನ್‌, ಕ್ಯಾಮೆರಾ ಇಟ್ಟಸ್ಥಳಗಳನ್ನು ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿರತೆ ಹಿಡಿಯುವಲ್ಲಿ ಸರ್ಕಾರ ಯಾವುದೇ ರೀತಿ ವಿಫಲ ಆಗಿಲ್ಲ. ಅಧಿಕಾರಿಗಳು ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಅರಣ್ಯ, ಕಂದಾಯ, ಪೊಲೀಸ್‌ ಇಲಾಖೆ ಸಮನ್ವಯಕ್ಕೆ ಸಮಿತಿ ರಚಿಸಲು ಜಿಲ್ಲಾಧಿಕಾರಿಗೆ ಈ ಬಗ್ಗೆ ನಾನು ಸೂಚನೆ ನೀಡುತ್ತೇನೆ ಎಂದು ಈರಣ್ಣ ಕಡಾಡಿ ಸ್ಪಷ್ಟಪಡಿಸಿದರು.

ಬೆಳಗಾವಿ: ಗಂಡು ಚಿರತೆ ಸರೆಗೆ ಬೋನುಗಳಿಗೆ ಹೆಣ್ಣು ಚಿರತೆ ಯೂರಿನ್‌ ಸ್ಪ್ರೇ

ಚಿರತೆಗೆ ಹಾನಿ ಮಾಡದಂತೆ ಮೌನ ಪ್ರತಿಭಟನೆ

ನಗರದ ಗಾಲ್ಫ್‌ ಮೈದಾನದಲ್ಲಿ ಕಳೆದ 25 ದಿನಗಳಿಂದ ಚಿರತೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ್ದಾರೆ. ಮತ್ತೊಂದೆಡೆ ಗಾಲ್ಫ್‌ ಮೈದಾನದ ಹೊರಗಡೆ ಪ್ರಾಣಿ ಪ್ರಿಯರು ಮೌನ ಪ್ರತಿಭಟನೆ ನಡೆಸಿದರು.

ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಣಿಪ್ರಿಯರು ಗಾಲ್ಫ್‌ ಮೈದಾನದ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಕೈಯಲ್ಲಿ ಭಿತ್ತಿಪತ್ರ ಹಿಡಿದು ಚಿರತೆಗೆ ಹಾನಿ ಮಾಡದಂತೆ ಮನವಿ ಮಾಡಿಕೊಂಡರು. ನಾಡಿಗೆ ಬಂದ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಿರಿ. ಚಿರತೆ ಆಹಾರ ಹುಡಿಕೊಂಡು ಬಂದಿದೆ. ಚಿರತೆ ಹಿಡಿಯುವಂತೆ ಬೆಳಗಾವಿ ಜನತೆ ಒತ್ತಡ ಹಾಕುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಡಿ. ಡೋಂಟ್‌ ಕಿಲ್‌ ಮೀ ಎಂಬ ಭಿತ್ತಿಪತ್ರ ಹಿಡಿದು ಚಿರತೆ ಪರ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.ಇನ್ನು ವಿದ್ಯಾರ್ಥಿಗಳು ಮತ್ತು ಪ್ರಾಣಿಪ್ರಿಯರ ಮೌನ ಪ್ರತಿಭಟನೆಗೆ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ ಸಾಥ್‌ ಕೊಟ್ಟರು.
 

Follow Us:
Download App:
  • android
  • ios