ರಾಜ್ಯಕ್ಕೆ ಆಕ್ಸಿಜನ್ ನಿಗದಿ ಪ್ರಮಾಣ 1400 ಮೆಟ್ರಿಕ್ ಟನ್‌ಗೆ ಹೆಚ್ಚಿಸಿ: ಶೆಟ್ಟರ್
* ಕೇಂದ್ರ ಸರ್ಕಾರಕ್ಕೆ ಸಚಿವ ಜಗದೀಶ ಶೆಟ್ಟರ್ ಮನವಿ
* ಕಳೆದ ವಾರದವರೆಗೂ ಆಕ್ಸಿಜನ್ ಕೊರತೆ ಇತ್ತು
* ಕೇಂದ್ರ ಸಚಿವ ಪಿಯೂಷ್ ಗೋಯಲ್‌ರಿಂದ ಸಕಾರಾತ್ಮಕ ಸ್ಪಂದನೆ
ಹುಬ್ಬಳ್ಳಿ(ಮೇ.14): ಕೇಂದ್ರ ಸರ್ಕಾರ ರಾಜ್ಯಕ್ಕೆ 1015 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿ ಮಾಡಿದೆ. ಇದನ್ನು 1400 ಮೆಟ್ರಿಕ್ ಟನ್‌ಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್‌ಹೌಸ್ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
"
ಕಳೆದ ವಾರದವರೆಗೂ ರಾಜ್ಯದ ಆಕ್ಸಿಜನ್ ಕೊರತೆ ಸಾಕಷ್ಟಿತ್ತು. ಈ ಸಂಬಂಧ ಸರ್ಕಾರ ತಮ್ಮನ್ನು ಆಕ್ಸಿಜನ್ ವಿಷಯವಾಗಿ ಉಸ್ತುವಾರಿಯನ್ನಾಗಿ ಮಾಡಿತ್ತು. ಬಳಿಕ ಸಭೆ ನಡೆಸಿ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಆಕ್ಸಿಜನ್ ಕೊರತೆ ನೀಗಿಸಲು ಶ್ರಮಿಸಲಾಗಿದೆ. ಕೇಂದ್ರ ಸರ್ಕಾರ ಹಂತ ಹಂತವಾಗಿ ರಾಜ್ಯದ ಆಕ್ಸಿಜನ್ ನಿಗದಿ ಪ್ರಮಾಣವನ್ನು ಹೆಚ್ಚಿಸುತ್ತಾ ಬಂದಿದೆ. 965 ಮೆಟ್ರಿಕ್ ಟನ್ ಇದ್ದ ಪ್ರಮಾಣವನ್ನು ಈಗ 1015 ಟನ್‌ಗೆ ಏರಿಸಿದೆ. ರಾಜ್ಯಕ್ಕೆ ಓರಿಸ್ಸಾ ಹಾಗೂ ಜಾರ್ಖಂಡ್‌ನ ಜೆಮಶೆಡ್‌ಪುರದಿಂದ ಆಕ್ಸಿಜನ್ ಸರಬರಾಜು ಆಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಶವ ಮುಟ್ಟಲು ಕುಟುಂಬಸ್ಥರ ಹಿಂಜರಿಕೆ
ಮೇ 11ರಂದು ಜೆಮಶೆಡ್‌ಪುರದಿಂದ ಹೊರಟಿದ್ದ 120 ಮೆಟ್ರಿಕ್ ಟನ್ ಆಕ್ಸಿಜನ್ 6 ಟ್ಯಾಂಕರ್‌ಗಳು ರಾಜ್ಯಕ್ಕೆ ಬಂದು ತಲುಪಿವೆ. ಬೆಹರಾನ್ ಮತ್ತು ಕುವೈತ್‌ನಿಂದ ಹಡಗಿನ ಮೂಲಕ ಆಗಮಿಸಿದ 180 ಮೆಟ್ರಿಕ್ ಟನ್ ಆಕ್ಸಿಜನ್ ಸಹ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದೆ. ಇನ್ನೂ 6ರಿಂದ 8 ಟ್ಯಾಂಕರ್ ಆಕ್ಸಿಜನ್ ರಾಜ್ಯಕ್ಕೆ ಬರಬೇಕಿದೆ. ಮೇ 16ರಂದು ಐ.ಎಸ್.ಓ ಕಂಟೇನರ್ ಟ್ಯಾಂಕ್ ರಾಜ್ಯಕ್ಕೆ ಬರಲಿದ್ದು, ಇದನ್ನು ಹುಬ್ಬಳ್ಳಿ-ಧಾರವಾಡಕ್ಕೆ ನೀಡಲಾಗುವುದು. ಇದರಿಂದ ಬಳ್ಳಾರಿಯಿಂದ ಆಕ್ಸಿಜನ್ ತರಲು ಅನುಕೂಲವಾಗಲಿದೆ. ಆಕ್ಸಿಜನ್ ಸರಬರಾಜು ಮೇಲುಸ್ತುವಾರಿಗಾಗಿ 5 ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡ ದಿನದ 24 ಗಂಟೆಯೂ ಆಕ್ಸಿಜನ್ ಸರಬರಾಜು ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ರೀತಿ ಆಕ್ಸಿಜನ್ ಕೊರತೆ ಉಂಟಾಗಿಲ್ಲ ಎಂದರು.
ಸದ್ಯ ರಾಜ್ಯಕ್ಕೆ ಓರಿಸಾ ಹಾಗೂ ಜೆಮಶೆಡ್‌ಪುರದಿಂದ ಆಕ್ಸಿಜನ್ ಸರಬರಾಜು ಆಗುತ್ತಿದೆ. ರಾಜ್ಯದಲ್ಲಿ ಜಿಂದಾಲ್ ಸೇರಿದಂತೆ ಹಲವು ಕಡೆ 1100 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ಈ ಆಕ್ಸಿಜನ್ ನೆರೆಯ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ಇದರ ಬದಲು ರಾಜ್ಯದಲ್ಲಿ ಉತ್ಪಾದಿಸುವ ಆಕ್ಸಿಜನ್ ರಾಜ್ಯದಲ್ಲೇ ಬಳಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಇದಕ್ಕೂ ಅನುಮತಿ ನೀಡಲಿದೆ ಎಂದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona