ಮಯೂರ ಹೆಗಡೆ

ಹುಬ್ಬಳ್ಳಿ(ಮೇ.14): ಪಿಪಿಇ ಕಿಟ್‌ ಹಾಕ್ಕೊಂಡಿರ್ತಾರ್ರಿ, ಆದ್ರೂ ತಮ್ಮವರ ಡೆಡ್‌ಬಾಡಿ ಮುಟ್ಟಾಕ ಹಿಂಜರಿತಾರ..ನಾವ್‌ ಹೆಣ ಕೆಳಗಿಳಿಸಿ ಚಿತೆ ಮ್ಯಾಲಿಡ್ತಿವಿ..ಕುಣಿಯಾಗ್‌ ಹಾಕಕ ಹೆಲ್ಪ್‌ ಮಾಡ್ತಿವ್ರಿ. ಇದು ಕೋವಿಡ್‌ನಿಂದ ಮೃತಪಟ್ಟವರ ಶವ ಸಾಗಿಸುವ ಆ್ಯಂಬುಲೆನ್ಸ್‌ ಚಾಲಕರ ಮಾತು.

ಕೋವಿಡ್‌ಗೆ ಬಲಿಯಾದವರನ್ನು ಹಳೆ ಹುಬ್ಬಳ್ಳಿಯ ಹೆಗ್ಗೇರಿ ಸ್ಮಶಾನ, ವಿದ್ಯಾನಗರ ಸ್ಮಶಾನ, ಧಾರವಾಡದ ಹೊಸಯಲ್ಲಾಪುರ ಸ್ಮಶಾನ, ಗುಲಗಂಜಿಕೊಪ್ಪ ಸ್ಮಶಾನ, ಕಾರವಾರ ರಸ್ತೆಯಲ್ಲಿನ ಕ್ರಿಶ್ಚಿಯನ್‌ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಮೃತದೇಹವನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ಕೊಂಡೊಯ್ಯಲು ಮಹಾನಗರ ಪಾಲಿಕೆ ಐದು ವಾಹನಗಳನ್ನು ಉಚಿತವಾಗಿಟ್ಟಿದೆ. ಕೆಲ ಸಂಘಟನೆಗಳು, ಸಮಾಜ ಸೇವಕರು ಉಚಿತವಾಗಿ ಈ ಕಾರ್ಯ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳೂ ಶವ ಸಾಗಿಸಲು ವಾಹನಗಳನ್ನು ಇಟ್ಟಿವೆ. ಹೀಗೆ ಶವ ಸಾಗಾಟದ ವಾಹನ ಚಾಲಕರು ಕೇವಲ ವಾಹನ ಚಾಲನೆ ಮಾತ್ರ ಮಾಡುತ್ತಿಲ್ಲ. ಮೃತದೇಹವನ್ನು ವಾಹನಕ್ಕೆ ಹಾಕಿಕೊಳ್ಳುವುದು, ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಸಹಾಯ ಮಾಡುವುದನ್ನೂ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಅವರ ಭಾವನೆಗಳು ಇಲ್ಲಿವೆ.

"

ಇಷ್ಟು ದಿನ ಖಾಸಗಿ ಗೂಡ್ಸ್‌ ವಾಹನ ಚಾಲನೆ ಮಾಡುತ್ತಿದ್ದೆ. ಕೋವಿಡ್‌ ಕಾರಣಕ್ಕೆ ಮಾಲೀಕರು ಗಾಡಿ ನಿಲ್ಲಿಸಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆ ಉಚಿತವಾಗಿ ಇಟ್ಟಿರೊ ಗಾಡಿಗೆ ಚಾಲಕನಾಗಿ ಸೇರಿದ್ದೇನೆ. ಸರಕನ್ನು ತುಂಬಿಕೊಂಡು ಹೋಗುತ್ತಿದ್ದುದಕ್ಕೂ, ಶವಗಳನ್ನ ಸಾಗಿಸೋದಕ್ಕೂ ಭಾರಿ ವ್ಯತ್ಯಾಸ ಇದೆ ಅನ್ನೋದು ಮೊದಲ ದಿನವೇ ಗೊತ್ತಾಯ್ತು. ಈಗ ಸಾಗಿಸುತ್ತಿರೊದು ಸರಕನ್ನಲ್ಲ, ಸಾವು ನೋವುಗಳನ್ನು ಎಂದು ಆ್ಯಂಬುಲೆನ್ಸ್‌ ಚಾಲಕರೊಬ್ಬರು ಹೇಳಿದರು.
ದಿನ ಮೂರ್ನಾಲ್ಕು ಶವಗಳನ್ನು ಸ್ಮಶಾನಕ್ಕೆ ಸಾಗಿಸ್ತಿದ್ದೇನೆ. ಒಂದೊಂದು ಶವ ಸಾಗಿಸಬೇಕಾದರೂ ಬೇರೆ ಪಿಪಿಇ ಕಿಟ್‌ ತೊಟ್ಟು ಹೋಗುತ್ತೇವೆ. ಶವದ ಜತೆಗೆ ಮೃತರ ಮಕ್ಕಳು ಬರೋದು ಕಡಿಮೆ ನೋಡಿದ್ದೇನೆ. ಯಾರೋ ಸಂಬಂಧಿಕರು ಬಂದಿರುತ್ತಾರೆ. ಅವರೂ ಪಿಪಿಇ ಕಿಟ್‌ ಧರಿಸಿರುತ್ತಾರೆ. ಆದರೆ, ಆಸ್ಪತ್ರೆಯಲ್ಲೇನೊ ಸಿಬ್ಬಂದಿ ಆ್ಯಂಬುಲೆನ್ಸ್‌ಗೆ ಶವ ಹಾಕುತ್ತಾರೆ. ಆದರೆ ಸ್ಮಶಾನದಲ್ಲಿ ಶವ ಇಳಿಸಲು ಸಿಬ್ಬಂದಿ ಇಲ್ಲ.

ಕೊರೋನಾ ಸೋಂಕಿತರ ಜೀವ ರಕ್ಷಣೆಯೇ ದೊಡ್ಡ ತಲೆನೋವು

ಆದರೆ, ಕುಟುಂಬಸ್ಥರು ತಮ್ಮವರ ಶವ ಮುಟ್ಟಲೂ ಹಿಂಜರಿಯುತ್ತಾರೆ. ಹೆದರುತ್ತಾರೆ. ಅಲ್ಲದೆ ಕೆಲವರು ‘ಬೇಗ ಬೇಗ ಮುಗಿಸ್ರಿ’ ಎಂದು ಕಿರಿಕಿರಿಯನ್ನೂ ಮಾಡ್ತಾರೆ. ಹೀಗಾಗಿ ನಾವೇ ಶವವನ್ನು ಚಿತೆಯ ಮೇಲೆ ಇಡುವವರೆಗೂ ಅಥವಾ ಕುಣಿಗೆ ಹಾಕುವ ಕೆಲಸ ಮಾಡಬೇಕಾಗಿದೆ. ಮಾನವೀಯತೆಗಾಗಿ ಈ ಕೆಲಸ ಮಾಡ್ತೇವೆ. ಇಲ್ಲದಿದ್ದರೆ ಶವ ಆ್ಯಂಬುಲೆನ್ಸ್‌ನಲ್ಲೆ ಇರಬೇಕಾಗುತ್ತದೆ. ಒಂದೆರಡು ದಿನ ನೋಡಿ ಮೇಲಧಿಕಾರಿಗೆ ಸಿಬ್ಬಂದಿ ನೇಮಿಸುವಂತೆ ತಿಳಿಸುತ್ತೇವೆ ಎಂದು ಚಾಲಕರೊಬ್ಬರು ಹೇಳಿದರು.

ನಾನು ಕೋವಿಡ್‌ ಶವಗಳನ್ನು ಸಾಗಿಸೊ ಆ್ಯಂಬುಲೆನ್ಸ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಈ ಕೆಲಸ ಮಾಡ್ತಿರೊದಕ್ಕೆ ವೈಯಕ್ತಿಕವಾಗಿ ನನಗೇನೂ ಬೇಸರವಿಲ್ಲ. ಆದರೆ, ಅಕ್ಕಪಕ್ಕದವರು ಬೇರೆಯವರು ಭಯಪಟ್ಟುಕೊಳ್ಳಬಾರದು ಎಂಬ ಕಾರಣಕ್ಕೆ ಹೇಳುತ್ತಿಲ್ಲ. ಏಕೆಂದರೆ ಕೋವಿಡ್‌ ಭಯವೂ ರೋಗದಷ್ಟೇ ಭೀಕರ ಎನ್ನುತ್ತಾರೆ ಇನ್ನೊಬ್ಬ ಚಾಲಕ.

ಮೃತದೇಹ ನೋಡಿ, ಪತ್ನಿ, ಮಕ್ಕಳು ಸಂಬಂಧಿಕರ ಕಣ್ಣೀರು ನೋಡಿ ಮೈ ನಡುಗುತ್ತದೆ. ನನ್ನ ಕುಟುಂಬ ನೆನಪಾಗುತ್ತದೆ. ಮನಸ್ಸು ಕಲ್ಲಾಗಿಸಿಕೊಳ್ತೇನೆ. ಸಾಗಿಸುತ್ತಿರೊದು ಶವ ಅಲ್ಲ ಬೇರೆನೋ ಎಂದುಕೊಳ್ಳುತ್ತೇನೆ. ಬೆಳಗ್ಗೆ ಕೆಲಸಕ್ಕೆ ಹೋದ ಬಳಿಕ ಆಗೀಗ ಟೀ ಕುಡಿಯೋದು ಬಿಟ್ಟರೆ ಮತ್ತೇನೂ ಸೇವಿಸಲ್ಲ. ಹೀಗೆ ಟೀ ಕುಡಿಯುವಾಗಲೂ ಕಂಟ್ರೋಲ್‌ ರೂಂನಿಂದ ಶವವೊಂದಿದೆ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತೆ ಕರೆ ಬರುತ್ತದೆ. ಹಂಗಾಗಿ ರಾತ್ರಿ ಮನೆಗೆ ಹೋಗಿಯೇ ಊಟ ಮಾಡೋದು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಚಾಲಕರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona