ಕಾವೇರಿ ನಾಡಿನ ಜೀವ ನದಿ ಎನ್ನುತ್ತೇವೆ. ಆದರೆ ತವರು ಜಿಲ್ಲೆಯಲ್ಲೇ ಹುಟ್ಟಿ ಹರಿಯುವ ಜೀವನಾಡಿ ತವರು ಜಿಲ್ಲೆಯಲ್ಲೇ ಅವಾಂತರ ಸೃಷ್ಟಿಸುವುದು ಸರ್ವ ಸಾಮಾನ್ಯವಾಗಿ ಹೋಗಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.09): ಕಾವೇರಿ ನಾಡಿನ ಜೀವ ನದಿ ಎನ್ನುತ್ತೇವೆ. ಆದರೆ ತವರು ಜಿಲ್ಲೆಯಲ್ಲೇ ಹುಟ್ಟಿ ಹರಿಯುವ ಜೀವನಾಡಿ ತವರು ಜಿಲ್ಲೆಯಲ್ಲೇ ಅವಾಂತರ ಸೃಷ್ಟಿಸುವುದು ಸರ್ವ ಸಾಮಾನ್ಯವಾಗಿ ಹೋಗಿದೆ. ಇದನ್ನು ತಪ್ಪಿಸುವುದಕ್ಕಾಗಿಯೇ ನಿರ್ಮಿಸಿದ ತಡೆಗೋಡೆ ಹತ್ತಾರು ಬಡಾವಣೆಗಳ ನೂರಾರು ಕುಟುಂಬಗಳನ್ನು ಇಂದಿಗೂ ನೆಮ್ಮದಿಯಾಗಿ ಇಲ್ಲದಂತೆ ಮಾಡಿದೆ. ಭೋರ್ಗರೆದು ತುಂಬಿ ಹರಿಯುವ ಕಾವೇರಿ ನದಿ, ನದಿ ತಟದಲ್ಲಿಯೇ ಇರುವ ನೂರಾರು ಮನೆಗಳು. ಮಳೆಗಾಲ ಬಂತೆಂದರೆ ಅಪಾಯದ ಮಟ್ಟ ಮೀರಿ ಅರಿಯುವ ಜೀವನದಿ. ಹೌದು ಉಳಿದ ಸಮಯದಲ್ಲಿ ಪ್ರಶಾಂತವಾಗಿ ಹರಿದು ಜನರ ಬದುಕನ್ನು ಹಸನು ಮಾಡುವ ಕಾವೇರಿ, ಮಳೆಗಾಲದಲ್ಲಿ ಮಾತ್ರ ರುದ್ರರೂಪ ತಾಳಿ ಬಿಡುತ್ತಾಳೆ.
ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಭಾರೀ ಭೂಕುಸಿತ ಪ್ರವಾಹ ಬಂದಿದ್ದು ಗೊತ್ತೇ ಇದೆ. ಆ ವೇಳೆ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಕಾವೇರಿ ನದಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಇದನ್ನು ತಪ್ಪಿಸುವುದಕ್ಕಾಗಿಯೇ ನಂತರದ ದಿನಗಳಲ್ಲಿ ತಡೆಗೋಡೆ ನಿರ್ಮಿಸಿ ಜನರಿಗೆ ರಕ್ಷಣೆ ಕೊಡಲು ನಿರ್ಧರಿಸಲಾಗಿತ್ತು. ಯೋಜನೆಯಂತೆ ಹತ್ತಾರು ಕೋಟಿ ವ್ಯಯಿಸಿದ ಕಾಮಗಾರಿಯನ್ನೇನೋ ಆರಂಭಿಸಲಾಯಿತು. ಆದರೆ ತಡೆಗೋಡೆ ಅಪೂರ್ಣ ಆಗಿರುವುದರಿಂದ ಮಳೆಗಾಲದಲ್ಲಿ ಇಂದಿಗೂ ನಿದ್ದೆಯಿಲ್ಲದೆ ರಾತ್ರಿ ಇಡೀ ಪರದಾಡುವುದು ತಪ್ಪಿಲ್ಲ.
ಕುಶಾಲನಗರದ ಇಂದಿರಾಬಡಾವಣೆ, ಶೈಲಜಾ ಬಡಾವಣೆ, ರಸೂಲ್ ಲೇಔಟ್, ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆ ಸೇರಿದಂತೆ ಒಟ್ಟು ಎಂಟು ಬಡಾವಣೆಗಳಿಗೆ ತಡೆಗೋಡೆ ನಿರ್ಮಿಸುವ ಉದ್ದೇಶವಿತ್ತು. ಆದರೆ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಗಳಿಗೆ ಮಾತ್ರವೇ 350 ರಿಂದ 400 ಮೀಟರ್ ತಡೆಗೋಡೆ ನಿರ್ಮಿಸಲಾಗಿದೆ. ಆ ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ. ಎರಡು ಮೂರು ಕಡೆಗಳಲ್ಲಿ ಬಡಾವಣೆಗಳಿಂದ ನದಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳಿಗೆ ಗೇಟ್ ವಾಲ್ ಅಳವಡಿಸಿಲ್ಲ. ಇದರಿಂದಾಗಿ ಕಾವೇರಿ ನದಿ ಉಕ್ಕಿ ಹರಿಯಿತ್ತೆಂದರೆ ಇದೇ ಸೇತುವೆ ಮೂಲಕ ಬಡಾವಣೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಲಿದೆ. ಇದರಿಂದಲೇ ಈ ಬಡಾವಣೆಗಳಲ್ಲಿ ಪ್ರವಾಹದ ಎದುರಾಗುವುದು ಖಚಿತ ಎನ್ನುವಂತೆ ಆಗಿದೆ. ಒಂದು ವರ್ಷದ ಹಿಂದೆಯೇ ಕಾವೇರಿ ನದಿಗೆ ತಡೆಗೋಡೆ ನಿರ್ಮಿಸಲು ಆರಂಭಿಸಲಾಗಿತ್ತು.
ಆದರೆ ಇದುವರೆಗೆ ಅದು ಪೂರ್ಣಗೊಂಡಿಲ್ಲ. ಇನ್ನೂ ಎರಡು ತಿಂಗಳ ಕಾಲ ಜಿಲ್ಲೆಯಲ್ಲಿ ಮಳೆ ಸುರಿಯಲಿದೆ. ಅದರಲ್ಲೂ ಜುಲೈ ತಿಂಗಳ ಮಧ್ಯಭಾಗದಿಂದ ಆಗಸ್ಟ್ ತಿಂಗಳ ಮಧ್ಯಭಾಗದವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಈ ವೇಳೆ ಅನಾಹುತ ಎದುರಾಗುವುದನ್ನು ಕಡೆಗಣಿಸುವಂತಿಲ್ಲ. ಒಂದೆಡೆ ಕಾವೇರಿ ನದಿಗೆ ಸ್ವಲ್ವ ಭಾಗದಲ್ಲಿ ಮಾತ್ರವೇ ತಡೆಗೋಡೆ ನಿರ್ಮಿಸಿದ್ದರೆ, ಮತ್ತೊಂದೆಡೆ ಬಹುಭಾಗದಲ್ಲಿ ಕಾವೇರಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ಮರಳು ಮತ್ತು ಹೂಳು ತುಂಬಿದೆ. ಇದರಿಂದಾಗಿ ನದಿಯ ಮಧ್ಯಭಾಗದಲ್ಲೆಲ್ಲಾ ದೊಡ್ಡ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನದಿ ಸರಾಗವಾಗಿ ಹರಿಯದಂತೆ ಆಗಿದೆ.
ಇದರ ಜೊತೆಗೆ ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಿಸಿ ಒಮ್ಮೆಲೆ ನೀರನ್ನು ಹರಿಯ ಬಿಡಲಾಗುತ್ತದೆ. ಹಾರಂಗಿಯಿಂದ ಹರಿದು ಬರುವ ಸಾವಿರಾರು ಕ್ಯೂಸೆಕ್ ನೀರು ಕಾವೇರಿ ನದಿಗೆ ಒಮ್ಮೆಲೆ ಬಂದು ಸೇರುವುದರಿಂದ ಎರಡು ಕಾವೇರಿ ನದಿಯಲ್ಲಿ ಮತ್ತಷ್ಟು ಪ್ರವಾಹ ಹೆಚ್ಚಿ ಬಡಾವಣೆಗಳು ಮುಳುಗುವುದಕ್ಕೆ ಕಾರಣವಾಗುತ್ತಿದೆ. ಹೀಗಾಗಿ ನದಿಯಲ್ಲಿ ಇರುವ ಮರಳು ಹಾಗೂ ಹೂಳನ್ನು ತೆಗೆಯುವುದು ಉತ್ತಮ ಎನ್ನುತ್ತಾರೆ ಸ್ಥಳೀಯರು. ಒಟ್ಟಿನಲ್ಲಿ ಕುಶಾಲನಗರದ ವ್ಯಾಪ್ತಿಯ ನೂರಾರು ಕುಟುಂಬಗಳಿಗೆ ಪ್ರವಾಹದಿಂದ ಮುಕ್ತಿ ಕೊಡಬೇಕೆಂಬ ದೃಷ್ಟಿಯಿಂದಲೇ ತಡೆಗೋಡೆ ನಿರ್ಮಿಸಲಾಗುತ್ತಿದ್ದರೂ ಪೂರ್ಣಗೊಳಿಸದೇ ಇರುವುದರಿಂದ ಜನರು ಪ್ರವಾಹದ ಭೀತಿಯಿಂದ ಮುಕ್ತರಾಗುವುದಕ್ಕೆ ಆಗುತ್ತಿಲ್ಲ.
