Asianet Suvarna News Asianet Suvarna News

ಮುಂದಿನ ತಿಂಗಳೊಳಗೆ ಮೈಸೂರು- ಬೆಂಗಳೂರು ದಶಪಥ ಉದ್ಘಾಟನೆ

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದ್ದು, ಫೆಬ್ರವರಿ ಅಂತ್ಯದೊಳಗೆ ಉದ್ಘಾಟನೆಯಾದಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದರು

Inauguration of Mysore Bangalore Dash path  before February  snr
Author
First Published Jan 6, 2023, 5:48 AM IST

 ಮಹೇಂದ್ರ ದೇವನೂರು

  ಮೈಸೂರು :  ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದ್ದು, ಫೆಬ್ರವರಿ ಅಂತ್ಯದೊಳಗೆ ಉದ್ಘಾಟನೆಯಾದಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ರಾಮನಗರ ತಾಲೂಕು ಜೀಗೇನಹಳ್ಳಿಗೆ ಗುರುವಾರ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಅವರು ಹೆದ್ದಾರಿ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಎಲ್ಲೆಡೆ ಪ್ರಗತಿಯಲ್ಲಿದೆ. ದೇಶದ ಪ್ರಮುಖ ನಗರಗಳನ್ನು ಮತ್ತು ಉಪ ನಗರಗಳನ್ನು ಸಂಪರ್ಕಿಸುವ ಮೂಲಕ ಮೂಲಭೂತ ಸೌಲಭ್ಯ ಅಭಿವೃದ್ಧಿ ಮತ್ತು ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಲವು ರಸ್ತೆ ಕಾಮಗಾರಿ ಕೈಗೊಂಡಿದ್ದು, ಎಲ್ಲವೂ ಪೂರ್ಣಗೊಳ್ಳುವ ಹಂತದಲ್ಲಿದೆ. ಫೆಬ್ರವರಿ ಅಂತ್ಯದೊಳಗೆ ಮೈಸೂರು- ಬೆಂಗಳೂರು ದಶಪಥ ಕಾಮಗಾರಿ ಮುಗಿಯಲಿದೆ ಎಂದರು.

ಆರು ಪಥ ಎಕ್ಸ್‌ಪ್ರೆಸ್‌ ಹೈವೇ ಮತ್ತು ಉಳಿದ ನಾಲ್ಕು ಪಥವು ಸವೀರ್‍ಸ್‌ ರಸ್ತೆಯಾಗಿ ಬಳಕೆ ಆಗಲಿದೆ. 117 ಕಿ.ಮೀ. ಉದ್ದದ ಈ ಯೋಜನೆಯನ್ನು ಎರಡು ಹಂತದಲ್ಲಿ ಕೈಗೊಂಡಿದ್ದು, ಒಟ್ಟಾರೆ . 8,408 ಕೋಟಿ ವೆಚ್ಚ ಮಾಡಲಾಗಿದೆ. 5 ಬೈ ಪಾಸ್‌ ನೀಡಿದ್ದು, ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಿದೆ. ಈ ರಸ್ತೆ ಅಭಿವೃದ್ಧಿಯಿಂದಾಗಿ ಮೈಸೂರಿನಂತಹ ಎರಡನೇ ದರ್ಜೆಯ ನಗರದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ದೊರೆಯುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಜೊತೆಗೆ ಊಟಿ, ಕೇರಳ, ಮಡಿಕೇರಿ, ಮಂಗಳೂರಿಗೆ ಸಂಪರ್ಕ ಸಾಧನೆ ಸುಲಭವಾಗುತ್ತದೆ. ಬೆಂಗಳೂರಿನಿಂದ ಮೈಸೂರಿಗೆ ಕೇವಲ 2 ಗಂಟೆಯಲ್ಲಿ ತಲುಪಬಹುದಾಗಿದೆ ಎಂದರು.

ಈ ಎಲ್ಲಾ ಹೆದ್ದಾರಿ ಕಾಮಗಾರಿಗಳಿಂದಾಗಿ ದೇಶದಲ್ಲಿ ಪ್ರತಿ ವರ್ಷ ಸಂಚಾರ ವೆಚ್ಚವು ಶೇ. 16ರಷ್ಟಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಒಂದಂಕಿಗೆ ಇಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ವಿವರಿಸಿದರು.

ಕೇಂದ್ರ ಹೆದ್ದಾರಿ ಇಲಾಖೆಯಿಂದ ದೇಶದಲ್ಲಿ 10 ಸಾವಿರ ಕಿ.ಮೀ. ಹೆದ್ದಾರಿಯನ್ನು . 4.5 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಒಟ್ಟು 27 ಯೋಜನೆಗಳು ಇದರಲ್ಲಿ ಒಳಗೊಂಡಿದೆ. ಇದರಿಂದ ರಾಷ್ಟ್ರಕ್ಕೆ ಹೆಚ್ಚು ಆದಾಯ ಮತ್ತು ಅಭಿವೃದ್ಧಿಗೆ ನೆರವಾಗುವ ಗುರಿ ಹೊಂದಲಾಗಿದೆ. ಭಾರತಮಾಲಾ ಎಕ್ಸಪ್ರೆಸ್‌ವೇನ ಮೊದಲ ಹಂತದಲ್ಲಿ 6,138 ಕಿ.ಮೀ ರಸ್ತೆಯನ್ನು . 2.78 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈಗ ನಾವು ಎರಡನೇ ಹಂತದ ಕಾಮಗಾರಿಯಲ್ಲಿದ್ದೇವೆ. ಈ 27 ಕಾಮಗಾರಿಯ ಪೈಕಿ 1 ಎಕ್ಸ್‌ಪ್ರೆಸ್‌ ಹೆದ್ದಾರಿ ಮತ್ತು 2 ಆರ್ಥಿಕ ಕಾರಿಡಾರ್‌ ಕರ್ನಾಟಕದ ಮೂಲಕ ಹಾದು ಹೋಗಲಿದೆ ಎಂದು ಅವರು ವಿವರಿಸಿದರು.

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ವೇ ಒಟ್ಟು 262 ಕಿ.ಮೀ. ಇದ್ದು, . 16,730 ಕೋಟಿ ವೆಚ್ಚವಾಗುತ್ತಿದೆ. ಕರ್ನಾಟಕದಲ್ಲಿ ಒಂದು ಹಂತ, ಆಂದ್ರಪ್ರದೇಶದಲ್ಲಿ 2ನೇ ಹಂತ ಮತ್ತು ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮೂರನೇ ಹಂತದ ಕಾಮಗಾರಿ ನಡೆಯುತ್ತಿದೆ. ಕರ್ನಾಟಕದಲ್ಲಿ ಇದು 71 ಕಿ.ಮೀ. ಕ್ರಮಿಸಲಿದೆ. ಇದು 120 ಕಿ.ಮೀ. ವೇಗದ ರಸ್ತೆಯಾಗಿದ್ದು, ಚೆನ್ನೈ ಮತ್ತು ಬೆಂಗಳೂರು ನಡುವಿನ ಅಂತರವನ್ನು ಶೇ. 15 ರಷ್ಟುಕಡಿಮೆ ಮಾಡಲಿದೆ. ಅಂದರೆ 300 ಕಿ.ಮೀ ದೂರದ ರಸ್ತೆ ಈಗ 262 ಕಿ.ಮೀಗೆ ಇಳಿಸಲಾಗಿದ್ದು, 5 ಗಂಟೆ ಪ್ರಯಾಣವನ್ನು 2.30 ಗಂಟೆಗೆ ಇಳಿಸಲಾಗಿದೆ ಎಂದರು.

ಬೆಂಗಳೂರು ನಗರ ರಿಂಗ್‌ ರಸ್ತೆ ಕಾಮಗಾರಿ ಕೈಗೊಂಡಿದ್ದು, 288 ಕಿ.ಮೀ. ಇದ್ದು, ತಮಿಳುನಾಡು ಭಾಗದಲ್ಲಿ 45 ಕಿ.ಮೀ ಇದರಲ್ಲಿ ಸೇರುತ್ತದೆ. ಇದನ್ನು 13,139 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಅಂತೆಯೇ ಸೊಲ್ಲಾಪುರ್‌- ಕರ್ನೂಲ್‌- ಚೆನ್ನೈ ಎಕನಾಮಿಕ್‌ ಕಾರಿಡಾರ್‌, ಬೆಂಗಳೂರು- ಕಡಪ- ವಿಜಯವಾಡ ರಸ್ತೆ, ಮುಂಬೈ- ಕನ್ಯಾಕುಮಾರಿ, ಪುಣೆ- ಬೆಂಗಳೂರು ನ್ಯೂ ಗ್ರೀನ್‌ ಫೀಲ್ಡ್‌ ಕಾಮಗಾರಿ ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.

ಹೆದ್ದಾರಿಯಲ್ಲಿ ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಜೊತೆಗೆ ಆಂಬ್ಯುಲೆನ್ಸ್‌, ಪೊಲೀಸ್‌ ಸವೀರ್‍ಸ್‌, ಪೆಟ್ರೋಲ್‌ ಸೇವೆ, ಹೊಟೇಲ್‌ಗಳನ್ನು ತೆರೆಯಲಾಗುತ್ತದೆ. ಅಗತ್ಯ ಬಿದ್ದರೆ ಏರ್‌ ಆಂಬ್ಯುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.

ಕೆಲವೊಂದು ಭೂ ವ್ಯಾಜ್ಯ ಮುಂತಾದ ಕಾರಣದಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದ್ದು ಬಿಟ್ಟರೆ ಕಾಮಗಾರಿ ಈಗಾಗಲೇ ಪೂರ್ಣಗೊಳಿಸಲಾಗುತ್ತಿತ್ತು. ಆದರೂ ಆದಷ್ಟುಶೀಘ್ರದಲ್ಲಿಯೇ ಸಂಚಾರಕ್ಕೆ ಈ ರಸ್ತೆಯನ್ನು ಮುಕ್ತಗೊಳಿಸಲಾಗುವುದು. ಟೋಲ್‌ ಪಾವತಿ ಎಂಬುದು ಎಲ್ಲರಿಗೂ ಒಂದೇ ಆಗಿದೆ. ಅದು ಅನಿವಾರ್ಯ ಕೂಡ ಎಂದು ಅವರು ತಿಳಿಸಿದರು.

ಈ ವೇಳೆ ಸಚಿವರಾದ ಅಶ್ವತ್ಥ ನಾರಾಯಣ, ಸಿ.ಸಿ. ಪಾಟೀಲ್‌, ಕೆ. ಗೋಪಾಲಯ್ಯ, ಸಂಸದರಾದ ಡಿ.ಕೆ. ಸುರೇಶ್‌, ಪ್ರತಾಪ ಸಿಂಹ, ಶಾಸಕ ಸಿ.ಪಿ. ಯೋಗೇಶ್ವರ್‌, ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌ ರಾಜೇಂದ್ರನ್‌, ಎಸ್ಪಿ ಸಂತೋಷ್‌ ಬಾಬು, ಜಿಪಂ ಸಿಇಒ ದಿಗ್ವಿಜಯ್‌ ಬೋಡ್ಕೆ ಇದ್ದರು.

ವೈಮಾನಿಕ ವೀಕ್ಷಣೆ

ಬೆಂಗಳೂರಿನ ಹೊಸೂರು ಬಳಿ ರಸ್ತೆ ಕಾಮಗಾರಿ ವೀಕ್ಷಣೆ ಬಳಿಕ ಹೆಲಿಕಾಪ್ಟರ್‌ ಮೂಲಕ ತೆರಳಿದ ನಿತಿನ್‌ ಗಡ್ಕರಿ ಅವರು ಮೈಸೂರುವರೆಗೆ ಹೆಲಿಕಾಪ್ಟರ್‌ ಮೂಲಕ ಬಂದು ರಸ್ತೆಯನ್ನು ಪರಿಶೀಲಿಸಿದರು. ನಂತರ ಹಿಂದಿರುಗಿ ರಾಮನಗರದ ಜೀಗೇನಹಳ್ಳಿಯ ಬಳಿ ಹೆದ್ದಾರಿಯಲ್ಲಿಯೇ ಹೆಲಿಕಾಪ್ಟರ್‌ ಇಳಿಸಲಾಯಿತು.

ಬಳಿಕ ಕಾರಿನಲ್ಲಿ ಸಮೀಪದಲ್ಲಿ ಆಯೋಜಿಸಿದ್ದ ರಸ್ತೆಗಳ ನಕ್ಷೆ ಮತ್ತು ವಿವಿಧ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು. ನಂತರ ಬಸ್‌ನಲ್ಲಿ ಮತ್ತದೇ ರಸ್ತೆಯ ಮೂಲಕ ಹಿಂದಿರುಗಿ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನತ್ತ ಪ್ರಯಾಣಿಸಿದರು.

ರಾಷ್ಟ್ರೀಯ ಹೆದ್ದಾರಿಗೆ ಹೆಸರಿಡುವ ಸಂಪ್ರದಾಯ ಇಲ್ಲ. ಅವುಗಳಿಗೆ ಕೇವಲ ಸಂಖ್ಯೆಯನ್ನಷ್ಟೇ ನಮೂದಿಸಲಾಗುತ್ತದೆ. ಎಸ್‌.ಎಂ. ಕೃಷ್ಣ ಅವರು ಬರೆದ ಪತ್ರ ಬಂದು ತಲುಪಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಹೆಸರಿಡಲೇ ಬೇಕು ಎಂದಾದರೆ ಪ್ರಧಾನಿಗಳಿಂದ ಅನುಮತಿ ಪಡೆಯಲಾಗುವುದು.

- ನಿತಿನ್‌ ಗಡ್ಕರಿ, ಕೇಂದ್ರ ಹೆದ್ದಾರಿ ಸಚಿವ.

Follow Us:
Download App:
  • android
  • ios