ಉಡುಪಿ(ಆ.18): ಜಿಲ್ಲೆಯಲ್ಲಿ ಶಂಕರಪುರ ಮಲ್ಲಿಗೆ ಹೂವಿಗೆ ಬೆಲೆ 1250 ರು.ಗಳಿಗೇರಿ ದಾಖಲೆ ಬರೆದಿದೆ. ಆದರೆ ಇದು ಮಲ್ಲಿಗೆ ಬೆಳೆಗಾರರಿಗೆ ಮಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಗ್ರಾಹಕರಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ.

ಆ.15ರಂದು ಉಡುಪಿ ಮಾರುಕಟ್ಟೆಯಲ್ಲಿ ಒಂದು ಅಟ್ಟೆ(3200 ಮಲ್ಲಿಗೆ ಹೂವು)ಗೆ 1250 ರು. ಬೆಲೆ ಇತ್ತು. ಶನಿವಾರ ಮತ್ತೆ ಅದೆ ಬೆಲೆಗೆ ಮಲ್ಲಿಗೆ ಹೂ ಮಾರಾಟವಾಗಿದೆ. ಆದರೆ ಮಲ್ಲಿಗೆ ಬೆಳೆಗಾರರಿಗೆ ಇದರ ಲಾಭ ಸಿಗುತ್ತಿಲ್ಲ, ಕಾರಣ ಗಿಡಗಳಲ್ಲಿ ಮಲ್ಲಿಗೆ ಮೊಗ್ಗು ಬಿಡುತ್ತಿಲ್ಲ, ಆದ್ದರಿಂದ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ, ಪರಿಣಾಮ ಬೆಲೆ ಗಗನಕ್ಕೇರುತ್ತಿದೆ.

ಮೊಗ್ಗುಗಳು ಕಡಿಮೆ:

ಅಚ್ಚರಿ ಎಂದರೆ ಕಳೆದ ಕೆಲವು ದಿನಗಳಿಂದ ಉಡುಪಿಯ ಸಾಕಷ್ಟುಮಂದಿ ಮಲ್ಲಿಗೆ ಬೆಳೆಗಾರರಿಗೆ 100- 200 ಮೊಗ್ಗುಗಳಷ್ಟೇ ಸಿಕ್ಕಿದೆ. ಜಿಲ್ಲೆಯ ಹಿರಿಯ ಪ್ರಗತಿಪರ ಮಲ್ಲಿಗೆ ಬೆಳೆಗಾರ ಬಂಟಕಲ್ಲು ರಾಮಕೃಷ್ಣ ಶರ್ಮ ಅವರ 500 ಮಲ್ಲಿಗೆ ಗಿಡಗಳಲ್ಲಿ ಕೇವಲ 1500 ಮೊಗ್ಗುಗಳಷ್ಟೇ ಸಿಕ್ಕಿದೆ, ಅಂದರೆ 50- 60 ಹೂವಿನ ಗಿಡಗಳಿರುವ ಬೆಳೆಗಾರರ ಸ್ಥಿತಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಮಾರುಕಟ್ಟೆಯಲ್ಲಿ ಬೆಲೆ ಎಷ್ಟೇ ಏರಿದರೂ, ಬಂಡವಾಳ ಹೂಡಿದ ಬೆಳೆಗಾರರ ಕೈಗೆ ಮಾತ್ರ ಅದು ಬರುವುದಿಲ್ಲ ಎನ್ನುತ್ತಾರೆ ಶರ್ಮ.

ಉಡುಪಿ: ರಾಜ್ಯಮಟ್ಟದ ಹುಲಿವೇಷ ಕುಣಿತ ಸ್ಪರ್ಧೆ

ಆ.15ರಂದು ಸ್ವಾತಂತ್ರ್ಯೋತ್ಸವ, ಹೊಸ್ತಿಲಪೂಜೆ, ರಕ್ಷಾಬಂಧನ, ನೂಲಹುಣ್ಣಿಮೆ ಇತ್ಯಾದಿ ಹಬ್ಬಗಳು ಒಂದೇ ದಿನ ಬಂದುದರಿಂದ ಮಲ್ಲಿಗೆ ಹೂವಿಗೆ ಬೇಡಿಕೆ ಹೆಚ್ಚಿತ್ತು. ಶನಿವಾರ ಸಿಂಹ ಸಂಕ್ರಮಣ ಮತ್ತು ಶ್ರೀರಾಘವೇಂದ್ರ ಆರಾಧನೆಯ ಪ್ರಯುಕ್ತ ಮಲ್ಲಿಗೆ ಹೂವಿಗೆ ಬೇಡಿಕೆ ಬಂದಿತ್ತು. ಈ ಅವಕಾಶವನ್ನು ಬಳಸಿಕೊಂಡು ಮಲ್ಲಿಗೆ ವ್ಯಾಪಾರಿಗಳು ಬೆಲೆಯನ್ನು ಏಕ್‌ ದಮ್‌ ಏರಿಸಿದ್ದರು. ಅನಿವಾರ್ಯವಿದ್ದ ಗ್ರಾಹಕರು 2 ಅಟ್ಚೆ ಮಲ್ಲಿಗೆ ತೆಗೆದುಕೊಳ್ಳುವಲ್ಲಿ 1 ಅಟ್ಟೆತೆಗೆದುಕೊಂಡು ತೃಪ್ತಿಪಟ್ಟುಕೊಳ್ಳಬೇಕಾಯಿತು.