ಉಡುಪಿ(ಆ.18): ಕಳೆದ 25 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಭರ್ಜರಿ ಹುಲಿವೇಷ ಧರಿಸಿ ಕುಣಿದು ಜನರಿಗೆ ಭರಪೂರ ಮನರಂಜನೆ ನೀಡುವ ಉಡುಪಿಯ ಅಶೋಕ್‌ ರಾಜ್‌ ಮತ್ತು ಬಳಗವು ತನ್ನ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ರಾಜ್ಯ ಮಟ್ಟದ ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಿದೆ.

ಈ ಬಗ್ಗೆ ಬಳಗದ ಅಧ್ಯಕ್ಷ ಅಶೋಕ್‌ ರಾಜ್‌ ಕಾಡಬೆಟ್ಟು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆ.23ರಂದು ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆಯ ವರೆಗೆ ನಗರದ ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ 12 ತಂಡಗಳಿಗೆ ಅವಕಾಶ ಇದೆ. ಪ್ರತಿಯೊಂದು ತಂಡದಲ್ಲಿ ಕನಿಷ್ಠ 15 ಮಂದಿ ವೇಷಧಾರಿಗಳು ಇರಬೇಕು. ಸಾಂಪ್ರದಾಯಿಕ ಹುಲಿವೇಷಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸೃಜನಶೀಲ ವೇಷಗಳಿದ್ದರೂ ಅದನ್ನು ಪ್ರದರ್ಶಿಸಬಹುದು.

ವಿಜೇತರಿಗೆ ಪ್ರಥಮ 30,333 ರು., ದ್ವಿತೀಯ 20,222 ರು. ಮತ್ತು ತೃತೀಯ 10,111 ರು. ನಗದು ಬಹುಮಾನ ನೀಡಲಾಗುತ್ತದೆ. ಮೂರು ಪ್ರೋತ್ಸಾಹಕ ಬಹುಮಾನಗಳು ಹಾಗೂ ಮೂರು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.

ಉಡುಪಿ: ಬಿಡುವಿನ ನಂತರ ಧಾರಾಕಾರ ಮಳೆ

ಅಶೋಕ್‌ ರಾಜ್‌ ಅಶೋಕ್ರಾಜ್‌ ಬಳಗವು 1995ರಲ್ಲಿ ಪ್ರಾರಂಭವಾಗಿದ್ದು, ನಿರಂತರವಾಗಿ ಹುಲಿವೇಷವನ್ನು ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಹಾಕಲಾಗುತ್ತಿದೆ. ಅಲ್ಲದೆ ಅನೇಕ ಕಡೆಗಳಲ್ಲಿ ಅನೇಕ ಪ್ರಶಸ್ತಿ, ಬಹುಮಾನಗಳನ್ನು ಕೂಡ ತಂಡ ಗೆದ್ದುಕೊಂಡಿದೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಹುಲಿವೇಷ ಪ್ರದರ್ಶನ ಕೊಟ್ಟಿದ್ದೇವೆ ಎಂದು ಅಶೋಕ್‌ ರಾಜ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಿಶೋರ್‌ ರಾಜ್‌, ಗಣೇಶ್‌ ರಾಜ್‌ ಸರಳೇಬೆಟ್ಟು, ವಿನೋದ್‌ ಶೆರಿಗಾರ್‌, ಭಗವಾನ್‌ ದಾಶ್‌ ಇದ್ದರು.