Mysuru : 2022ನೇ ಸಾಲಿನಲ್ಲಿ ಒಟ್ಟು 320 ವಿವಿಧ ಸ್ವತ್ತು ಕಳುವು ಪ್ರಕರಣಗಳ ಪತ್ತೆ
ನಗರ ಪೊಲೀಸ್ ವ್ಯಾಪ್ತಿಯಲ್ಲಿ 2022ನೇ ಸಾಲಿನಲ್ಲಿ ಒಟ್ಟು 320 ವಿವಿಧ ಸ್ವತ್ತು ಕಳುವು ಪ್ರಕರಣಗಳ ಪತ್ತೆಯಾಗಿದ್ದು, 346 ಆರೋಪಿಗಳ ಬಂಧಿಸಲಾಗಿದೆ ಹಾಗೂ ಒಟ್ಟು .3.55 ಕೋಟಿ ಮೌಲ್ಯದ ಕಳುವಾದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ಮೈಸೂರು (ಜ. 01): ನಗರ ಪೊಲೀಸ್ ವ್ಯಾಪ್ತಿಯಲ್ಲಿ 2022ನೇ ಸಾಲಿನಲ್ಲಿ ಒಟ್ಟು 320 ವಿವಿಧ ಸ್ವತ್ತು ಕಳುವು ಪ್ರಕರಣಗಳ ಪತ್ತೆಯಾಗಿದ್ದು, 346 ಆರೋಪಿಗಳ ಬಂಧಿಸಲಾಗಿದೆ ಹಾಗೂ ಒಟ್ಟು .3.55 ಕೋಟಿ ಮೌಲ್ಯದ ಕಳುವಾದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ಮೈಸೂರು ನಗರ ಪೊಲೀಸ್ (Police) ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸ್ವತ್ತು ಕಳುವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರ ಪೊಲೀಸ್ ಘಟಕದಲ್ಲಿ 2022ನೇ ಸಾಲಿನಲ್ಲಿ ಒಟ್ಟು 753 ಪ್ರಕರಣಗಳು (Case) ದಾಖಲಾಗಿದ್ದು, ಇದರಲ್ಲಿ 320 ಪ್ರಕರಣಗಳು ಪತ್ತೆಯಾಗಿವೆ. .6.34 ಕೋಟಿ ಮೌಲ್ಯದ ವಸ್ತುಗಳು ಕಳುವಾಗಿದ್ದು, ಈ ಪ್ರಕರಣಗಳ ಸಂಬಂಧ 346 ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ .3.55 ಕೋಟಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
4 ಕೆ.ಜಿ.600 ಗ್ರಾಂ ಚಿನ್ನಾಭರಣ, ಸುಮಾರು 17 ಕೆ.ಜಿ.ಬೆಳ್ಳಿ ಪದಾರ್ಥ, 184 ದ್ವಿಚಕ್ರ ವಾಹನಗಳು, 4 ಕಾರು/ಜೀಪು, 15 ತ್ರಿಚಕ್ರ ವಾಹನಗಳು, 106 ಮೊಬೈಲ್ ಫೋನ್‌ಗಳು, 18 ಲ್ಯಾಪ್‌ಟಾಪ್‌ಗಳು ಹಾಗೂ .20,97,700 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಮಾಲುಗಳ ಜೊತೆಗೆ ಗೃಹೋಪಯೋಗಿ, ಕೈಗಾರಿಕೋಪಯೋಗಿ ಹಾಗೂ ಇತರೆ ಮಾಲುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
2022ನೇ ಸಾಲಿನಲ್ಲಿ ದರೋಡೆ 4, ಸುಲಿಗೆ 22, ಸರಗಳ್ಳತನ 61, ಕನ್ನ ಕಳುವು (ಹಗಲು ಮತ್ತು ರಾತ್ರಿ) 33, ಮನೆ ಕಳುವು 15, ಕೆಲಸದವರಿಂದ ಕಳ್ಳತನ 5, ವಾಹನ ಕಳುವು 132, ಸಾಮಾನ್ಯ ಕಳುವು 30, ಜಾನುವಾರು ಕಳುವು 2 ಹಾಗೂ 102 ಸಿಆರ್‌ಪಿಸಿಯಲ್ಲಿ 16 ಸೇರಿದಂತೆ ಒಟ್ಟು 320 ಪ್ರಕರಣಗಳು ಪತ್ತೆಯಾಗಿವೆ ಎಂದರು.
ಮಾದಕ ದ್ರವ್ಯ ಮಾರಾಟ, ಬಳಕೆ ನಿಯಂತ್ರಣ:
ನಗರದಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ನಿಯಂತ್ರಣ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 2022ನೇ ಸಾಲಿನಲ್ಲಿ ನಗರದಲ್ಲಿ ಎನ್ ಡಿ ಪಿ ಎಸ್ ಕಾಯ್ದೆಯಡಿ ಒಟ್ಟು 33 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 61 ಆರೋಪಿಗಳು ಬಂಧಿಸಲಾಗಿದೆ. .22,30,500 ಮೌಲ್ಯದ ಗಾಂಜಾ 91 ಕೆ.ಜಿ. 532 ಗ್ರಾಂ, ಎಂಡಿಎಂಎ 58 ಗ್ರಾಂ 20 ಎಂಜಿ, ಚರಸ್ 283 ಗ್ರಾಂ, ಎಕ್ಸಾಟಸಿ ಟ್ಯಾಬ್ಲೆಟ್ 3 ಗ್ರಾಂ 17 ಎಂಜಿ, ಎಲ್‌ಎಸ್‌ಡಿ 50 ಎಂಜಿ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ನಗರವನ್ನು ಮಾದಕ ವಸ್ತು ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಸುಮಾರು 5 ವರ್ಷಗಳಲ್ಲಿ ಯಾರು ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಇದ್ದರು ಎಂದು ಗುರುತು ಮಾಡಿ ಅವರನ್ನು ವಾಚ್ ಮಾಡಲಾಗುತ್ತಿದೆ ಎಂದರು.
593 ಡಿಎಲ್ ಅಮಾನತ್ತಿಗೆ ಪತ್ರ:
ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ನಗರಾದ್ಯಂತ ಅಪರಾಧ ನಿಯಂತ್ರಣ ಮತ್ತು ಸಂಚಾರ ನಿಯಮಗಳ ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ, ನಗರದ ಸೆನ್ ಕ್ರೈಂ ಪೊಲೀಸ್ ಠಾಣಾ ವತಿಯಿಂದ ವಿವಿಧ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೌಡಿ ಆಸಾಮಿಗಳ ಮನೆ ಮೇಲೆ ಅನಿರೀಕ್ಷಿತ ದಾಳಿ ಮಾಡಲಾಗಿದೆ ಎಂದರು.
ಅಪರಾಧ ನಿಯಂತ್ರಣ ಹಾಗೂ ಸಂಚಾರ ನಿಯಮ ಜಾರಿಗಾಗಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ, ಚಾಲಕರ ಚಾಲನಾ ಪರವಾನಗಿಯನ್ನು ಅಮಾನತು ಮಾಡಲು ಸಂಬಂಧಪಟ್ಟಆರ್‌ಟಿಓಗಳಿಗೆ ಪತ್ರ ವ್ಯವಹರಿಸಲಾಗುತ್ತಿದ್ದು, 2022ನೇ ಸಾಲಿನಲ್ಲಿ ಒಟ್ಟು 593 ಚಾಲನಾ ಪರವಾನಗೆ ಅಮಾನತ್ತಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ಕಟ್ಟುನಿಟ್ಟಿನ ಹಗಲು ಮತ್ತು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಲಾಗುತ್ತಿದೆ. ಹಗಲು ಮತ್ತು ರಾತ್ರಿ ಗಸ್ತು ಕರ್ತವ್ಯದ ಸಮಯದಲ್ಲಿ ಸ್ವತ್ತು ಕಳುವು ಪ್ರಕರಣಗಳ ಎಂಓಬಿ ಆಸಾಮಿಗಳನ್ನು ಕಡ್ಡಾಯವಾಗಿ ಚೆಕ್ ಮಾಡಲಾಗುತ್ತಿದ್ದು, 1966 ಸ್ಥಳೀಯ ಎಂಓ ಆಸಾಮಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದರು. ಡಿಸಿಪಿಗಳಾದ ಎಂ. ಮುತ್ತುರಾಜು, ಎಂ.ಎಸ್. ಗೀತಾ, ಶಿವರಾಜು, ಎಸಿಪಿಗಳಾದ ಶಶಿಧರ್, ಶಿವಶಂಕರ್, ಗಂಗಾಧರಸ್ವಾಮಿ, ಪರಶುರಾಮಪ್ಪ, ಅಶ್ವತ್ಥನಾರಾಯಣ ಇದ್ದರು.
ಸೈಬರ್ ಅಪರಾಧ ಪ್ರಕರಣಗಳಲ್ಲಿ ಹಣ ಕಳೆದುಕೊಂಡಿದ್ದವರಿಗೆ 2022ನೇ ಸಾಲಿನಲ್ಲಿ 1 ಕೋಟಿ ಅಧಿಕ ಮೊತ್ತವನ್ನು ವಾಪಸ್ ಕೊಡಿಸಲಾಗಿದೆ. ಸೈಬರ್ ಕ್ರೈಂಗಳನ್ನು ಪತ್ತೆ ಹಚ್ಚುವುದು ಕಷ್ಟಕರ. ಆದರೆ, ಘಟನೆಯಾದ ಕೂಡಲೇ ಸೈಬರ್ ಸಹಾಯವಾಣಿ 1930 ಅಥವಾ 112 ಕರೆ ಮಾಡಿ ದೂರು ನೀಡಿದರೇ ಪತ್ತೆ ಹಚ್ಚಲು ಸಹಾಯವಾಗುತ್ತದೆ.
- ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ