ಬೆಂಗಳೂರು (ಜ.26):  ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ ಜನಸಾಮಾನ್ಯರಿಗಾಗಿ ಉಚಿತ ನೀರು, ವಿದ್ಯುತ್‌, ಅಗತ್ಯ ಮೂಲ ಸೌಕರ್ಯಗಳು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತರಬೇಕಿದೆ ಎಂದು ಹಿರಿಯ ಕಾಂಗ್ರೆಸ್ಸಿಗ, ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ನಾನು ಅರವಿಂದ್‌ ಕೇಜ್ರಿವಾಲ್‌ ಅವರ ಕ್ರಾಂತಿಕಾರಕ ಬದಲಾವಣೆಗಳನ್ನು ನೋಡಿ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಶಾಂತಿನಗರದ ಬಸಪ್ಪ ರಸ್ತೆಯಲ್ಲಿರುವ ಆಮ್‌ ಆದ್ಮಿ ಕ್ಲಿನಿಕ್‌ ಕಾರ್ಯವೈಖರಿಯನ್ನು ಸೋಮವಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರೋಗ್ಯ ಸಚಿವನಾಗಿದ್ದಾಗ ದೆಹಲಿಯಲ್ಲಿರುವ ಮೊಹಲ್ಲಾ ಕ್ಲಿನಿಕ್‌, ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆಶ್ಚರ್ಯಗೊಂಡಿದ್ದೆ ಎಂದರು.

ರಾಜಕೀಯ ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಕರ್ನಾಟಕ ಕಾಂಗ್ರೆಸ್ ನಾಯಕ ..

ಕೇಜ್ರಿವಾಲ್‌ ಅವರಿಗೆ ದೆಹಲಿ ಜನತೆ ಕೇವಲ ಒಂದು ಬಾರಿ ನೀಡಿದ ಅವಕಾಶವನ್ನು ಜನಪರ ಸೇವೆಗೆ ಬಳಸಿಕೊಂಡು ಜನರಿಗೆ ಮೂಲ ಸೌಕರ್ಯ ನೀಡಲು ಆದ್ಯತೆ ನೀಡಿದ್ದಾರೆ. ಆರೋಗ್ಯ, ಶಿಕ್ಷಣ, ಉಚಿತ ನೀರು, ವಿದ್ಯುತ್‌ ಸೌಲಭ್ಯಗಳನ್ನು ಅಗತ್ಯವಾಗಿ ಕಲ್ಪಿಸಿದ್ದಾರೆ. ಇಂತಹ ಕಾರ್ಯಗಳು ಎಲ್ಲಾ ರಾಜ್ಯಗಳಲ್ಲಿ ಅಗತ್ಯವಾಗಿ ನಡೆದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯಲಿದೆ ಎಂದು ಹೇಳಿದರು.

ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಸೇರಿ ದೆಹಲಿಯ ಮೊಹಲ್ಲಾ ಕ್ಲಿನಿಕ್‌ ಮಾದರಿಯಲ್ಲಿರುವ ಕ್ಲಿನಿಕ್‌ನಲ್ಲಿ ಯಾವುದೇ ರೀತಿಯ ಅಂತಸ್ತು, ಆದಾಯ, ಜಾತಿ ಕೇಳದೆ ಎಲ್ಲರಿಗೂ ಈ ಸೌಲಭ್ಯ ವಿಸ್ತರಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೋನಾ ಸಂಕಷ್ಟದ ನಂತರ ಸಣ್ಣ ಪುಟ್ಟಕಾಯಿಲೆಗಳಿಗೂ ಮಾತ್ರೆ ತೆಗೆದುಕೊಳ್ಳಲು ಜನಸಾಮಾನ್ಯ ಕಷ್ಟಪಡುತ್ತಿದ್ದಾನೆ. ಆದರೆ, ಆಪ್‌ ಕ್ಲಿನಿಕ್‌ನಲ್ಲಿ ಮನೆಗೆಲಸಕ್ಕೆ ಹೋಗುವಂತಹ ಹೆಣ್ಣುಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಉತ್ತಮ ಕಾರ್ಯವಾಗಿದೆ. ಇಂತಹ ಕಟ್ಟಕಡೆಯ ಜನರ ಸೇವೆಗೆ ನಿಂತಿರುವ ಆಮ್‌ ಆದ್ಮಿಗಳಿಗೆ ಅಭಿನಂದನೆ ಸಲ್ಲಿಸಿದರು.

ಆಮ್‌ ಆದ್ಮಿ ಪಕ್ಷ ಸೇರುತ್ತೀರಾ? ಎನ್ನುವ ಪತ್ರಕರ್ತರ ಪ್ರಶ್ನೆಗೆ, ನಾನೂ ಒಬ್ಬ ಆಮ್‌ ಆದ್ಮಿ ಅಂದರೆ ಜನ ಸಾಮಾನ್ಯ. ಜನಸಾಮಾನ್ಯರಿಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರ ಜೊತೆ ಸದಾ ಇರುತ್ತೇನೆ ಎಂದು ಉತ್ತರಿಸಿದರು.