ಅಕ್ರಮ ಮರಳಿಗೆ ಬ್ರೇಕ್ ಹಾಕುವಂತೆ 89ರ ಅಜ್ಜನ ಹೋರಾಟ!

* ರಾಯಚೂರು ಜಿಲ್ಲೆಯಾದ್ಯಂತ ಅಕ್ರಮ ಮರಳು ಸಾಗಾಟ ದಂಧೆ!

* ಜಿಲ್ಲಾಡಳಿತ ಮರಳು ಸಾಗಾಟ ಬಂದ್ ಮಾಡಿದರೂ ನಿಂತಿಲ್ಲ ಮರಳು ದಂಧೆ!

* ಗೂಗಲ್ ಬಳಿಯಿಂದ ಅಕ್ರಮವಾಗಿ ಮರಳು ಸಾಗಾಟ!

Illegal sand mafia in Raichur pod

ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು(ಜೂ.13) ರಾಯಚೂರು ಜಿಲ್ಲೆಯಲ್ಲಿ ಎರಡು ದೊಡ್ಡ ನದಿಗಳು ಇವೆ. ಕೃಷ್ಣ ಮತ್ತು ತುಂಗಾಭದ್ರಾ ಎರಡು ನದಿಗಳಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಿರಂತರವಾಗಿ ನಡೆಯುತ್ತಿದೆ. ಜಿಲ್ಲಾಡಳಿತ ಎಷ್ಟೇ ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ತಂದರೂ ಸಹ ಮರಳು ಸಾಗಾಟ ದಂಧೆಗೆ ಮಾತ್ರ ರಾಯಚೂರು ಜಿಲ್ಲೆಯಲ್ಲಿ ಬ್ರೇಕ್ ಹಾಕಲು ಆಗುತ್ತಿಲ್ಲ. ಅದರಲ್ಲೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಸಿಗುವ ಮರಳಿಗೆ ಕಲಬುರಗಿ, ಬೀದರ್ ಜಿಲ್ಲೆಯಲ್ಲಿಗಳಲ್ಲಿ ಬಂಗಾರದ ಬೆಲೆಗೆ ಮಾರಾಟವಾಗುತ್ತೆ. ಹೀಗಾಗಿ ದಂಧೆಕೋರರು ಜಿಲ್ಲಾಡಳಿತದ ಎಲ್ಲಾ‌ ನಿಯಮಗಳನ್ನು ‌ಗಾರಿಗೆ ತೂರಿ ಕೃಷ್ಣ ನದಿಯ ಒಡಲು ಬಗಿದು ಜೆಸಿಬಿ ಮತ್ತು ಟಿಪ್ಪರ್ ನಲ್ಲಿ ಮನಬಂದಂತೆ ಮರಳು ತುಂಬಿ ದಂಧೆ ನಡೆಸಿದ್ದಾರೆ.

ಅಕ್ರಮ ಮರಳುಗಾರಿಕೆಯಿಂದ ಗೂಗಲ್ ಗೆ ಕಂಟಕ

ರಾಯಚೂರು ‌ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಬಳಿ ಬ್ರಿಜ್ ಕಂ ಬ್ಯಾರೇಜ್ ಸೇತುವೆ ಇದೆ. ಕೋಟಿಗಟ್ಟಲೇ ವೆಚ್ಚ ಮಾಡಿ ಗೂಗಲ್ ಬ್ರಿಜ್ ಕಂ.ಬ್ರಾರೇಜ್ ನಿರ್ಮಾಣ ಮಾಡಿದ್ದಾರೆ. ಈ ಸೇತುವೆ ನಿರ್ಮಾಣದಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ನೂರಾರು ರೈತರಿಗೆ ನೀರಾವರಿ ಸೇರಿದಂತೆ ಹತ್ತಾರು ಅನುಕೂಲಗಳು ಆಗಿವೆ. ಆದ್ರೆ ಇತ್ತೀಚಿಗೆ ಗೂಗಲ್ ಬ್ರಿಜ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ದಂಧೆ ಜೋರಾಗಿ ನಡೆದಿದೆ.ನದಿಯಲ್ಲಿ ಇರುವ ಮರಳು ಖಾಲಿ ಮಾಡಲು ದಂಧೆಕೋರರು ಹಗಲು - ರಾತ್ರಿ ಎನ್ನದೇ  ಕೃಷ್ಣ ನದಿಯಲ್ಲಿ ಇದ್ದ ಮರಳು ಅಗೆಯಲು ಮುಂದಾಗಿದ್ದಾರೆ. ಇದರಿಂದಾಗಿ ಮುಂದಿನ ಕೆಲ ವರ್ಷಗಳಲ್ಲಿ ಗೂಗಲ್ ಸೇತುವೆ ಬಿದ್ದು ಹೋಗುತ್ತೆ ಅಂತ ತಜ್ಞರ ಅಭಿಪ್ರಾಯವಾಗಿದೆ. ಇದನ್ನು ಅರಿತ ಗೂಗಲ್ ಗ್ರಾಮದ 89ರ ಅಜ್ಜ ಬಸರಾಜಪ್ಪ ಗೌಡ ಸರ್ಕಾರದ ಆದೇಶ ಹಿಡಿದುಕೊಂಡು ಕಚೇರಿ - ಕಚೇರಿ ಅಲೆಯಲು ಶುರು ಮಾಡಿದ್ದಾರೆ.

ಯಾರು ಈ 89ರ ಅಜ್ಜ ಬಸವರಾಜಪ್ಪ ಗೌಡ: 

ಬಸವರಾಜಪ್ಪ ಗೌಡ ಮೂಲತಃ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದವರು..ಇವರು ಕೂಡ ಹಿಂದಿನ ಕಾಲದಲ್ಲಿ ಮರಳು ಸಾಗಾಟ ದಂಧೆ ಮಾಡುತ್ತಿದ್ರು. ಗೂಗಲ್ ಸೇತುವೆಗೆ ಮರಳು ಸಾಗಾಟ ದಂಧೆ ಮಾಡಿದ್ರೆ ಕಂಟಕವಾಗುತ್ತೆ ಎಂಬ ವಿಷಯ ಗೊತ್ತಾಗಿದೆ. ಹೀಗಾಗಿ ಬಸವರಾಜಪ್ಪ ಗೌಡ ಮರಳು ಸಾಗಾಟದ ದಂಧೆಗೆ ಬ್ರೇಕ್ ಹಾಕಿ ಸೇತುವೆ ಉಳಿಸಿಕೊಳ್ಳಲು ‌ಹೋರಾಟ ಶುರು ಮಾಡಿದ್ದಾರೆ.

ಮರಳು ತಪಾಸಣೆ ಘಟಕ ಮಾಡಿದ್ರೂ ಉಪಯೋಗವೇ ಇಲ್ಲ:

ರಾಯಚೂರು ಜಿಲ್ಲೆಯ ಕೃಷ್ಣ ಮತ್ತು ತುಂಗಭದ್ರಾ ನದಿ ತೀರದಲ್ಲಿ ಮರಳು ತಪಾಸಣೆ ಘಟಕ ಜಿಲ್ಲಾಡಳಿತ ಮಾಡಿದೆ. ಆದ್ರೆ ಹೆಸರಿಗೆ ಮಾತ್ರ ಮರಳು ತಪಾಸಣೆ ಘಟಕವಾಗಿವೆ. ಎಂದಿನಂತೆ ರಾಜಾರೋಷವಾಗಿ ಟಿಪ್ಪರ್ ಗಳಲ್ಲಿ ಮರಳು ಸಾಗಾಟ ನಡೆಯುತ್ತಲ್ಲೇ ಇದೆ. ಹೆಸರಿಗೆ ಮಾತ್ರ ಮೈನಿಂಗ್ ಇಲಾಖೆ ಮತ್ತು ಪೊಲೀಸ್ ಇಲಾಖೆ ಆಗೊಮ್ಮೆ- ಈಗೊಮ್ಮೆ ಟಿಪ್ಪರ್ ಗಳನ್ನು ಹಿಡಿದು ದಂಡ ಹಾಕುತ್ತಾರೆ. ಅದು ಬಿಟ್ಟರೇ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲು ಆಗುತ್ತಿಲ್ಲ. ತಪಾಸಣೆ ಘಟಕದಲ್ಲಿ ಇದ್ದ ಪೊಲೀಸ್ ಸಿಬ್ಬಂದಿ ಸಹ ಲಂಚಕ್ಕೆ ಕೈಚಾಚಿ  ಮೇಲಾಧಿಕಾರಿಗಳ ಆದೇಶದಂತೆ ಟಿಪ್ಪರ್ ಗಳ ಓಡಾಟಕ್ಕೆ ಅನುಕೂಲ ಮಾಡಿ ಕೊಡುತ್ತಾರೆ. ಹೀಗಾಗಿ ಮರಳು ತಪಾಸಣೆ ಘಟಕಗಳು ಇದ್ರೂ ಇಲ್ಲದಂತೆ ಆಗಿವೆ.

ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೇ ಮರಳು ಸಾಗಾಟ!

ಕೃಷ್ಣ ನದಿಯ ಕೆಲವೂ ಕಡೆ ಮರಳುಗಾರಿಕೆಗೆ ಸರ್ಕಾರ ಟೆಂಡರ್ ಮಾಡಿ ಆದೇಶ ನೀಡಿತ್ತು. ಸರ್ಕಾರದ ನಿಯಮಗಳನ್ನು ಪಾಲಿಸಬೇಕಾದ ಗುತ್ತಿಗೆದಾರರು ಮನಬಂದಂತೆ ಕೃಷ್ಣ ನದಿಯಲ್ಲಿ ಜೆಸಿಬಿಗಳನ್ನ ಇಳಿಸಿ ಇಡೀ ನದಿಯನ್ನ ಸರ್ವನಾಶ ಮಾಡಿ ಮರಳನ್ನು ದೊಚ್ಚಲು ಮುಂದಾಗಿದ್ದಾರೆ. ಇಷ್ಟು ಮರಳು ದೊಚ್ಚುತ್ತಿದ್ರೂ ಅಧಿಕಾರಿಗಳು ಮಾತ್ರ ಗಫ್ ಚುಫ್ ಆಗಿರುವುದು ಅನುಮಾನಕ್ಕೆ ಎಡೆಮಾಡಿದೆ.

ಮರಳು ಸಾಗಾಟಕ್ಕೆ ಸಮಯ ನಿಗದಿ: 

ಕೃಷ್ಣ ನದಿಯಲ್ಲಿ ಮರಳುಗಾರಿಕೆ ಸರ್ಕಾರ ಅನುಮತಿ ನೀಡಿದೆ. ಹತ್ತಾರು ಷರತ್ತುಗಳನ್ನು ‌ವಿಧಿಸಿ ಮರಳು ಗಣಿಗಾರಿಕೆಗೆ ಗುತ್ತಿಗೆ ನೀಡಿದೆ. ಆದ್ರೆ ಗುತ್ತಿಗೆ ಪಡೆದ ಗುತ್ತಿಗೆದಾರರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ‌ ಮನಬಂದಂತೆ ‌ಕೃಷ್ಣ ನದಿಯಲ್ಲಿ  ಮರಳುಗಾರಿಕೆ ‌ದಂಧೆ ನಡೆಸಿದ್ದಾರೆ. ಬೆಳಗ್ಗೆ ‌6ರಿಂದ ಸಂಜೆ 6ರವರೆಗೆ ಮರಳುಗಾರಿಕೆ ಅವಕಾಶವಿದೆ. ಆದ್ರೆ ಗುತ್ತಿಗೆದಾರರು ಹಗಲು- ರಾತ್ರಿ ಎನ್ನದೇ ಮರಳುಗಾರಿಕೆ ದಂಧೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಟಿಪ್ಪರ್ ಗಳನ್ನು ಕೃಷ್ಣ ನದಿಗೆ ಇಳಿಸಿ 14 ಮೆಟ್ರಿಕ್ ಟನ್ ಬದಲು 45 ಮೆಟ್ರಿಕ್ ಟನ್ ತುಂಬಿ ಸಾಗಾಟ ದಂಧೆ ನಡೆಸಿದ್ದಾರೆ. ಇಷ್ಟು ಸಾಗಾಟ ನಡೆಸಿದ್ರು ಯಾರು ಚೆಕ್ ಮಾಡುವರೇ ಇಲ್ಲದಂತೆ ಆಗಿದೆ.

ತಿಂಗಳ ಮಾಮೂಲು ನೀಡಿ ಮರಳುಗಾರಿಕೆ ದಂಧೆ : 

ಕೃಷ್ಣ ನದಿಯ ಮರಳು ಇಡೀ ರಾಜ್ಯದ ಹತ್ತಾರು ಜಿಲ್ಲೆಗಳಿಗೆ ಸಾಗಾಟವಾಗುತ್ತೆ.‌ ಈ ಮರಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಹೀಗಾಗಿ ಮರಳು ಧಂಧೆಕೋರರು ಕೃಷ್ಣ ‌ನದಿಯಲ್ಲಿ ಜಿಲ್ಲಾಡಳಿತ ‌ಮರಳುಗಾರಿಕೆ ದಂಧೆಗೆ ಬ್ರೇಕ್ ಹಾಕಿದ್ದರೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಂಗಳ ಮಾಮೂಲಿ ನೀಡಿ ಮರಳು ಸಾಗಾಟ ದಂಧೆ ನಡೆಸಿದ್ದಾರೆ.ಇದು ಹೀಗೆ ಮುಂದುವರೆದರೇ ಕೆಲವೇ ದಿನಗಳಲ್ಲಿ ಕೃಷನದಿಯ ಒಡೆಲು ಬರಿದಾಗುವ ಸಾಧ್ಯತೆಯಿದೆ.ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ದಂಧೆಗೆ ಬ್ರೇಕ್ ಹಾಕಬೇಕಿದೆ.

Latest Videos
Follow Us:
Download App:
  • android
  • ios