ಚಿಕ್ಕ ವಯಸ್ಸಿನಲ್ಲಿ ರೈನ್ಕೋಟ್ ಮಾರುತ್ತಿದ್ದ ಪ್ರಭಾಕರ್ ಕಾಮತ್ ಅವರು ಮಂಗಳೂರಿನಲ್ಲಿ 'ಐಡಿಯಲ್ ಐಸ್ಕ್ರೀಮ್' ಸಾಮ್ರಾಜ್ಯವನ್ನು ಕಟ್ಟಿದ ಸ್ಪೂರ್ತಿದಾಯಕ ಕಥೆ ಇದು. 1975ರಲ್ಲಿ ಸಣ್ಣ ಅಡುಗೆಮನೆಯಲ್ಲಿ ಶುರುವಾದ ಈ ಪ್ರಯೋಗ ಇಂದು 'ಪಬ್ಬಾಸ್' ಎಂಬ ಬೃಹತ್ ಬ್ರ್ಯಾಂಡ್ ಆಗಿ ಬೆಳೆದು, ಮಂಗಳೂರನ್ನು ಭಾರತದ ಐಸ್ಕ್ರೀಮ್ ರಾಜಧಾನಿಯನ್ನಾಗಿ ಮಾಡಿದೆ.
ಮಂಗಳೂರು: ಇದು ಮಂಗಳೂರಿನ ಫೇಮಸ್ ಐಡಿಯಲ್ ಐಸ್ ಕ್ರೀಮ್ ಹುಟ್ಟಿದ ಕಥೆ. ರೈನ್ ಕೋಟ್ ಮಾರ್ತಿದ್ದಂತಹ 20 ವರ್ಷದ ಹುಡುಗ ಹೇಗೇ ಮಂಗಳೂರನ್ನು "ಐಸ್ ಕ್ರೀಮ್ ಕ್ಯಾಪಿಟಲ್" ಆಗಿ ಚೇಂಜ್ ಮಾಡಿದ್ರು ಎಂಬುದು ಕುತೂಹಲ. ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡ ಪ್ರಭಾಕರ್ ಕಾಮತ್, ತಮ್ಮ ಕುಟುಂಬಕ್ಕೆ ಆಸರೆಯಾಗಲು ಆರಂಭದಲ್ಲಿ ರೈನ್ಕೋಟ್ಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ಕೇವಲ ಮಳೆಗಾಲಕ್ಕೆ ಸೀಮಿತವಾಗಿದ್ದ ಈ ಸೀಸನಲ್ ಉದ್ಯಮವನ್ನು ತೊರೆದು, ವರ್ಷಪೂರ್ತಿ ನಡೆಯುವ ಶಾಶ್ವತ ವ್ಯಾಪಾರ ಕಟ್ಟಲು ನಿರ್ಧರಿಸಿದರು. 1975ರಲ್ಲಿ, ತಮ್ಮ ಮನೆಯ ಸಣ್ಣ ಅಡುಗೆಮನೆಯನ್ನೇ ಪ್ರಯೋಗಾಲಯವನ್ನಾಗಿ ಮಾಡಿಕೊಂಡು ಐಸ್ಕ್ರೀಮ್ ತಯಾರಿಸುವ ಹೊಸ ಹೊಸ ಪ್ರಯೋಗಗಳನ್ನು ಶುರು ಮಾಡಿದರು. ಇದು ಇಂದು ಕರ್ನಾಟಕದ ಹೆಮ್ಮೆಯ ಗುರುತಾಗಿದೆ
ಪಬ್ಬಾಸ್ ಮಾಮ್ ನಿಂದ ಪಬ್ಬಾಸ್ ಹುಟ್ಟಿತು!
ಕರಾವಳಿಯ ಸಾಂಸ್ಕೃತಿಕ ನಗರಿ ಮಂಗಳೂರಿಗೆ ಕಾಲಿಡುತ್ತಿದ್ದಂತೆಯೇ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವ ಮೊದಲ ಹೆಸರು 'ಐಡಿಯಲ್ ಐಸ್ಕ್ರೀಮ್' ಇಂದು ಮಂಗಳೂರು ನಗರವನ್ನು ಇಡೀ ದೇಶವೇ "ಭಾರತದ ಐಸ್ಕ್ರೀಮ್ ರಾಜಧಾನಿ" ಎಂದು ಕರೆಯಲು ಈ ಸಂಸ್ಥೆಯ ಕೊಡುಗೆ ಅಪಾರ. ಆದರೆ, ವಾರ್ಷಿಕ ₹150 ಕೋಟಿಗೂ ಅಧಿಕ ವಹಿವಾಟು ನಡೆಸುವ ಈ ಬೃಹತ್ ಸಾಮ್ರಾಜ್ಯ ಇಂದು ಮಂಗಳೂರಿನ ಫೇಮಸ್ ಪಬ್ಬಾಸ್. ಪಬ್ಬಾಸ್ ಹೆಸರು ಬರಲು ಕಾರಣವೂ ಇದೆ.
ಸವಾಲುಗಳ ನಡುವೆ ಬೆಳೆದ ಕನಸು
ಐಡಿಯಲ್ ಐಸ್ಕ್ರೀಮ್ ಸಂಸ್ಥಾಪಕರಾದ ಎಸ್. ಪ್ರಭಾಕರ್ ಕಾಮತ್ ಅವರ ಆರಂಭಿಕ ಜೀವನ ಅತ್ಯಂತ ಕಷ್ಟಕರವಾಗಿತ್ತು. ಚಿಕ್ಕ ವಯಸ್ಸಿನಲ್ಲೇ ತಾಯಿ-ತಂದೆಯನ್ನು ಕಳೆದುಕೊಂಡ ಪ್ರಭಾಕರ್, ಯಾವುದೇ ಹಣಕಾಸಿನ ಬೆಂಬಲ ಅಥವಾ ಉದ್ಯಮದ ಹಿನ್ನೆಲೆಯಿಲ್ಲದೆ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಯಿತು.
ಕುಟುಂಬವನ್ನು ಪೋಷಿಸಲು ಅವರು ರಸ್ತೆಬದಿಯಲ್ಲಿ ರೈನ್ಕೋಟ್ಗಳು, ಪಟಾಕಿಗಳು ಹಾಗೂ ಟೈಲರಿಂಗ್ ಸಾಮಗ್ರಿಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುತ್ತಿದ್ದರು. ಆದರೆ, ಇವು ಮಳೆಗಾಲಕ್ಕೆ ಮಾತ್ರ ಸೀಮಿತವಾಗಿದ್ದ 'ಸೀಸನಲ್' ವ್ಯಾಪಾರಗಳಾಗಿದ್ದವು. ವರ್ಷದ 365 ದಿನಗಳೂ ನಿರಂತರವಾಗಿ ನಡೆದುಕೊಂಡು ಹೋಗುವ ಶಾಶ್ವತ ಉದ್ಯಮವನ್ನು ಕಟ್ಟಬೇಕು ಎಂಬ ಹಂಬಲದಿಂದ ಅವರು ಐಸ್ಕ್ರೀಮ್ ಕ್ಷೇತ್ರದತ್ತ ಗಮನಹರಿಸಿದರು. 1970ರ ದಶಕದ ಆರಂಭದಲ್ಲಿಇದಕ್ಕಾಗಿ ಅವರು ಯಾವುದೇ ತಬೇತಿ ಇಲ್ಲದೆ ಐಸ್ ಕ್ರೀಂ ಮಾಡುವುದನ್ನು ಕಲಿತು ಅಕ್ಕಪಕ್ಕದ ಮನೆಗೆ ಸವಿಯಲು ನೀಡುತ್ತಿದ್ದರು.
ಕಡೆಗೂ 1975ರ ಮೇ 1 ರಂದು ಮಂಗಳೂರಿನ ಮಾರ್ಕೆಟ್ ರಸ್ತೆಯ ಹಂಪನಕಟ್ಟೆಯಲ್ಲಿ ಕೇವಲ 14 ರುಚಿಗಳೊಂದಿಗೆ ತಮ್ಮ ಮೊದಲ "ಐಡಿಯಲ್ ಐಸ್ಕ್ರೀಮ್" ಪಾರ್ಲರ್ ಅನ್ನು ಪ್ರಾರಂಭಿಸಿದರು. ದಿನಕಳೆದಂತೆ ಇವರ ಐಸ್ಕ್ರೀಂ ಸವಿಯಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದರು. ಐಸ್ಕ್ರೀಂ ಸವಿಯಲು ಬಂದ ಜನ ಅವರನ್ನು ಪಬ್ಬಾಸ್ ಮಾಮ ಎಂದೇ ಕರೆಯುತ್ತಿದ್ದರು. ಅದೇ ಹೆಸರು ಫೇಮಸ್ ಆಯ್ತು. 1996 ರಲ್ಲಿ ಮಂಗಳೂರಿನ ಎಂ.ಜಿ ರಸ್ತೆಯಲ್ಲಿ ತೆರೆಯಲಾದ "ಪಬ್ಬಾಸ್" ಐಸ್ಕ್ರೀಮ್ ಪಾರ್ಲರ್ ಬ್ರ್ಯಾಂಡ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಇಂದು ದೇಶದ ಅತಿದೊಡ್ಡ ಪಾರ್ಲರ್ಗಳಲ್ಲಿ ಒಂದಾಗಿರುವ ಪಬ್ಬಾಸ್, ಮಂಗಳೂರಿಗೆ ಬರುವ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಪ್ರಮುಖ ಪ್ರವಾಸಿ ಹಾಗೂ ಸಾಂಸ್ಕೃತಿಕ ತಾಣವಾಗಿದೆ.
'ಗಡ್ಬಡ್' ಕ್ರಾಂತಿ ಹಾಗೂ 'ಪಬ್ಬಾಸ್' ಸಾಂಸ್ಕೃತಿಕ ಹೆಗ್ಗುರುತು
ಜನರ ನಾಲಿಗೆಗೆ ತಕ್ಕಂತೆ ರುಚಿ ಕೊಟ್ಟಿದ್ದು ಐಡಿಯಲ್ನ ಯಶಸ್ಸಿಗೆ ಮುಖ್ಯ ಕಾರಣ. ಲಭ್ಯವಿದ್ದ ಪದಾರ್ಥಗಳ ಸೃಜನಶೀಲ ಸಂಯೋಜನೆಯಿಂದ ಹುಟ್ಟಿಕೊಂಡ 'ಗಡ್ಬಡ್' ವಿವಿಧ ಐಸ್ಕ್ರೀಮ್ ಸ್ಕೂಪ್ಗಳು, ತಾಜಾ ಹಣ್ಣುಗಳು, ಜೆಲ್ಲಿ ಮತ್ತು ಡ್ರೈ ಫ್ರೂಟ್ಸ್ಗಳ ಸುಂದರ ಮಿಶ್ರಣ ಕರಾವಳಿಗರ ಟೇಸ್ಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿತು.
ಉದ್ಯಮದ ಸವಾಲುಗಳು ಮತ್ತು ನವೀಕರಣ
ಒಂದೇ ಪಾರ್ಲರ್ನಿಂದ ಆರಂಭವಾದ ಐಡಿಯಲ್, ಕ್ರಮೇಣ ಚಿಲ್ಲರೆ ಮಾರುಕಟ್ಟೆಗೆ ವಿಸ್ತರಿಸಿತು. 2003 ರಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪನೆಯಾದ ನಂತರ, ಸರಕು ಸಾಗಣೆ ಮತ್ತು ಕೋಲ್ಡ್-ಚೈನ್ ಲಾಜಿಸ್ಟಿಕ್ಸ್ ಸವಾಲುಗಳು ಎದುರಾದವು. ಹಾಳಾಗುವ ವಸ್ತುವಾದ್ದರಿಂದ ವಿತರಣೆಯಲ್ಲಿ ಎದುರಾದ ತೊಡಕುಗಳನ್ನು ಮೆಟ್ಟಿ ನಿಲ್ಲಲು ಸಂಸ್ಥೆಯು ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿತು.
ಪ್ರಭಾಕರ್ ಕಾಮತ್ ಅವರ ಪುತ್ರ ಎಸ್. ಮುಕುಂದ್ ಕಾಮತ್ ಅವರು ಉದ್ಯಮದ ಚುಕ್ಕಾಣಿ ಹಿಡಿದ ನಂತರ, SAP ನಂತಹ ಸಾಫ್ಟ್ವೇರ್ ಅಳವಡಿಕೆ, ಮಾಲ್ಗಳಲ್ಲಿ ಕೆಫೆ ಸ್ಥಾಪನೆ ಹಾಗೂ ಔಪಚಾರಿಕ ಆಡಳಿತ ಶೈಲಿಯನ್ನು ತಂದರು. ಏಪ್ರಿಲ್ 2024 ರಲ್ಲಿ, ಈ ಸಂಸ್ಥೆಯು 'ಐಡಿಯಲ್ ಐಸ್ಕ್ರೀಮ್ ಪ್ರೈವೇಟ್ ಲಿಮಿಟೆಡ್' ಆಗಿ ಖಾಸಗಿ ಸೀಮಿತ ಕಂಪನಿಯಾಗಿ ಪರಿವರ್ತನೆಯಾಯಿತು.
ರಾಷ್ಟ್ರೀಯ ಪುರಸ್ಕಾರಗಳು:
ಪ್ರತಿಷ್ಠಿತ 'ಡುಪಾಂಟ್–ಐಡಿಎ' ಗ್ರೇಟ್ ಇಂಡಿಯಾ ಐಸ್ಕ್ರೀಮ್ ಸ್ಪರ್ಧೆಯಲ್ಲಿ 'ಬೆಸ್ಟ್ ಇನ್ ಕ್ಲಾಸ್' ಹಾಗೂ ಹತ್ತಾರು ಚಿನ್ನದ ಪದಕಗಳು ಸೇರಿದಂತೆ ಒಟ್ಟು 27 ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಐಡಿಯಲ್ ಐಸ್ಕ್ರೀಮ್ ಪಡೆದುಕೊಂಡಿದೆ.
ಐಡಿಯಲ್ ಸಂಸ್ಥೆಯು ಕ್ಲಾಸಿಕ್ ರುಚಿಗಳಿಂದ ಹಿಡಿದು ಇಂದಿನ ಯುವಜನತೆಗೆ ಇಷ್ಟವಾಗುವ ಗೌರ್ಮೆಟ್ ಸುವಾಸನೆಗಳವರೆಗೆ 150ಕ್ಕೂ ಹೆಚ್ಚು ಉತ್ಪನ್ನಗಳನ್ನು ನೀಡುತ್ತಿದೆ. ವೆನಿಲ್ಲಾ, ಚಾಕೊಲೇಟ್, ಬಟರ್ಸ್ಕಾಚ್, ಮ್ಯಾಂಗೋ ಮತ್ತು ಕ್ರೀಮಿ ಮ್ಯಾಂಗೋ ಬಟರ್. ಟಿರಾಮಿಸು, ಬ್ಲೂಬೆರ್ರಿ ಚೀಸ್ಕೇಕ್, ಬಿಸ್ಕಾಫ್ ಕ್ಯಾರಮೆಲೈಸ್ಡ್, ಕ್ಯಾರಮೆಲ್ ಚಾಕೊ ಹ್ಯಾಝೆಲ್ನಟ್ ಹಾಗೂ ವಿಶಿಷ್ಟ ಡಬಲ್ ಕೋನ್ಗಳು.
ಇಂದು ಕರ್ನಾಟಕ, ಉತ್ತರ ಕೇರಳ ಹಾಗೂ ಗೋವಾದಾದ್ಯಂತ 8,500 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳು ಹಾಗೂ ವಿತರಕರ ಜಾಲವನ್ನು ಸಂಸ್ಥೆ ಹೊಂದಿದೆ. ಅಲ್ಲದೆ, ಸ್ವಿಗ್ಗಿ ಇನ್ಸ್ಟಾಮಾರ್ಟ್, ಬಿಗ್ಬಾಸ್ಕೆಟ್ ಮತ್ತು ಜಿಯೋಮಾರ್ಟ್ಗಳ ಮೂಲಕ ಪ್ರಮುಖ ನಗರಗಳಲ್ಲಿ ಮನೆಬಾಗಿಲಿಗೂ ಐಸ್ಕ್ರೀಮ್ ತಲುಪಿಸಲಾಗುತ್ತಿದೆ.
ವರ್ಷಕ್ಕೆ ₹150 ಕೋಟಿಗೂ ಅಧಿಕ ಕಾರ್ಯಾಚರಣೆ ಆದಾಯ ಹೊಂದಿರುವ ಐಡಿಯಲ್ ಐಸ್ಕ್ರೀಮ್, "ಮಿಲ್ಕಿ ವೇ ಟು ಯುವರ್ ಹಾರ್ಟ್" ಎಂಬ ತಮ್ಮ ಧ್ಯೇಯವಾಕ್ಯಕ್ಕೆ ತಕ್ಕಂತೆ ಕೋಟಿ ಕೋಟಿ ಗ್ರಾಹಕರ ಹೃದಯ ಗೆದ್ದಿದೆ. ಸಾಮಾನ್ಯ ಹಿನ್ನೆಲೆಯಿಂದ ಬಂದು, ಕಠಿಣ ಪರಿಸ್ಥಿತಿಗಳಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿದ ಪ್ರಭಾಕರ್ ಕಾಮತ್ ಅವರ ಈ ಪ್ರಯಾಣವು ಒಂದು ನಿತ್ಯಸತ್ಯವನ್ನು ಸಾಬೀತುಪಡಿಸುತ್ತದೆ.


