ಯಾದಗಿರಿ ನಗರದ ರಸ್ತೆಗಳ ದುರಸ್ತಿಗೆ ದತ್ತು ಚಿಂತನೆ ಶುರು!
ಯಾದಗಿರಿ ಜಿಲ್ಲಾ ಕೇಂದ್ರ ಪ್ರವೇಶ ದ್ವಾರದಲ್ಲೇ ರಸ್ತೆ ಅಧೋಗತಿ ಕಂಡಿದ್ದು, ಕುಗ್ರಾಮಕ್ಕಿಂತಲೂ ಕೆಟ್ಟದಾದ ನೋಟ ಇಲ್ಲಿನದ್ದು. ರಸ್ತೆಗಳ ಅವ್ಯವಸ್ಥೆಯಿಂದಾಗಿನ ಅಫಘಾತದಿಂದಾಗಿ ಕೇವಲ 9 ತಿಂಗಳ ಅವಧಿಯಲ್ಲಿ ಯಾದಗಿರಿ ವ್ಯಾಪ್ತಿಯ ಇಲ್ಲಿ 60ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ರಸ್ತೆ ದುರಸ್ತಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ, ಸ್ಪಂದಿಸದ ಸರ್ಕಾರದ ಕ್ರಮದಿಂದಾಗಿ ಹಾಸ್ಯ ಕಲಾವಿದ ಮಹಾಮನಿ ಇದೀಗ ದತ್ತು ಪಡೆಯುವ ಚಿಂತನೆಯನ್ನು ಸಾರ್ವಜನಿಕರ ಮುಂದಿಡಲಿದ್ದಾರೆ.
ಯಾದಗಿರಿ(ಅ.17): ಶೈಕ್ಷಣಿಕ ಮಟ್ಟ ಸುಧಾರಿಸಲು ಶಾಲೆಗಳಲ್ಲಿ ಮಕ್ಕಳ ದತ್ತು ಯೋಜನೆ, ಅಳಿವಿನಂಚಿನಲ್ಲಿರುವ ಅರಣ್ಯ ಮೃಗಗಳ ಸಂರಕ್ಷಣೆಗೆ ಪ್ರಾಣಿ ದತ್ತು ಯೋಜನೆ, ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮಗಳ ದತ್ತು ಯೋಜನೆ, ಕೆರೆಗಳ ದತ್ತು ಪಡೆದು ಹೂಳು ತೆಗೆಯಿಸುವ... ಹೀಗೆಯೇ ವಿವಿಧ ಆಯಾಮಗಳಲ್ಲಿ ದತ್ತು ಯೋಜನೆ ಬಗ್ಗೆ ಕೇಳಿದ್ದೆವು.
ಆದರೀಗ, ಯಾದಗಿರಿಯಲ್ಲಿ ಹದಗೆಟ್ಟ ರಸ್ತೆಗಳ ‘ದತ್ತು’ ಪಡೆದು, ದುರಸ್ತಿಗೆ ನಾಗರಿಕ ವಲಯದ ಪ್ರಮುಖರು ಮುಂದಾಗಿದ್ದಾರೆ. ಸರ್ಕಾರದ ಅನುದಾನ ಕೊರತೆಯಿಂದ ರಿಪೇರಿಯಾಗದೇ ತೆಗ್ಗು ಗುಂಡಿಗಳಿಂದ ಕೂಡಿ ಹರಿದು- ಹದಗೆಟ್ಟ, ಅಮಾಯಕರ ಜೀವಕ್ಕೆ ಕುತ್ತಾಗಿರುವ ರಸ್ತೆಗಳನ್ನು ಹಂತ ಹಂತವಾಗಿ ದತ್ತು ಪಡೆದು ದುರಸ್ತಿ ಮಾಡಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ, ಯಾದಗಿರಿ ಜಿಲ್ಲೆಯ ಚುನಾವಣಾ ರಾಯಭಾರಿ ಆಗಿರುವ ಬಸವರಾಜ್ ಮಹಾಮನಿ ಚಿಂತನೆ ನಡೆಸಿದ್ದಾರೆ.
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು; ಹಸುಗೂಸು ಮಗುವಿನೊಂದಿಗೆ ಕುಟುಂಬಸ್ಥರು ಪ್ರತಿಭಟನೆ
ಯಾದಗಿರಿ ನಗರದಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳೆಂಬ ಹಣೆಪಟ್ಟಿಗೆ ಸಾಕ್ಷಿಯಾಗಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದೆಂದರೆ ಜೀವ ಪಣಕ್ಕಿಟ್ಟಂತೆ. ಎಲ್ಲಿ ನೋಡಿದರೂ ತೆಗ್ಗು ಗುಂಡಿಗಳೇ ಕಾಣ ಸಿಗುತ್ತವೆ. ಕರ್ನಾಟಕ ಸೇರಿದಂತೆ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾದಂತಹ ಐದು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ- ಯಾದಗಿರಿ ನಗರ ಮೂಲಕ ಹಾಯ್ದು ಹೋಗಿರುವ ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳು ಸಾವಿಗೆ ಆಹ್ವಾನಿಸುವಂತಿವೆ.
ಜಿಲ್ಲಾ ಕೇಂದ್ರ ಪ್ರವೇಶ ದ್ವಾರದಲ್ಲೇ ರಸ್ತೆ ಅಧೋಗತಿ ಕಂಡಿದ್ದು, ಕುಗ್ರಾಮಕ್ಕಿಂತಲೂ ಕೆಟ್ಟದಾದ ನೋಟ ಇಲ್ಲಿನದ್ದು. ರಸ್ತೆಗಳ ಅವ್ಯವಸ್ಥೆಯಿಂದಾಗಿನ ಅಫಘಾತದಿಂದಾಗಿ ಕೇವಲ 9 ತಿಂಗಳ ಅವಧಿಯಲ್ಲಿ ಯಾದಗಿರಿ ವ್ಯಾಪ್ತಿಯ ಇಲ್ಲಿ 60ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ರಸ್ತೆ ದುರಸ್ತಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ, ಸ್ಪಂದಿಸದ ಸರ್ಕಾರದ ಕ್ರಮದಿಂದಾಗಿ ಹಾಸ್ಯ ಕಲಾವಿದ ಮಹಾಮನಿ ಇದೀಗ ದತ್ತು ಪಡೆಯುವ ಚಿಂತನೆಯನ್ನು ಸಾರ್ವಜನಿಕರ ಮುಂದಿಡಲಿದ್ದಾರೆ.
ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಬಾಲಕನನ್ನೇ ಕೊಂದ ಕಿರಾತಕ!
ಈ ಮೂಲಕ, ಹಂತ ಹಂತವಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಸಮಾನ ಮನಸ್ಕ ಚಿಂತಕರು, ಉದ್ಯಮಿಗಳು ಅಥವಾ ಜವಾಬ್ದಾರಿಯುತ ನಾಗರಿಕರ ಸಹಕಾರದೊಂದಿಗೆ, ನಗರದ ವಿವಿಧೆಡೆ ದತ್ತು ಪಡೆದು ರಿಪೇರಿಗೆ ಮುಂದಾಗಲಿದ್ದಾರೆ. ಇದಕ್ಕೆ ಕೈಜೋಡಿಸಿದವರ ಸನ್ಮಾನಿಸಲಾಗುವುದು. ಇನ್ನುಳಿದ ರಸ್ತೆಗಳ ದತ್ತು ಪಡೆದು ರಿಪೇರಿಗೆ ಮುಂದಾಗಲು ಮತ್ತೊಬ್ಬರಿಗೆ ಪ್ರೇರಣೆಯಾದೀತು ಎಂದು ಕನ್ನಡಪ್ರಭಕ್ಕೆ ಮಹಾಮನಿ (9986610190) ಪ್ರತಿಕ್ರಿಯಿಸಿದರು.
ಇದು ಪಕ್ಷಾತೀತ-ಜಾತ್ಯತೀತ ಮತ್ತು ಜವಾಬ್ದಾರಿಯುತ ಹಾಗೂ ಸಮಾನ ಮನಸ್ಕರನ್ನೊಳಗೊಂಡವರ ತಂಡವಾಗಿರುತ್ತದೆ. ರಸ್ತೆಗಳ ದುರಸ್ತಿ ಮತ್ತು ಅವರವರ ಜೀವಗಳಿಗೆ ಕಾಳಜಿ ವಹಿಸುವವರು, ಯಾರ ನೇತೃತ್ವವೂ ಅಲ್ಲದ, ಅಭಿವೃದ್ಧಿಪರ ಕಾಳಜಿಯುಳ್ಳ ಯಾರು ಬೇಕಾದರೂ ಬರಬಹುದಾಗಿದೆ ಎಂದು ಯಾದಗಿರಿಯ ಅಂತಾರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಬಸವರಾಜ್ ಮಹಾಮನಿ ತಿಳಿಸಿದ್ದಾರೆ.