ಹುಬ್ಬಳ್ಳಿ [ಮಾ.09]:  ಮಹಿಳಾ ಮೀಸಲಾತಿಗಾಗಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಘೋಷಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳಾ ಮೀಸಲಾತಿ ಕುರಿತಂತೆ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿ ಆರು ವರ್ಷಗಳಾಗಿವೆ. ರಾಜ್ಯಸಭೆಯಲ್ಲಿ ವಿಧೇಯಕ ಇನ್ನೂ ಪಾಸಾಗಿಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಏಕೆ ಗಮನಹರಿಸುತ್ತಿಲ್ಲವೋ ಗೊತ್ತಿಲ್ಲ. ಅವರ ಗಮನ ಸೆಳೆಯುವುದಕ್ಕಾಗಿ ಈ ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದರು.

ನನ್ನ ಮಗ ಬೇಡ, ಖರ್ಗೆ ಸಿಎಂ ಮಾಡಿ ಎಂದಿದ್ದೆ : ಎಚ್.ಡಿ.ದೇವೇಗೌಡ

ಹುಬ್ಬಳ್ಳಿ, ಬೆಂಗಳೂರಿನಿಂದ ರೈಲಿನಲ್ಲಿ 5 ಸಾವಿರಕ್ಕೂ ಹೆಚ್ಚು ಜನರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಅವರು, ಈ ಬಗ್ಗೆ ದಿನಾಂಕವಿನ್ನೂ ನಿರ್ಧರಿಸಿಲ್ಲ. ಹುಬ್ಬಳ್ಳಿಯಲ್ಲೊಂದು, ಬೆಂಗಳೂರಲ್ಲೊಂದು ಕಾರ್ಯಕ್ರಮ ನಡೆಸಿ ನಂತರ ಪ್ರತಿಭಟನೆಯ ದಿನಾಂಕ ನಿರ್ಧರಿಸುತ್ತೇನೆ ಎಂದರು.

ನಾವು ಶಾಂತ ರೀತಿಯಿಂದ ಪ್ರತಿಭಟನೆ ನಡೆಸುತ್ತೇವೆ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ಮುಖಂಡರು ಇದಕ್ಕೆ ಬೆಂಬಲ ಸೂಚಿಸುತ್ತಾರೆ ಎಂಬ ವಿಶ್ವಾಸವಿದೆ. ಈ ಸಂಬಂಧ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಬೆಂಬಲ ಸೂಚಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.