ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು, ನನಗೆ ಟಿಕೆಟ್‌ ಸಿಗುವ ಭರವಸೆ ಇದೆ ಎಂದು ಡಾ.ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

 ಮಂಡ್ಯ (ಜ. 04): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು, ನನಗೆ ಟಿಕೆಟ್‌ ಸಿಗುವ ಭರವಸೆ ಇದೆ ಎಂದು ಡಾ.ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಶಾಸಕನಾಗಿ ಆಯ್ಕೆಯಾದರೆ ಕ್ಷೇತ್ರದ ಜನತೆಗೆ ಉಚಿತ ಶಿಕ್ಷಣ ಹಾಗೂ ಉಚಿತ ಆರೋಗ್ಯ ಒದಗಿಸಲು ಬದ್ಧನಾಗಿದ್ದೇನೆ ಎಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.

ಪ್ರತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸ್ವಂತ ಹಣದಲ್ಲಿ ಶಾಲೆ ತೆರೆದು ಕ್ಷೇತ್ರದ 24 ಗ್ರಾಮ ಪಂಚಾಯ್ತಿಯಿಂದ ತಲಾ 50 ರಿಂದ 100 ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜೊತೆಗೆ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯುತ್ತೇನೆ ಎಂದರು.

ಕ್ಷೇತ್ರದಲ್ಲಿ ಆರೋಗ್ಯ ಸಮಸ್ಯೆ ತೀವ್ರವಾಗಿದ್ದು, ನನ್ನ ಒಡೆತನ ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುತ್ತೇನೆ. ಹೆಚ್ಚಿನ ಚಿಕಿತ್ಸೆ ಅಗತ್ಯಬಿದ್ದರೆ ಅಂತವರನ್ನು ಸ್ವಂತ ಹಣದಲ್ಲಿ ಬೆಂಗಳೂರು-ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಕೊಡುವುದಾಗಿ ಹೇಳಿದರು.

ಪಕ್ಷೇತರ ಸ್ಪರ್ಧೆ ಇಲ್ಲ:

ಒಂದು ವೇಳೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಇಲ್ಲ. ಹೈ ಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಎಲ್ಲರೂ ಒಗ್ಗೂಡಿ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಟಿಕೆಟ್‌ ಸಿಗದಿದ್ದರೂ ಜನ ಸೇವೆ ಮುಂದುವರೆಸುತ್ತೇನೆ ಎಂದ ಅವರು, ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಬಲವಾಗಿದೆ. ನಮ್ಮಲ್ಲಿ ಒಡಕು ಉಂಟಾದರೆ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಕಷ್ಟ. ಹಾಗಾಗಿ ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಅಭಿವೃದ್ಧಿಯಲ್ಲಿ ಹಿನ್ನಡೆ:

ಮಂಡ್ಯ ವಿಧಾನಸಭಾ ಕ್ಷೇತ್ರ ತುಂಬಾ ಹಿಂದುಳಿದಿದೆ. ನನ್ನದೇ ಆದ ರೀತಿಯಲ್ಲಿ ಕ್ಷೇತ್ರ ಅಭಿವೃದ್ಧಿ ಮಾಡುವ ಉದ್ದೇಶವಿದೆ. ನಿರುದ್ಯೋಗ, ಬಡತನ ಹಾಸುಹೊಕ್ಕಾಗಿದೆ. ನಿರುದ್ಯೋಗ ನಿವಾರಣೆಗೆ ಹೊಸಹಳ್ಳಿ, ಉಮ್ಮಡಹಳ್ಳಿ, ಕಲ್ಲಹಳ್ಳಿ, ಚಿಕ್ಕಮಂಡ್ಯ ಭಾಗಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದರು.

ಕ್ಷೇತ್ರದ ರಸ್ತೆಗಳೆಲ್ಲ ಗುಂಡಿ ಬಿದ್ದಿದೆ. ಬಯಲು ಶೌಚಾಲಯಗಳಿಲ್ಲ. ಉದ್ಯಾನವನಗಳು ಸಂಪೂರ್ಣ ಹದಗೆಟ್ಟಿವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಹೊಂದಿದ್ದೇನೆ. ಜಿಲ್ಲೆಯ ಜೀವನಾಡಿ ಮೈಷುಗರ್‌ ಕಾರ್ಖಾನೆ ಕಬ್ಬು ಅರೆಯುವಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಕಾರ್ಖಾನೆ ಉನ್ನತ್ತಿಗೆ ಶ್ರಮಿಸುತ್ತೇನೆ ಎಂದರು.

ಮಂಡ್ಯದಲ್ಲಿ ರೈತರು ಕಳೆದ ಹಲವು ದಿನಗಳಿಂದ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದೆ ಸಂಕಷ್ಟಪರಿಸ್ಥಿತಿ ಎದುರಿಸುತ್ತಿದ್ದಾರೆ. ರೈತರ ಬೆಂಬಲಕ್ಕೆ ಯಾರು ಬರುತ್ತಿಲ್ಲ. ಹೀಗಾಗಿ ಅವರಿಗೆ ಬೆಂಬಲ ಒದಗಿಸುವುದಕ್ಕೆ ಆದ್ಯತೆ ಎಂದರು.

ರಾಜ್ಯ ಸಮಿತಿಗೆ ಮೂರು ಹೆಸರು

ಜೆಡಿಎಸ್‌ ಪಕ್ಷದಿಂದ ವಲಸೆ ಬಂದಿದ್ದೀರಿ ನಿಮಗೆ ಟಿಕೆಟ್‌ ಸಿಗುವ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಿಂದ 16 ಮಂದಿ ಆಕಾಂಕ್ಷಿತರಿದ್ದಾರೆ. ಆ ಪೈಕಿ 3 ಹೆಸರನ್ನು ರಾಜ್ಯ ಸಮಿತಿಗೆ ಕಳುಹಿಸಿಕೊಡಲಾಗಿದೆ. ಅದರಲ್ಲಿ ನನ್ನ ಹೆಸರು ಇದೆ ಎಂಬ ಆಶಾಭಾವನೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜಿಲ್ಲಾ ನಾಯಕರಾದ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಬೆಂಬಲವಿದೆ. ಕಳೆದ 25 ವರ್ಷದಿಂದ ಜೆಡಿಎಸ್‌ನಲ್ಲಿದ್ದೆ. ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದೆ. ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದೇನೆ ಎಂದರು.

35 ವರ್ಷದ ವೈದ್ಯ ವೃತ್ತಿ ನನಗೆ ಎಲ್ಲವನ್ನು ಕೊಟ್ಟಿದೆ. ಆದರೆ, ಸಾಮಾಜಿಕ ಸೇವೆ ಮಾಡಲು ಶಕ್ತಿ ಇಲ್ಲ. ಆದ್ದರಿಂದ ರಾಜಕೀಯಕ್ಕೆ ಬಂದಿದ್ದೇನೆ. ಅಧಿಕಾರ ಇದ್ದರೆ, ಅಧಿಕಾರಿಗಳು ಮನ್ನಣೆ ಕೊಟ್ಟು ಜನರ ಸಮಸ್ಯೆ ಬಗೆಹರಿಸುತ್ತಾರೆ. ಇದರಿಂದ ಹಲವಾರು ಜನರಿಗೆ ಅನುಕೂಲ ಮಾಡಿಕೊಡಬಹುದು ಎಂದರು.