ಸುಪಾರಿ ಕೊಟ್ಟು ಪತ್ನಿಯನ್ನು ಕೊಲೆ ಮಾಡಿಸಿದ್ದ ಪತಿ ಸೆರೆ
ಪತಿಯೋರ್ವ ಪತ್ನಿಯನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ.
ಬೆಂಗಳೂರು [ಡಿ.24]: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಐದು ಲಕ್ಷ ರು. ಸುಪಾರಿ ನೀಡಿ ತನ್ನ ಪತ್ನಿಯನ್ನು ಹತ್ಯೆ ಮಾಡಿಸಿದ್ದ ಸಹಕಾರ ಬ್ಯಾಂಕ್ ಗುಮಾಸ್ತ ಸೇರಿದಂತೆ ಮೂವರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಸೆರೆ ಹಿಡಿದಿದ್ದು, ಇದರೊಂದಿಗೆ ಎರಡೇ ದಿನದಲ್ಲಿ ಪ್ರಕರಣ ಭೇದಿಸಿದ್ದಾರೆ.
ಡಿ.21ರಂದು ವೈಯಾಲಿಕಾವಲ್ ಟೆಂಪಲ್ ಸ್ಟ್ರೀಟ್ ನಿವಾಸಿ ವಿನುತಾ (34) ಎಂಬುವರ ಕೊಲೆಯಾಗಿತ್ತು. ಈ ಪ್ರಕರಣ ಸಂಬಂಧ ಮೃತಳ ಪತಿ ಪೀಣ್ಯದ ನರೇಂದ್ರ ಬಾಬು, ಸುಪಾರಿ ಹಂತಕರಾದ ಆಟೋ ಚಾಲಕ ಪ್ರಶಾಂತ್ ಹಾಗೂ ಹೆಬ್ಬಾಳ ಕೆಂಪಾಪುರದ ಜಗನ್ನಾಥ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಮತ್ತಷ್ಟುಮಂದಿ ಪಾಲ್ಗೊಂಡಿರುವ ಬಗ್ಗೆ ಅನುಮಾನವಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಚೇತನ್ ಸಿಂಗ್ ರಾಥೋಡ್ ಸೋಮವಾರ ತಿಳಿಸಿದ್ದಾರೆ.
ಕಿಟಕಿ ಮೂಲಕ ಒಳನುಗ್ಗಿ ಹತ್ಯೆ:
13 ವರ್ಷಗಳ ಹಿಂದೆ ಸಹಕಾರ ಬ್ಯಾಂಕ್ ಗುಮಾಸ್ತ ನರೇಂದ್ರ ಬಾಬು ಹಾಗೂ ವಿನುತಾ ವಿವಾಹವಾಗಿದ್ದು, ದಂಪತಿಗೆ ಗಂಡು ಮಗನಿದ್ದಾನೆ. ಸಾಂಸಾರಿಕ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ 2013ರಲ್ಲಿ ದಂಪತಿ ಪ್ರತ್ಯೇಕವಾಗಿದ್ದರು. ಇದಾದ ನಂತರವು ಪರಸ್ಪರ ಗಲಾಟೆಗಳು ನಡೆದು, ಕೊನೆಗೆ ಪೊಲೀಸ್ ಠಾಣೆಗಳಲ್ಲಿ 15 ದೂರು-ಪ್ರತಿದೂರು ದಾಖಲಾಗಿದ್ದವು. ಈ ರಗಳೆಯಿಂದ ಕೆರಳಿದ ಬಾಬು, ತನ್ನ ಪತ್ನಿಗೆ ಹತ್ಯೆಗೆ ನಿರ್ಧರಿಸಿದ್ದ. ಇದಕ್ಕಾಗಿ ಆತನಿಗೆ ಸ್ನೇಹಿತರಾದ ಪ್ರಶಾಂತ್ ಹಾಗೂ ಜಗನ್ನಾಥ್ ಸಹಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿ ಚನ್ನಣ್ಣನವರ್ ವ್ಯಾಪ್ತಿಯಲ್ಲಿ ಪೊಲೀಸರಿಂದಲೇ ನಿರ್ಮಾಪಕನ ಕಿಡ್ನಾಪ್?
ಕೊನೆಗೆ ಪತ್ನಿ ಹತ್ಯೆಗೆ 5 ಲಕ್ಷಕ್ಕೆ ಸುಪಾರಿ ನೀಡಿದ ಬಾಬು, ಕೊಲೆಗೆ ಪಕ್ಕಾ ಸಂಚು ರೂಪಿಸಿದ್ದ. ಅದರಂತೆ ಎರಡು ತಿಂಗಳಿಂದ ವಿನುತಾ ಮನೆಯಲ್ಲಿ ಬಾಡಿಗೆ ಪಡೆದು ನೆಲೆಸಿದ್ದ ಪ್ರಶಾಂತ್, ಆಕೆಯ ಚಲನವಲನ ನಿಗಾ ವಹಿಸಿ ಮಾಹಿತಿ ಸಂಗ್ರಹಿಸಿದ್ದ. ಡಿ.21ರಂದು ಶನಿವಾರ ಆಕೆ ಮನೆಯಿಂದ ಹೊರಗೆ ಹೋಗಿದ್ದನ್ನು ಖಚಿತಪಡಿಸಿಕೊಂಡ ಆತ, ಜಗನ್ನಾಥ್‌ಗೆ ಮಾಹಿತಿ ನೀಡಿದ. ಬಳಿಕ ಆರೋಪಿಗಳು, ವಿನುತಾ ಮನೆಯ ಶೌಚಾಲಯದ ಕಿಟಕಿ ಮುರಿದು ಒಳ ಪ್ರವೇಶಿಸಿದ್ದರು. ರಾತ್ರಿ ಮನೆಗೆ ಮರಳಿದ ವಿನುತಾ, ಸೋಫಾ ಮೇಲೆ ಕುಳಿತು ಟಿವಿ ವಿಕ್ಷೀಸುತ್ತಿದ್ದರು. ಆಗ ಹಿಂದಿನಿಂದ ಬಂದ ಸುಪಾರಿ ಹಂತಕರು, ಆಕೆಯ ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದೇ ವೇಳೆ ವಿನುತಾಳ ಪೋಷಕರು ಆಕೆಗೆ ಫೋನ್ ಮಾಡಿದ್ದಾರೆ. ಆದರೆ, ಆಕೆ ಕರೆ ಸ್ವೀಕರಿಸಿದ ಕಾರಣ ಭಯಗೊಂಡು ತಕ್ಷಣವೇ ಮಗಳ ಮನೆಗೆ ಧಾವಿಸಿದ್ದಾರೆ. ಬಾಗಿಲ್ ಬಂದ್ ಆಗಿರುವುದು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಕಬ್ಬಿಣ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೊಬೈಲ್ ಕರೆ ಆಧರಿಸಿ ಆರೋಪಿ ಸೆರೆ:
ಕೌಟುಂಬಿಕ ಕಲಹ ಮೇರೆಗೆ ಕೃತ್ಯ ನಡೆದಿರಬಹುದು ಎಂದು ಶಂಕೆ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ಕೂಡಲೇ ಬಾಬು ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಹತ್ಯೆ ನಡೆದ ಮುನ್ನ ಹಾಗೂ ನಂತರ ಪ್ರಶಾಂತ್ ಜತೆ ಮಾತುಕತೆ ನಡೆಸಿರುವುದು ಗೊತ್ತಾಗಿದೆ. ತಕ್ಷಣ ಪ್ರಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾದ ಪ್ರಕರಣ ಬೆಳಕಿಗೆ ಬಂದಿದೆ.
ದಂಪತಿ ಮೇಲೆ 15 ಪ್ರಕರಣಗಳು
ನರೇಂದ್ರ ಮತ್ತು ವಿನುತಾ ನಡುವಿನ ಕೌಟುಂಬಿಕ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿ, ದಂಪತಿ ವಿರುದ್ಧ ಪ್ರತ್ಯೇಕವಾಗಿ 15 ಪ್ರಕರಣಗಳು ದಾಖಲಾಗಿದ್ದವು.
2017ರ ಜುಲೈನಲ್ಲಿ ದಪ್ಪಗಿದ್ದೀಯಾ ಎಂದು ಪತಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ವಿನುತಾ, ವೈಯಾಲಿಕಾವಲ್ ಠಾಣೆ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಲ್ಲದೆ, ಪತಿಯಿಂದ ನನ್ನ ಜೀವಕ್ಕೆ ಅಪಾಯವಿದೆ ಎಂದು ಪೊಲೀಸರ ಅಳಲು ತೋಡಿಕೊಂಡು ರಕ್ಷಣೆಗೆ ಕೋರಿದ್ದಳು. ಆಗ ಆಕೆಯ ಮನೆ ಬಳಿ ಗಸ್ತು ಹೆಚ್ಚಿಸಿದ ಪೊಲೀಸರು, ಆಕೆಯ ಮನೆಯಲ್ಲೇ ಬೀಟ್ ಪುಸ್ತಕವನ್ನು ಸಹ ಇಟ್ಟು ಪ್ರತಿ ದಿನ ಸಹಿ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.