ಮೈಸೂರು(ಡಿ.06): ಇನ್‌ಸ್ಪೆಕ್ಟರ್‌ ಒಬ್ಬರು ತಮ್ಮನ್ನು ನಿಂದಿಸಿದರು ಎಂದು ಆರೋಪಿಸಿ ಶಾಸಕ ಅನಿಲ್‌ ಚಿಕ್ಕಮಾದು ಅವರು ಗ್ರಾಮಸ್ಥರು ಹಾಗೂ ಕಾಂಗ್ರೆಸ್‌ ಮುಖಂಡರ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ಉಗ್ರ ಸ್ವರೂಪ ಪಡೆದ ಪರಿಣಾಮ ಹುಣಸೂರು ತಾಲೂಕು ಹೊಸರಾಮನಹಳ್ಳಿಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಮತಚಲಾಯಿಸಿ ಬಂದ ಬಳಿಕ ತಮ್ಮ ಬೆಂಬಲಿಗರೊಂದಿಗೆ ನಿಂತಿದ್ದ ಶಾಸಕ ಅನಿಲ್‌ ಅವರನ್ನು ಪೊಲೀಸರು ಇಲ್ಲಿ ನಿಷೇಧಾಜ್ಞೆ ಇರುವುದರಿಂದ ಗುಂಪುಗೂಡದೇ, ದೂರ ಹೋಗುವಂತೆ ಸೂಚಿಸಿದ್ದಾರೆ. ಈ ವೇಳೆ ಇನ್‌ಸ್ಪೆಕ್ಟರ್‌ ಸುನೀಲ್‌ ಎಂಬುವರು ಶಾಸಕರನ್ನು ತಳ್ಳಿದರು ಮತ್ತು ನಿಂದಿಸಿದರು ಎಂಬ ಸುದ್ದಿ ಹರಡಿತು. ಕೂಡಲೇ ಗ್ರಾಮಸ್ಥರು, ನಾಯಕ ಸಮಾಜದ ಮುಖಂಡರು ಗುಂಪುಗೂಡಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಆಗಲೂ ಪೊಲೀಸರು ಗುಂಪುಗೂಡದಂತೆ ಮತ್ತು ನಿಷೇಧಾಜ್ಞೆ ಉಲ್ಲಂಘಿಸದಂತೆ ಸೂಚಿಸಿದ್ದಾರೆ.

ಶಾಸಕ ಅನಿಲ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ವಿರುದ್ಧ ಕೇಸ್‌

ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಬಿಜೆಪಿ ಸರ್ಕಾರದ ಆಣತಿಯಂತೆ ಪೊಲೀಸರು ವರ್ತಿಸುತ್ತಿದ್ದಾರೆ. ನಾಚಿಕೆ ಆಗಬೇಕು ನಿಮಗೆ ಕಾಂಗ್ರೆಸ್‌ನವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗಿಳಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಎಎಸ್ಪಿ ಸ್ನೇಹಾ, ಡಿವೈಎಸ್ಪಿ ಸುಂದರಾಜ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಪೂವಯ್ಯ ಆಗಮಿಸಿ, ಕೆಎಸ್‌ಆರ್‌ಪಿ ಮತ್ತು ಡಿಎಆರ್‌ನ ಮೂರು ವ್ಯಾನ್‌ಗಳನ್ನು ಸ್ಥಳಕ್ಕೆ ಕರೆಸಿದರು.

ಸಂಧಾನ ಸಭೆ:

ಗ್ರಾಮದ ಬೆಟ್ಟದ ಚಿಕ್ಕಮ್ಮನ ದೇವಸ್ಥಾನದ ಬಳಿ ಸಂಧಾನ ಸಭೆ ನಡೆಯಿತು. ಈ ವೇಳೆಗಾಗಲೇ ಪೊಲೀಸರು ಘಟನೆಯ ವೀಡಿಯೋವನ್ನು ಪರಿಶೀಲಿಸಿದರು. ಜೊತೆಗೆ ಶಾಸಕರೊಂದಿಗೆ ಇನ್‌ಸ್ಪೆಕ್ಟರ್‌ ಅವರ ತಪ್ಪಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೂ ಡಾ.ಬಿ.ಜೆ. ವಿಜಯಕುಮಾರ್‌ ಮತ್ತು ಗ್ರಾಮಸ್ಥರು, ತಪ್ಪಿತಸ್ಥ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಕ್ಷಮೆ ಕೋರುವಂತೆ ಹೇಳಬೇಕು ಎಂದು ಪಟ್ಟು ಹಿಡಿದರು. ಎಸ್ಪಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಎಎಸ್ಪಿ ಸ್ನೇಹಾ ಅವರು ಯಾವುದೇ ಕಾರಣಕ್ಕೂ ಇನ್‌ಸ್ಪೆಕ್ಟರ್‌ ಅವರನ್ನು ಸ್ಥಳಕ್ಕೆ ಕರೆಸಲು ಸಾಧ್ಯವಿಲ್ಲ. ನಿಮಗೆ ಅನ್ಯಾಯವಾಗಿದ್ದರೆ ನೀವು ದೂರು ನೀಡಬಹುದು. ತಾವು ಈಗ ಪ್ರತಿಭಟನೆ ಕೈ ಬಿಡದಿದ್ದರೆ ನಿಷೇಧಾಜ್ಞೆ ಉಲ್ಲಂಘಿಸಿರುವುದರಿಂದ ನಿಮ್ಮ ವಿರುದ್ಧವೇ ಪ್ರಕರಣ ದಾಖಲಿಸಬೇಕಾಗುತ್ತದೆ. ಈ ಸಂಬಂಧ ನಮಗೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮುಖಕ್ಕೆ ಇರಿದ..!

ಆದರೂ ಡಾ.ಬಿ.ಜೆ. ವಿಜಯಕುಮಾರ್‌ ಪಟ್ಟು ಬಿಡಲಿಲ್ಲ. ಎಎಸ್ಪಿ ಸ್ನೇಹಾ ಅವರು ತಪ್ಪಿತಸ್ಥ ಅಧಿಕಾರಿಯನ್ನು ಇಲ್ಲಿಗೆ ಕರೆತಂದು ಕ್ಷಮೆ ಕೋರಿಸುವುದಾಗಿ ಹೇಳಿ ಈಗ ಆಗುವುದಿಲ್ಲ ಎನ್ನುತ್ತಿದ್ದಾರೆ. ಕೂಡಲೇ ಕ್ಷಮೆ ಕೋರಿಸುವವರೆಗೆ ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಡಿವೈಎಸ್ಪಿ ಸುಂದರ್‌ರಾಜ್‌ ಅವರಿಗೆ ಬಿ.ಜೆ. ವಿಜಯಕುಮಾರ್‌ ಏಯ್‌, ಏನು ಮಾಡುತೀಯಾ, ಅರೆಸ್ಟ್‌ ಮಾಡ್ತೀಯಾ ಎಂದು ಏರು ಧ್ವನಿಯಲ್ಲಿ ಹರಿಹಾಯ್ದರು. ಈ ಸಂದರ್ಭದಲ್ಲಿ ಪೂವಯ್ಯ, ಎಸ್‌ಐ ಜಯಪ್ರಕಾಶ್‌ ಅವರು ವಿಜಯಕುಮಾರ್‌ ವಿರುದ್ಧ ತಿರುಗಿಬಿದ್ದರು.

ಸಿದ್ದರಾಮಯ್ಯ ಮಧ್ಯಪ್ರವೇಶ:

ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಡಾ.ಬಿ.ಜೆ. ವಿಜಯಕುಮಾರ್‌ ಅವರು, ಶಾಸಕ ಅನಿಲ್‌ ಚಿಕ್ಕಮಾದು ಅವರಿಗೆ ಅಪಮಾನವಾಗಿದೆ ಎಂದು ದೂರಿ, ಎಎಸ್ಪಿ ಸ್ನೇಹಾ ಅವರಿಗೆ ಫೋನ್‌ ನೀಡಿದರು. ಸ್ನೇಹಾ ಅವರು ಘಟನೆಯನ್ನು ವಿವರಿಸಿ, ಅನಿಲ್‌ ಚಿಕ್ಕಮಾದು ಅವರು ದೂರು ನೀಡಿದರೆ ನಾವು ಘಟನೆಯ ವಾಸ್ತವಾಂಶವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಚುನಾವಣೆ ನಡೆಯುವ ದಿನ ನಿಷೇಧಾಜ್ಞೆ ಇರುವುದರಿಂದ ಇಲ್ಲಿ ಗುಂಪು ಸೇರಿರುವುದು ತಪ್ಪಾಗುತ್ತದೆ. ಬೇಡ ಎಂದು ನೀವೇ ಹೇಳಿ. ಅನಿಲ್‌ ಚಿಕ್ಕಮಾದು ಅವರ ದೊಡ್ಡಮ್ಮ ಕೂಡಾ, ಪೊಲೀಸರನ್ನು ನೀನೇ ಕ್ಷಮಿಸಿ ದೊಡ್ಡವನಾಗಿಬಿಡು ಎಂದಿದ್ದಾರೆ. ಆದರೂ ಇಲ್ಲಿ ಯಾರೂ ಒಪ್ಪುತ್ತಿಲ್ಲ ಎಂದು ವಿವರವಾಗಿ ತಿಳಿಸಿದರು. ಆಗ ಸಿದ್ದರಾಮಯ್ಯ, ಅನಿಲ್‌ಚಿಕ್ಕಮಾದುಗೆ ಸಂಬಂಧಿಸಿದವರಿಗೆ ಲಿಖಿತ ದೂರು ನೀಡಿ, ಪ್ರತಿಭಟನೆ ಕೈ ಬಿಡುವಂತೆ ಸೂಚಿಸಿದ ಮೇರೆಗೆ ಪ್ರತಿಭಟನೆ ಕೈಬಿಟ್ಟರು.

ಈ ನಡುವೆ ದೇವಸ್ಥಾನದ ಆವರಣದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ನೆರೆದಿದ್ದರು. ಇವನ್ನು ಚದುರಿಸಲು ಸರ್ಕಲ್‌ ಇನ್‌ಸ್ಪೆಕ್ಟರ್‌ ಪೂವಯ್ಯ ಮೈಕ್‌ನಲ್ಲಿ ಸಾರಿದರು. ಅನಗತ್ಯವಾಗಿ ಯಾರೊಬ್ಬರು ಇಲ್ಲಿ ಗುಂಪುಗೂಡದಂತೆ ಸೂಚಿಸಿದ ಮೇಲೆ ಎಲ್ಲರೂ ಮನೆ ಸೇರಿದರು.

ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ ಕುಡುಕ : ಠಾಣೆಯಲ್ಲೂ ರಂಪಾಟ ಮಾಡಿದ

ಇನ್‌ಸ್ಪೆಕರ್‌ ಸುನೀಲ್‌ ಅವರು ನೀನು ಯಾವ ಶಾಸಕ ಎಂದು ಪ್ರಶ್ನಿಸಿ ಅವಮಾನ ಮಾಡಿದ್ದಾರೆ. ಒಬ್ಬ ಶಾಸಕನೇ ಗೊತ್ತಿಲ್ಲದ ಮೇಲೆ ಅವರು ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ. ಈ ಊರಿನ ಮಗ ನಾನು. ನನ್ನನ್ನೇ ಇಲ್ಲಿ ನಿಲ್ಲಬಾರದು ಹೋಗಿ ಎಂದು ತಳ್ಳಿದ್ದಾರೆ. ಇಲ್ಲಿಗೆ ಬಂದು ತಪ್ಪಿತಸ್ಥರು ಕ್ಷಮೆ ಕೋರಬೇಕು ಎಂದು ಎಚ್.ಡಿ. ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ಹೇಳಿದ್ದಾರೆ.

ಬಿರಿಯಾನಿ ಜೊತೆ ಈರುಳ್ಳಿ ಕೊಡದ್ದಕ್ಕೆ ಮಾರಾಮಾರಿ!

ರಾಜ್ಯದಲ್ಲಿನ ಬಿಜೆಪಿ ಸರ್ಕಾರ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ. ಪೊಲೀಸರು ಅನಗತ್ಯವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದೊಂದು ಬೇಜವಾಬ್ದಾರಿ ನಡವಳಿಕೆ. ನಾವು ಈ ಸಂಬಂಧ ದೂರು ನೀಡುತ್ತೇವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಹೇಳಿದ್ದಾರೆ.