ಬಿರಿಯಾನಿ ಜೊತೆ ಈರುಳ್ಳಿ ಕೊಡದ್ದಕ್ಕೆ ಮಾರಾಮಾರಿ!
ಈರುಳ್ಳಿ ಬೆಲೆ ಏರಿಕೆ ಈಗ ಎಲ್ಲೆಲ್ಲೂ ಸದ್ದಾಗುತ್ತಿದೆ. ಈಗ ಗಲಾಟೆ ಮಾಡುವ ಹಂತಕ್ಕೂ ತಲುಪಿದ್ದು ಹೋಟೆಲ್ ನಲ್ಲಿ ಈರುಳ್ಳಿ ಕೊಡದಿರುವುದಕ್ಕೆ ಮಾರಾಮಾರಿಯೂ ನಡೆದಿದೆ.
ಬೆಳಗಾವಿ [ಡಿ.06]: ಈರುಳ್ಳಿ ಬೆಲೆ ಗಗನಕ್ಕೇರಿರುವ ಪರಿಣಾಮ ಕಳ್ಳಕಾಕರು ರೈತರ ಹೊಲ ಲೂಟಿ ಮಾಡಿದ್ದಾಯ್ತು, ದರೋಡೆಗೂ ಯತ್ನಿಸಿದ್ದಾಯ್ತು. ಇದೀಗ ಉಪಾಹಾರ ಗೃಹವೊಂದರಲ್ಲಿ ಈರುಳ್ಳಿ ವಿಷಯವಾಗಿ ಹೊಡೆದಾಟವಾಗಿರುವ ಪ್ರಕರಣ ಬೆಳಗಾವಿಯಿಂದ ವರದಿಯಾಗಿದೆ.
ಈರುಳ್ಳಿ ಬೆಲೆ ಹೆಚ್ಚಳದಿಂದಾಗಿ ಹೆಚ್ಚಿನ ಹೋಟೆಲ್‌ಗಳಲ್ಲಿ ಊಟದೊಂದಿಗೆ ಈರುಳ್ಳಿ ಕೊಡುವುದನ್ನೇ ನಿಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಹಾಗೂ ಹೋಟೆಲ್ ಸರ್ವರ್ ಮಧ್ಯೆ ಮಾರಾಮಾರಿ ನಡೆದ ಪರಿಣಾಮ ಇಬ್ಬರು ಗ್ರಾಹಕರು ಗಾಯಗೊಂಡ ಘಟನೆ ಬೆಳಗಾವಿ ನಗರದ ನೆಹರು ನಗರದಲ್ಲಿ ಬುಧವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ವಿಶ್ವೇಶ್ವರಯ್ಯ ನಗರದ ಇಬ್ಬರು ಯುವಕರು ಬುಧವಾರ ರಾತ್ರಿ ಊಟಕ್ಕೆಂದು ನೆಹರು ನಗರದಲ್ಲಿರುವ ಮಾಂಸಾಹಾರಿ ಹೋಟೆಲ್‌ಗೆ ಹೋಗಿದ್ದು ಬಿರ್ಯಾನಿ ಆರ್ಡರ್ ಮಾಡಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ವರ್ ಬಿರ್ಯಾನಿ ನೀಡಿದಾಗ ಅದರೊಂದಿಗೆ ಈರುಳ್ಳಿ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ಯುವಕರು ಸರ್ವರ್ ಜೊತೆ ಮಾತಿನ ಚಮಮಕಿ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಆ ಇಬ್ಬರು ಗ್ರಾಹಕರು ಮತ್ತು ಹೋಟೆಲ್‌ನಲ್ಲಿದ್ದ ಸಿಬ್ಬಂದಿವರ್ಗಕ್ಕೆ ಗಟಾಲೆ ಆಗಿ ಪರಸ್ಪರ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೊಟೇಲ್ ಸಿಬ್ಬಂದಿ ಚಮಚದಿಂದ ತಿವಿದು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗಾಯಾಳು ಗ್ರಾಹಕರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.