ಬೆಂಗಳೂರು[ನ.27]: ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳಿದ ಹುಳಿಮಾವು ಕೆರೆ ಏರಿ ಒಡೆದ ಘಟನೆಯಲ್ಲಿ ಬೆಂಗಳೂರು ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳ ನೇರ ಪಾತ್ರವಿದೆ. ಬೆಂಗಳೂರು ಜಲಮಂಡಳಿ ಅಧಿಕಾರಿಯೇ ಕಾಮಗಾರಿ ಹೆಸರಿನಲ್ಲಿ ಮುಂದೆ ನಿಂತು ಕೆರೆ ಏರಿ ಒಡೆಸಿದ್ದಾರೆ ಎಂಬ ಗಂಭೀರ ಆರೋಪ ಪ್ರತ್ಯಕ್ಷದರ್ಶಿಯೊಬ್ಬರಿಂದ ಕೇಳಿ ಬಂದಿದೆ.

ಕೆರೆ ಏರಿ ಒಡೆಯುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೃಷ್ಣ ಲೇಔಟ್‌ ನಿವಾಸಿಯೊಬ್ಬರು ಕೆರೆ ಒಡೆಯಲು ಕಾರಣಕರ್ತರು ಯಾರು? ಕೆರೆ ಒಡೆದ ಕ್ಷಣಗಳು ಹಾಗೂ ಕೆರೆ ಪ್ರವಾಹದಿಂದ ತಾವು ತಪ್ಪಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ‘ಕನ್ನಡಪ್ರಭ’ ಜತೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ಭಾನುವಾರ ಕೆರೆ ಏರಿ ಒಡೆಯುವುದಕ್ಕೂ ಮೊದಲು ಜೆಸಿಬಿ ಯಂತ್ರದ ಶಬ್ದ ಕೇಳಿಸಿದ್ದರಿಂದ ಕೆರೆಯತ್ತ ನೋಡಿದೆ. ಪ್ರಸ್ತುತ ಪೊಲೀಸರ ವಶದಲ್ಲಿರುವ ಅಧಿಕಾರಿ, ಹತ್ತಿರ ನಿಂತು ಜೆಸಿಬಿಯಲ್ಲಿ ಕೆರೆ ಏರಿ ಬಳಿ ಕೆಲಸ ಮಾಡಿಸುತ್ತಿದ್ದರು. ಅವರ ಮೇಲುಸ್ತುವಾರಿಯಲ್ಲಿ ಇಬ್ಬರು ವ್ಯಕ್ತಿಗಳು ಜೆಸಿಬಿ ಸಹಾಯದಿಂದ ಕೆರೆ ಏರಿ ಒಡೆದರು ಎಂದು ನಾರಾಯಣಸ್ವಾಮಿ ಆರೋಪ ಮಾಡಿದರು.

ಹುಳಿಮಾವು ಕೆರೆ ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಬದುಕು!

ಈ ಮೂಲಕ ಪೊಲೀಸರ ವಿಚಾರಣೆ ಎದುರಿಸುತ್ತಿರುವ ಬೆಂಗಳೂರು ಜಲಮಂಡಳಿ ಸಹಾಯಕ ಎಂಜಿನಿಯರ್‌ ಕಾರ್ತಿಕ್‌ ವಿರುದ್ಧ ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ಆರೋಪ ಮಾಡಿದ್ದು, ಕೆರೆ ಏರಿ ಒಡೆದ ಪ್ರಕರಣದಲ್ಲಿ ಗೊಂದಲಗಳು ಮತ್ತಷ್ಟುಹೆಚ್ಚಾಗಿವೆ.

ಜಲಮಂಡಳಿ ಅಧಿಕಾರಿ ಜೆಸಿಬಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಸಹಜ ಕುತೂಹಲದಿಂದ ನಿಂತಿರಲಿಲ್ಲ. ಬದಲಿಗೆ ಕೆರೆ ಏರಿ ಮೇಲೆ ಕೆಲಸ ಮಾಡಲು ಮೇಲುಸ್ತುವಾರಿ ವಹಿಸುತ್ತಿದ್ದರು. ಅಲ್ಲದೆ, ಜೆಸಿಬಿ ಚಾಲಕನಿಗೆ ಸ್ವತಃ ಕಾರ್ತಿಕ್‌ ಅವರೇ ಊಟ ಕೊಟ್ಟು ತಾನು ಮರಳಿ ಬರುವವರೆಗೂ ಕಾರ್ಯ ನಿರ್ವಹಿಸುವಂತೆ ಜೆಸಿಬಿ ಚಾಲಕನಿಗೆ ಹೇಳಿ ಹೋದರು. ಬಳಿಕ ಅವರು ಕೆರೆ ಕಡೆಗೆ ವಾಪಸು ಸುಳಿಯಲಿಲ್ಲ. ಇದೇ ವೇಳೆ ಜೆಸಿಬಿ ಚಾಲಕನ ಕೆಲಸಕ್ಕೆ ಏಕಾಏಕಿ ಕೆರೆ ಏರಿ ಒಡೆದು ರಭಸವಾಗಿ ನಮ್ಮ ಮನೆಗಳತ್ತ ನೀರು ನುಗ್ಗಿತು. ಪ್ರಾಣಭೀತಿಯಿಂದ ನಾವು ಓಡಿ ಹೋದೆವು ಎಂದು ಹೇಳಿದರು.

ತಾವೇ ಹೊಯ್ಸಳ ವಾಹನ ಚಲಾಯಿಸಿದ ಕಮಿಷನರ್‌!: ಹುಳಿಮಾವು ಕೆರೆಯತ್ತ ದೌಡು!