ವರದಿ :  ಜಿ.ಡಿ.ಹೆಗಡೆ

ಕಾರವಾರ (ಆ.17): ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ನೆರೆಯಿಂದ ಸಾವಿರಾರು ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ವಾರಗಳ ಕಾಲ ನೀರಲ್ಲಿಯೇ ನಿಂತು ಹಾಳಾಗಿವೆ. ಇದೀಗ ನೆರೆ ಇಳಿದಿದ್ದು, ಮೆಕ್ಯಾನಿಕ್‌ಗಳಿಗೆ ಭಾರೀ ಬೇಡಿಕೆ ಬಂದಿದೆ.

ರಾಮನಗುಳಿ, ವೈದ್ಯಹೆಗ್ಗಾರ್‌, ಹೆಬ್ಬುಳ, ಡೋಂಗ್ರಿ ಒಳಗೊಂಡು ಈ ಕೆಲವು ಭಾಗದಲ್ಲೇ 300ಕ್ಕೂ ಹೆಚ್ಚಿನ ವಾಹನಗಳು ಹಾಳಾಗಿ ನಿಂತಿದೆ. ಜಿಲ್ಲಾದ್ಯಂತ ಸಾವಿರಕ್ಕೂ ಅಧಿಕ ವಾಹನಗಳು ಹಾಳಾಗಿದೆ ಎಂದು ಅಂದಾಜಿಸಲಾಗಿದೆ. ಅಂಕೋಲಾ, ಕಾರವಾರ ತಾಲೂಕಿನಲ್ಲಿ ವಾಹನಗಳಿಗೆ ಅಧಿಕ ಪ್ರಮಾಣದಲ್ಲಿ ಹಾನಿಯಾಗಿದೆ. ಕಾರವಾರ ತಾಲೂಕಿನ ಕದ್ರಾ, ಮಲ್ಲಾಪುರ, ಹಿಂದುವಾಡ, ಕೈಗಾ ವಸತಿ ಸಮುಚ್ಛಯದಲ್ಲಿ ನೂರಾರು ವಾಹನಗಳು ಜಲಾವೃತ ಆಗಿತ್ತು. ಅಂಕೋಲಾ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಾದ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ 100ಕ್ಕೂ ಹೆಚ್ಚಿನ ಟ್ರಕ್‌ಗಳು ಮುಕ್ಕಾಲು ಭಾಗ ನೀರಿನಲ್ಲಿ ಆವೃತವಾಗಿದ್ದವು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಾಹನ ದುರಸ್ತಿಗೆ ತೆಗೆದುಕೊಂಡು ಹೋಗುವುದಕ್ಕೆ ಸಾವಿರಾರು ರುಪಾಯಿ ವೆಚ್ಚ ಮಾಡಬೇಕಾಗುತ್ತದೆ. ಇದರಿಂದ ಕೆಲವು ಗ್ಯಾರೇಜ್‌ಗಳಲ್ಲಿ ಮಾತ್ರ ನೆರೆಯಿಂದ ಹಾಳಾದ ವಾಹನ ಕಾಣಸಿಗುತ್ತಿದೆ. ಎಲ್ಲಾ ವಾಹನಗಳು ದುರಸ್ತಿಗೆ ಬಂದರೆ ಬಿಡುವಿಲ್ಲದೇ ಕೆಲಸ ಮಾಡಿದರೂ ದುರಸ್ತಿ ಕಾರ್ಯ ಮುಗಿಯದಂತಾಗಿದೆ. ನೆರೆಗೆ ಚಾಲನಾ ಪರವಾನಗಿ, ವಾಹನದ ವಿಮೆ ಒಳಗೊಂಡು ಅಗತ್ಯ ದಾಖಲೆಗಳು ಜಲಸಮಾಧಿ ಆಗಿದೆ. ಅವುಗಳನ್ನು ಕೂಡಾ ಹೊಸದಾಗಿ ಪಡೆಯುವುದೇ ದೊಡ್ಡ ಚಿಂತೆಯಾಗಿದೆ.