ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಪ್ರೇಮ ಪ್ರಕರಣವು ಲವ್ ಜಿಹಾದ್ ಆರೋಪಕ್ಕೆ ತಿರುಗಿದೆ. ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಹುಬ್ಬಳ್ಳಿ: ನಗರದಲ್ಲಿ ಲವ್ ಜಿಹಾದ್ ಆರೋಪದ ಕೇಳಿಬಂದಿದ್ದು, ಎರಡೂ ಕಡೆಯವರಿಂದ ಗಲಾಟೆಯಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಘಟನೆ ನಡೆದಿದೆ. ಜಿಮ್ ಟ್ರೈನರ್ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಸಂಬಂಧದಿಂದ ಆರಂಭವಾದ ವಿಚಾರ ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗಿ, ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ವಿಕಾಸ್ ನಗರದಲ್ಲಿ ವಾಸವಾಗಿರುವ ಹಿಂದೂ ಯುವತಿ ಹಾಗೂ ವಿಜಯನಗರ ನಿವಾಸಿಯಾದ ಮುಸ್ಲಿಂ ಯುವಕ ಸಮೀರ್ ನಡುವೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ. ಈ ಪರಿಚಯ ಜಿಮ್‌ನಲ್ಲಿ ಆರಂಭವಾಗಿ ನಂತರ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು.
ವಿಚಾರ ತಿಳಿದು ಮಧ್ಯಪ್ರವೇಶ
ಇವರಿಬ್ಬರ ಪ್ರೀತಿಯ ವಿಚಾರದ ಬಗ್ಗೆ ಯುವತಿಯ ಮನೆಯವರಿಗೆ ಮಾಹಿತಿ ಸಿಕ್ಕ ಬಳಿಕ ವಿಷಯ ಗಂಭೀರ ರೂಪ ಪಡೆದುಕೊಂಡಿದೆ. ಇದೇ ವೇಳೆ ವಿಚಾರ ತಿಳಿದ ಹಿಂದೂಪರ ಸಂಘಟನೆಗಳು ಮಧ್ಯಪ್ರವೇಶ ಮಾಡಿ, ಯುವಕ ಸಮೀರ್‌ನನ್ನು ವಿಚಾರಣೆ ನಡೆಸಿದ ಬಳಿಕ ಹಳೆ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಯುವಕನ ಕುಟುಂಬಸ್ಥರು, ವಿಕಾಸ್ ನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇನ್ನೊಂದೆಡೆ, ಯುವತಿಯ ಮನೆಯವರೂ ಯುವಕನ ಮನೆಗೆ ತೆರಳಿ ಪ್ರಶ್ನಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಪರಸ್ಪರ ಗಲಾಟೆಯಲ್ಲಿ ಎರಡೂ ಕಡೆಯವರಿಗೂ ಗಾಯಗಳಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಹಸ್ತಕ್ಷೇಪ
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಎರಡೂ ಕುಟುಂಬಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಈ ಕುರಿತು ಮಾತನಾಡಿದ ಆಯುಕ್ತರು, “ಯುವತಿ ಮನೆಯವರು ಯುವಕನ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಯುವಕನ ಮನೆಯವರೂ ಯುವತಿ ಮನೆಗೆ ಹೋಗಿ ಗಲಾಟೆ ನಡೆಸಿದ್ದಾರೆ. ಎರಡೂ ಕಡೆಯವರಿಗೂ ಗಾಯಗಳಾಗಿವೆ. ಸದ್ಯಕ್ಕೆ ಯಾರೂ ಅಧಿಕೃತ ದೂರು ನೀಡಿಲ್ಲ. ಏನೇ ಸಮಸ್ಯೆ ಇದ್ದರೂ ಕಾನೂನು ಮಾರ್ಗವೇ ಅನುಸರಿಸಬೇಕು,” ಎಂದು ತಿಳಿಸಿದ್ದಾರೆ.
ಜಿಮ್ ಟ್ರೈನರ್ ಮೇಲೂ ಆರೋಪ
ಈ ಪ್ರಕರಣದ ಹಿನ್ನಲೆಯಲ್ಲಿ, ಜಿಮ್‌ಗಳಲ್ಲಿ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್ ಜಿಹಾದ್ ನಡೆಸಲಾಗುತ್ತಿದೆ ಎಂದು ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಸಂಬಂಧಿಸಿದ ಜಿಮ್ ಟ್ರೈನರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ನೂರಾರು ಕಾರ್ಯಕರ್ತರು ಠಾಣೆ ಮುಂದೆ ಸೇರಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತರು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಮನಗೊಳಿಸಿದರು.
ಎರಡೂ ಮನೆಯವರು ಚಿರಪರಿಚಿತರು
ಪ್ರಕರಣ ಸಂಬಂಧ ಸಮೀರ್ ಸಹೋದರಿ ತೈಸಿಮ್ ಮುಲ್ಲಾ ಪ್ರತಿಕ್ರಿಯೆ ನೀಡಿ, ಆಕೆ ಕಲಬುರ್ಗಿ ಹುಡುಗಿ ಸಮೀರ್ ಎಂಬಾತ ನನ್ನ ತಮ್ಮ. ಇವರಿಬ್ಬರೂ ಮೂರು ವರ್ಷದಿಂದ ರಿಲೇಶನ್ ಶಿಪ್ ನಲ್ಲಿದ್ದಾರೆ. ಎಸ್ ಎಸ್ ಕೆ ಸಮಾಜದವರು ನಮ್ಮ ಮನೆಗೆ ಬಂದು ನನ್ನ ತಮ್ಮನನ್ನ ಕಿಡ್ನ್ಯಾಪ್ ಮಾಡಿದ್ದಾರೆ. ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಅನ್ಯೋನ್ಯವಾಗಿದ್ದರು. ನಾವೆಲ್ಲ ಸೇರಿಯೇ ಪ್ರವಾಸಕ್ಕೆ, ಶಾಪಿಂಗ್ಗೆ ಹೋಗ್ತಿದ್ವಿ . 23 ವರ್ಷದ ನನ್ನ ತಮ್ಮನನ್ನು ಬೆಳಗ್ಗೆ 7 ಗಂಟೆಗೆ ಕಿಡ್ನಾಪ್ ಮಾಡಿದ್ದಾರೆ. ನನ್ನ ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅವನಿಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಿದ್ದೇವೆ. ದನದ ಶೇಡ್ಡಿಗೆ ಕರೆದು ನೂರು ಜನರಿಂದ ಹಲ್ಲೆ ಮಾಡಲಾಗಿದೆ. ಅನಂತರ ನಾವು ಹುಡುಗಿಯ ಮನೆಗೆ ಸಹ ಹೋಗಿದ್ವಿ. ಯುವತಿಯ ಮನೆ ಬಳಿ ಗಲಾಟೆ ಆಗಿದೆ. ಯುವತಿಯ ಮನೆಯವರು ಮೊದಲೆಲ್ಲ ನಮ್ಮ ಮನೆಗೆ ಬಂದು ಹೋಗಿದ್ದಾರೆ. ನಮ್ಮ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಹಿನ್ನೆಲೆ ಎಲ್ಲರೂ ಆತಂಕದಲ್ಲಿದ್ದಾರೆ. ಹೀಗಾಗಿ ನಾವು ಯುವತಿಯ ಮನೆಗೂ ಕೂಡ ಹೋಗಿದ್ವಿ. ಎಸ್ ಎಸ್ ಕೆ ಸಮಾಜದವರಿಗೆ ನಮ್ಮ ಅನ್ಯೋನ್ಯತೆ ಬಗ್ಗೆ ಏನು ಗೊತ್ತಿಲ್ಲ. ನಮ್ಮ ತಮ್ಮ ನನ್ನ ಅಪಹರಿಸಿದ ಹಿನ್ನೆಲೆ ನಾವು ಈಗಾಗಲೇ ದೂರು ದಾಖಲಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಯುವತಿ ತಾಯಿ ಗಂಭೀರ ಆರೋಪ
ಮಾಧ್ಯಮಗಳೆದರು ಯುವತಿ ತಾಯಿ ರಾಜೇಶ್ವರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೀಮ್ ಟ್ರೈನರ್ ಸಮೀರ್ ನನ್ನ ಮಗಳಿಗೆ ತಲೆ ಕೆಡೆಸಿದ್ದಾನೆ. ಮೂರು ನಾಲ್ಕು ವರ್ಷಗಳಿಂದ ನನ್ ಮಗಳು ಜಿಮ್ ಗೆ ಹೋಗುತ್ತಿದ್ದಳು. ತಂಗಿ ಇದ್ದಂತೆ, ನಮ್ಮ ಮಗಳು ಇದ್ದಂತೆ ಎಂದು ಸಮೀರ್ ಕುಟುಂಬಸ್ಥರು ಹೇಳುತ್ತಿದ್ರು. ನನ್ನ ಮಗಳ ಮೇಲೆ ಹಿಪ್ನೋಟೈಸ್ ಮಾಡಲಾಗಿದೆ. ಎನರ್ಜಿ ಡ್ರಿಂಕ್ಸ್ ನಲ್ಲಿ ಮಾತ್ರೆ ಹಾಕಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇತ್ತಿಚೆಗೆ ನನ್ನ ಮಗಳು ಹೇಳಿದಾಗಲೇ ಗೊತ್ತಾಗಿದೆ. ಕಳೆದ ನಾಲ್ಕೈದು ದಿನದಿಂದ ನನ್ನ ಮಗಳಿಗೆ ಸಮೀರ್ ಮತ್ತು ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ. ಇಂದು ನಮ್ಮನ್ನು ಸುಟ್ಟ ಹಾಕಲು ಸಮೀರ್ ಕುಟುಂಬಸ್ಥರು ಬಂದಿದ್ರು. ಪೆಟ್ರೋಲ್ ಹಾಕಿ ತಲವಾರ್ ತೆಗೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿ
ಪ್ರಸ್ತುತ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸರು ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ.


