ಅವರೆಲ್ಲ ಸ್ವಂತ ಸೂರಿಲ್ಲದೆ ಲೈನ್ ಮನೆಗಳಲ್ಲಿ ಬದುಕು ದೂಡುತ್ತಿದ್ದವರು. 9 ವರ್ಷಗಳ ಹಿಂದೆ ಬಂದು ಇಂಚಿಂಚು ಜಾಗಕ್ಕೆ ಹೋರಾಟ ನಡೆಸಿದ್ದರು. ಸ್ವಂತ ಸೂರಿನ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜೂ.05): ಅವರೆಲ್ಲ ಸ್ವಂತ ಸೂರಿಲ್ಲದೆ ಲೈನ್ ಮನೆಗಳಲ್ಲಿ ಬದುಕು ದೂಡುತ್ತಿದ್ದವರು. 9 ವರ್ಷಗಳ ಹಿಂದೆ ಬಂದು ಇಂಚಿಂಚು ಜಾಗಕ್ಕೆ ಹೋರಾಟ ನಡೆಸಿದ್ದರು. ಸ್ವಂತ ಸೂರಿನ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು ಸ್ವಂತ ಸೂರಿನ ಕನಸು ನನಸಾಗಿದೆ. ಕೊನೆಗೂ ಸುಂದರ ಗೂಡು ಸೇರಿದ್ದಾರೆ. ಹಾಗಾದ್ರೆ ಹೀಗೊಂದು ಮನೆ ಹಸ್ತಾಂತರ ಕಾರ್ಯಕ್ರಮ ನಡೆದ್ದದ್ದಾದ್ರು ಎಲ್ಲಿ, ಹೇಗಿದೆ ಸರ್ಕಾರದ ಆ ಮನೆಗಳು ಅಂತ್ತೀರಾ ಇಲ್ಲಿದೆ ನೋಡಿ.
ಹೌದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ನೂರಕ್ಕು ಹೆಚ್ಚು ಕುಟುಂಬಗಳು ಶಾಶ್ವತ ಸೂರಿಲ್ಲದೆ ಹರಕಲು ಮುರುಕಲು ಪ್ಲಾಸ್ಟಿಕ್ ಹೊದಿಕೆಯಲ್ಲಿ ಜೀವನ ದೂಡುತ್ತಿದ್ದರು. ಸ್ವಂತ ಸೂರಿಗಾಗಿ ಆಗ್ರಹಿಸಿ ಅಧಿಕಾರಿಗಳು ರಾಜಕೀಯ ನಾಯಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ರು. ತಾಲ್ಲೂಕು ಕಚೇರಿ, ಜಿಲ್ಲಾಡಳಿತ ಕಚೇರಿಗಳ ಮುಂದೆ ಹಗಲು ರಾತ್ರಿ ಪ್ರತಿಭಟನೆ ನಡೆಸಿದ ಫಲವಾಗಿ ಇದೀಗ ಕಾಲ ಕೂಡಿ ಬಂದಿದೆ.
ಸ್ವಂತ ಸೂರಿಗಾಗಿ ಆಗ್ರಹಿಸಿದವರಿಗೆ ಕೊನೆಗೂ ಸೂರು ಸಿಕ್ಕಂತ್ತಾಗಿದೆ. ಕಳೆದ ಹಲವು ವರ್ಷಗಳಿಂದ ಸ್ವಂತ ಸೂರಿಗಾಗಿ ನಡೆದ ಹೋರಾಟದ ಫಲವಾಗಿ ಇದೀಗ ಸ್ವಂತ ಸೂರು ಸಿಕ್ಕಿದ್ದು ಆದಿವಾಸಿ ಕುಟುಂಬಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುವಂತೆ. ಇಷ್ಟು ದಿನಗಳ ಕಾಲ ನಮಗೆ ಸರಿಯಾದ ಸೂರಿಲ್ಲದೆ ಪ್ಲಾಸ್ಟಿಕ್ ಹೊದಿಕೆಯಲ್ಲಿ ಜೀವನ ದೂಡುತ್ತಿದ್ದೇವೆ. ಮಳೆ ಬಂದ್ರೆ ಸಾಕು ಮಳೆಯ ನೀರೆಲ್ಲ ಮನೆಯ ಒಳನುಗ್ಗಿ ನಿದ್ದೆ ಇಲ್ಲದೆ ಕಳೆದ ರಾತ್ರಿಗಳು ಅದೆಷ್ಟೋ.
ಮನೆ ಮನೆಯಲ್ಲೂ ಸಂತಸ
ಇದೀಗ ಕೊನೆಗೂ ಪ್ಲಾಸ್ಟಿಕ್ ಹೊದಿಕೆಯಿಂದ ಬೆಚ್ಚನೆಯ ಮನೆಗಳತ್ತ ಆದಿವಾಸಿಗಳು ಹೆಜ್ಜೆ ಹಾಕಿದ್ದು ಸ್ವಂತ ಸೂರಿನ ಕನಸು ಕಂಡವರಿಗೆ ಕೊನೆಗೂ ಸ್ವಂತ ಸೂರು ದೊರೆತ್ತಿರುವುದು ಎಲ್ಲಿಲ್ಲದ ಖುಷಿ ಮನೆ ಮಾಡಿದೆ. ಮನೆ ಉದ್ಘಾಟನೆಗೆ ಆಗಮಿಸಿದ ಶಾಸಕ ಪೊನ್ನಣ್ಣರನ್ನು ಫಲಾನುಭವಿಗಳು ಸಾಂಪ್ರದಾಯಿಕ ಓಲಗದೊಂದಿಗೆ ಭವ್ಯ ಸ್ವಾಗತ ಕೋರಿದ್ರು. ಶಾಸಕ ಪೊನ್ನಣ್ಣ ಫಲವಾಗಿ ಸೂರಿಲ್ಲದವರಿಗೆ ಸ್ವಂತ ಸೂರಿನ ಭಾಗ್ಯ ಸಿಕ್ಕಿದ್ದು, ಕೊನೆಗೂ ಮನೆಗಾಗಿ ಹೋರಾಟ ನಡೆಸಿದವರ ಮನೆ ಮನೆಯಲ್ಲೂ ಸಂತಸ ಮನೆ ಮಾಡಿದೆ. ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ಶುಕ್ರವಾರ ಫಲಾನುಭವಿಗಳಿಗೆ ನೂತನ ಮನೆಗಳ ಹಸ್ತಾಂತರ ಮಾಡಿದ್ರು.
ಐಟಿಡಿಪಿ ಇಲಾಖೆ ನಿಧಿ ಹಾಗೂ ವಿವಿಧ ಬ್ಯಾಂಕುಗಳ ಸಿಎಸ್ಆರ್ ಅನುದಾನದ ಮೂಲಕ ಒಟ್ಟು ಆರು ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಒನ್ ಬಿ.ಹೆಚ್ ಕೆ ಮನೆಯನ್ನ ನಿರ್ಮಿಸಿದ್ದು ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ. ಅದರಲ್ಲಿ ಮೊದಲ ಹಂತದಲ್ಲಿ 43 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿದ್ದು ಉಳಿದ ಮನೆಗಳನ್ನು ಮುಂದಿನ ದಿನದಲ್ಲಿ ಕಾಮಗಾರಿ ಮುಗಿಸಿ ಹಸ್ತಾಂತರಿಸಲಾಗುವುದೆಂದು ಶಾಸಕ ಪೊನ್ನಣ್ಣ ತಿಳಿಸಿದ್ರು. ಒಟ್ಟಿನಲ್ಲಿ ಹಲವು ಸಮಯದಿಂದ ಸ್ವಂತ ಸೂರಿಗಾಗಿ ಜಾತಕ ಪಕ್ಷಿಯಂತೆ ಕಾದಿದ್ದವರಿಗೆ ಕೊನೆಗೂ ಸ್ವಂತ ಸೂರಿನ ಭಾಗ್ಯ ಸಿಕ್ಕಿದ್ದು ಎಲ್ಲರ ಮನೆ ಮನದಲ್ಲೂ ಸಂತಸ ಮಾಡಿರೋದಂತ್ತು ಸತ್ಯ.


