ಶಿವಾನಂದ ಗೊಂಬಿ

ಹುಬ್ಬಳ್ಳಿ[ಮಾ.21]: ಕೊರೋನಾ ಮಹಾಮಾರಿಗೆ ಹೆದರಿ ರಾಜ್ಯ ಸರ್ಕಾರ ಎಮರ್ಜನ್ಸಿ ಜಾರಿಮಾಡಿದೆ. ಮಾಸ್ಕ್‌ ಧರಿಸಿ, ಶಾನಟೈಸರ್‌ನಿಂದ ಕೈ ತೊಳೆದುಕೊಳ್ಳಿ ಎಂದು ಸರ್ಕಾರವೇ ಹೇಳುತ್ತಿದ್ದರೂ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕಸಗೂಡಿಸುವ, ಚರಂಡಿ ಮತ್ತು ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವ 2600 ಪೌರಕಾರ್ಮಿಕರಿಗೆ ಈ ವರೆಗೆ ಮಾಸ್ಕ್‌ ಕೂಡ ಸಿಕ್ಕಿಲ್ಲ.

ಪೌರಕಾರ್ಮಿಕರಿಗೆ ಕೊರೋನಾ ಸೋಂಕು ತಗುವುದಿಲ್ಲವೇ? ಕಾರ್ಮಿಕರಿಗೆ ಕೊರೋನಾ ಭೀತಿ ಇಲ್ಲವೇ? ಅವರು ಮನುಷ್ಯರಲ್ಲವೇ?. ಕೊರೋನಾ ಭೀತಿ ಇಡೀ ಜಗತ್ತಿನಲ್ಲೇ ಹಬ್ಬಿದೆ. ಅತ್ತ ಪ್ರಧಾನಿ ನರೇಂದ್ರ ಮೋದಿ, ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಪದೇ ಪದೇ ಕೈತೊಳೆದುಕೊಳ್ಳಿ, ಕೈ ಕಾಲು ತೊಳೆದುಕೊಳ್ಳಿ. ನಿಮ್ಮ ಸುತ್ತಮುತ್ತಲಿನ ಸ್ವಚ್ಛತೆಗೆ ಆದ್ಯತೆ ನೀಡಿ ಎಂದೆಲ್ಲ ಮನವಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಬಹುತೇಕ ಕಚೇರಿಗಳಲ್ಲೂ ಸ್ಯಾನಿಟೈಸರ್‌, ಹ್ಯಾಂಡ್‌ವಾಶ್‌ಗಳನ್ನೆಲ್ಲ ಇಡಲಾಗಿದೆ. ಟೆಕ್ಕಿಗಳು, ಖಾಸಗಿ ಮತ್ತು ಸರ್ಕಾರಿ ನೌಕರರು ಸೇರಿದಂತೆ ಮನೆಯಲ್ಲಿ ಕೆಲಸ ಮಾಡಲು ಸಾಧ್ಯವಿರುವವರಿಗೆ ವರ್ಕ್ ಫ್ರಂ ಹೋಮ್‌ಗೆ ಅನುಮತಿ ನೀಡಲಾಗುತ್ತಿದೆ.

ಕೊರೋನಾ: ರಾಜ್ಯದಲ್ಲಿ ನಿನ್ನೆ ಒಂದೂ ಹೊಸ ಕೇಸ್‌ ಇಲ್ಲ, 4 ದಿನದಲ್ಲಿ ಇದೇ ಮೊದಲು!

ಆದರೆ ಪೌರಕಾರ್ಮಿಕರ ಕೆಲಸ ಅಗತ್ಯಗಳಲ್ಲೊಂದು. ಇಡೀ ಊರಿಗೆ ಊರೇ ಬಂದ್‌ ಆದರೂ ಪೌರಕಾರ್ಮಿಕರಂತೂ ಮನೆಯಲ್ಲಿ ಕುಳಿತುಕೊಳ್ಳುವಂತಿಲ್ಲ. ಏಕೆಂದರೆ ಸ್ವಚ್ಛತೆಗೆ ಅವರೇ ಆಧಾರ. ಅವರು ಒಂದು ದಿನ ಮನೆಯಲ್ಲಿ ಕುಳಿತರೇ ಮುಗೀತು ಇಡೀ ಊರಿಗೆ ಊರೇ ಗಬ್ಬೆದ್ದು ನಾರುತ್ತದೆ. ಕೊರೋನಾ ವೈರಸ್‌ ಒಂದೇ ಅಲ್ಲ, ಎಲ್ಲ ಬಗೆಯ ಸೋಂಕುಗಳು ವಿಪರೀತವಾಗಿ ಹಬ್ಬುತ್ತವೆ.

ಸುರಕ್ಷಾ ಸಾಧನಗಳನ್ನೇ ಕೊಟ್ಟಿಲ್ಲ:

ಹಾಗೆ ನೋಡಿದರೆ ಮಾಮೂಲು ಪರಿಸ್ಥಿತಿ ಇದ್ದಾಗಲೇ ಪೌರಕಾರ್ಮಿಕರಿಗೆ ಸುರಕ್ಷಾ ಸಾಧನೆಗಳನ್ನು ನೀಡಬೇಕು. ಆದರೆ ಕೊರೋನಾ ಭೀತಿ ಎದುರಿಸುತ್ತಿರುವ ಇಂತಹ ಸಮಯದಲ್ಲೇ ಪೌರಕಾರ್ಮಿಕರಿಗೆ ಯಾವುದೇ ಸುರಕ್ಷಾ ಸಾಧನಗಳನ್ನು ನೀಡಿಲ್ಲ. ಹೀಗಾಗಿ ಯಾವುದೇ ಸುರಕ್ಷೆ ಇಲ್ಲದಂತೆ ಬರೀ ಕೈಗಳಿಂದಲೇ ಸಲಿಕೆಗಳನ್ನು ಹಿಡಿದು ಚರಂಡಿ ಸ್ವಚ್ಛಗೊಳಿಸುತ್ತಿದ್ದಾರೆ. ಕಸ ತುಂಬಿದ ಬುಟ್ಟಿಎತ್ತುತ್ತಾರೆ. ಕಾಲಲ್ಲೂ ಬೂಟು ಇಲ್ಲ. ಕೆಲವರು ಹವಾಯಿ ಚಪ್ಪಲಿ ಹಾಕಿಕೊಂಡು ಕೆಲಸ ನಿರ್ವಹಿಸಿದರೆ, ಕೆಲವರಂತೂ ಬರಿಗಾಲಲ್ಲೇ ಈ ಎಲ್ಲ ಕೆಲಸ ನಿರ್ವಹಿಸುತ್ತಾರೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿದೆ.

ಕೊರೋನಾ ಭೀತಿಗೆ ಕೇರಳ-ದಕ್ಷಿಣ ಕನ್ನಡ ವಾಹನ ಸಂಚಾರ ಬಂದ್‌

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 2600ಕ್ಕೂ ಅಧಿಕ ಪೌರಕಾರ್ಮಿಕರಿದ್ದಾರೆ. ಇದರಲ್ಲಿ 2 ಸಾವಿರಕ್ಕೂ ಅಧಿಕ ಗುತ್ತಿಗೆ ಪೌರಕಾರ್ಮಿಕರಿದ್ದರೆ, 600ಕ್ಕೂ ಅಧಿಕ ಕಾಯಂ ಪೌರಕಾರ್ಮಿಕರಿದ್ದಾರೆ. ಇಷ್ಟುಜನರಿಗೆ ಸುರಕ್ಷಾ ಸಾಧನಗಳನ್ನು ಕೊಡುವುದು ಪಾಲಿಕೆಗೇನು ಕಷ್ಟದ ಕೆಲಸವಲ್ಲ. ಕೂಡಲೇ ಎಲ್ಲ ಕಾರ್ಮಿಕರಿಗೂ ಹ್ಯಾಂಡ್‌ಗ್ಲೌಸ್‌, ಮಾಸ್ಕ್‌, ಗಮ್‌ ಬೂಟ್ಸ್‌, ಸ್ಯಾನಿಟೈಸರ್‌, ಹ್ಯಾಂಡ್‌ ವಾಶ್‌ ಕೂಡ ಕೊಡಬೇಕು ಎಂಬುದು ನಾಗರಿಕರ ಆಗ್ರಹ.

ಒಟ್ಟಿನಲ್ಲಿ ಊರಿನ ಸ್ವಚ್ಛತೆ ಮಾಡುತ್ತಾ ಜನರ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಕೆ ನಿರ್ಲಕ್ಷ್ಯ ವಹಿಸಿರುವುದಂತೂ ಸತ್ಯ. ಇನ್ನೂ ಮೇಲಾದರೂ ಅಗತ್ಯ ಸುರಕ್ಷಾ ಸಾಧನಗಳನ್ನು ಕೊಡಬೇಕೆಂಬುದು ಒಕ್ಕೊರಲಿನ ಆಗ್ರಹ.

ಪೌರಕಾರ್ಮಿಕರಿಗೂ ಮಾಸ್ಕ್‌ ಸೇರಿದಂತೆ ಅಗತ್ಯ ಸುರಕ್ಷಾ ಸಾಧನಗಳನ್ನು ಕೊಡಲು ಕ್ರಮ ಕೈಗೊಳ್ಳುತ್ತೇವೆ. ಒಂದೆರಡು ದಿನಗಳಲ್ಲಿ ಅವುಗಳನ್ನು ವಿತರಿಸಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದ್ದಾರೆ. 

ರಾಜ್ಯದಲ್ಲಿ ಇಂದಿನಿಂದ ಮಾ.31ರವರೆಗೆ ಬಾರ್‌, ಪಬ್‌ ಬಂದ್‌!

ಪೌರಕಾರ್ಮಿಕರಿಗೆ ಹ್ಯಾಂಡ್‌ಗ್ಲೌಸ್‌, ಮಾಸ್ಕ್‌ ಸೇರಿದಂತೆ ಏನೊಂದೂ ಸುರಕ್ಷಾ ಸಾಧನಗಳನ್ನೇ ನೀಡಿಲ್ಲ. ಈ ಬಗ್ಗೆ ಪಾಲಿಕೆಗೆ ನಾಲ್ಕಾರು ಬಾರಿ ಮನವಿ ಕೊಟ್ಟಿದ್ದೇವೆ. ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಕೊಡದಿದ್ದಲ್ಲಿ ಇದರ ವಿರುದ್ಧವೇ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಗುತ್ತಿಗೆ ಪೌರಕಾರ್ಮಿಕರ ಸಂಘ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ತಿಳಿಸಿದ್ದಾರೆ. 

ನಾವು ಮನುಶಾರಲ್ಲ ಏನ್ರಿ.. ರಸ್ತೆದಾಗ ಅಡ್ಡಾಡೋರೆಲ್ಲ ಮಾಸ್ಕ್‌ ಹಾಕ್ಕೊಂಡು ಹೋಗ್ತಾ ಇರೋರನ್ನ ನೋಡ್ತೇವಿ. ನಾವ್‌ ನೋಡಿದ್ರ ಇಲ್ಲಿ ಗಟಾರ್‌ ಬಳಿತೇವಿ. ನಮ್ಗ ಮಾಸ್ಕ್‌ ಕೊಟ್ಟಿಲ್ಲ, ಹ್ಯಾಂಡ್‌ ಗ್ಲೌಸೂ ಕೊಟ್ಟಿಲ್ಲ. ನಮಗೇನಾರ ಆದರ ಯಾರ ಜವಾಬ್ದಾರಿ ಆಗ್ತಾರ ಸಾರ್‌ ಎಂದು ಪೌರಕಾರ್ಮಿಕ ದುರ್ಗಮ್ಮ ಹೇಳಿದ್ದಾರೆ.