ಬೆಂಗಳೂರು(ಮಾ.21): ಕೊರೋನಾ ವೈರಸ್‌ ಕುರಿತಂತೆ ಶುಕ್ರವಾರ ಯಾರದ್ದೂ ಪಾಸಿಟಿವ್‌ ಬಂದಿಲ್ಲ. ರಾಜ್ಯದಲ್ಲಿ ಸದ್ಯ 15 ಮಂದಿಗೆ ಕೊರೋನಾ ಸೋಂಕು ಇದೆ. ರಾಜ್ಯವು 3ನೇ ಹಂತ ತಲುಪಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ವೈರಸ್‌ ತಡೆಗಟ್ಟುವ ಸಂಬಂಧ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 1.23 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು-ಕಾರವಾರ ಬಂದರಿನಲ್ಲಿ ತಪಾಸಣೆ ನಡೆಸಲಾಗಿದೆ. ಈವರೆಗೆ 4,030 ಮಂದಿಯ ಮೇಲೆ ನಿಗಾವಹಿಸಲಾಗಿದೆ. ಶನಿವಾರ 981 ಮಂದಿಯ ಮೇಲೆ ನಿಗಾವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯಕ್ಕೆ 10ಕ್ಕೂ ಹೆಚ್ಚು ದೇಶಗಳಿಂದ ವ್ಯಕ್ತಿಗಳು ಬಂದಿದ್ದಾರೆ. 28 ದಿನಗಳ ಕಾಲ ಪ್ರತ್ಯೇಕವಾಗಿಡುವ ಸಮಯವು 756 ಮಂದಿಯದ್ದು ಮುಗಿದಿದೆ. ಈ ಪೈಕಿ 88 ಮಂದಿ ಶನಿವಾರ ಮುಗಿದಿದೆ. 3,125 ಮಂದಿ ಪ್ರತ್ಯೇಕವಾಗಿದ್ದು, ಶನಿವಾರ 74 ಮಂದಿಯನ್ನು ಪ್ರತ್ಯೇಕವಾಗಿಡಲಾಗಿದೆ. ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ 145 ಮಂದಿ ದಾಖಲಾಗಿದ್ದಾರೆ. ಇದರಲ್ಲಿ ಶನಿವಾರ 59 ಮಂದಿ ದಾಖಲಾಗಿದ್ದಾರೆ. ಒಟ್ಟಾರೆಯಾಗಿ 1,207 ಮಂದಿಯನ್ನು ಪರೀಕ್ಷೆಯನ್ನು ನಡೆಸಲಾಗಿದೆ. ಶನಿವಾರ 64 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಈವರೆಗೆ 971 ಮಂದಿಯಲ್ಲಿ ನೆಗೆಟಿವ್‌ ಬಂದಿದೆ ಎಂದರು.

ಆರೋಗ್ಯ ಇಲಾಖೆ ಹೊಸ ಕ್ರಮ

* ಕೊರೋನಾ ನಿಯಂತ್ರಣಕ್ಕಾಗಿ ಯಾವುದೇ ಆರೋಗ್ಯ ಇಲಾಖೆ ಸಿಬ್ಬಂದಿಗೂ ವಾರಾಂತ್ಯದ ರಜೆ ಇಲ್ಲ. ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ಸಿಬ್ಬಂದಿ, ವೈದ್ಯಕೀಯ ಕಾಲೇಜು, ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೂ ಸಹ ಮಾ.31ರವರೆಗೆ ರಜೆ ಇಲ್ಲ.

* ಯಾವ ರೀತಿಯ ಪ್ರಕರಣಗಳಲ್ಲಿ ಸೋಂಕು ಮಾದರಿ ಪರೀಕ್ಷೆಗೆ ಕಳುಹಿಸಬಹುದು ಎಂಬುದನ್ನು ಆಯ್ಕೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಲ್ಯಾಬ್‌ ಪರೀಕ್ಷಾ ಕುರಿತ ಸಲಹಾ ಮಾರ್ಗಸೂಚಿ ನೀಡಲಾಗಿದೆ.

*ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಪರ್ಕ ಪತ್ತೆಗೆ ಒಬ್ಬ ವೈದ್ಯರು, ಒಬ್ಬ ಶುಶ್ರೂಶಕರು, ಒಬ್ಬ ಎಂಎಸ್‌ಡಬ್ಲ್ಯೂ ವಿದ್ಯಾರ್ಹತೆಯುಳ್ಳವರನ್ನು ಒಳಗೊಂಡ ನೂರು ಜನರ ತಂಡ ನಿಯೋಜನೆ.