ಬೆಂಗಳೂರು(ಮಾ.21): ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಈಗಾಗಲೇ ಚಿತ್ರಮಂದಿರ, ಮಾಲ್‌ಗಳು ಸೇರಿದಂತೆ ಜನಸಂದಣಿಯ ವಾಣಿಜ್ಯ ಪ್ರದೇಶಗಳಿಗೆ ನಿರ್ಬಂಧ ವಿಧಿಸಿರುವ ಸರ್ಕಾರ ಇದೀಗ ಶನಿವಾರದಿಂದ ಅನ್ವಯವಾಗುವಂತೆ ರಾಜ್ಯಾದ್ಯಂತ ಬಾರ್‌ ಮತ್ತು ಪಬ್‌ಗಳಿಗೂ ಮಾ.31ರವರೆಗೆ ನಿಷೇಧ ಹೇರಿದೆ.

ಅಲ್ಲದೇ, ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದಲ್ಲಿನ ವಿವಿಧ ಮಹಾನಗರ ಪ್ರದೇಶದಲ್ಲಿನ ಜನರು ಹೋಟೆಲ್‌ನಲ್ಲಿ ಆಹಾರ ಸೇವಿಸದೆ ಪಾರ್ಸಲ್‌ ತೆಗೆದುಕೊಂಡು ಹೋಗುವಂತೆ ವಿನಂತಿ ಮಾಡಿಕೊಂಡಿದೆ.

ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ನಡೆದ ವಿಡಿಯೋ ಕಾನ್ಫರೆನ್ಸ್‌ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಾರ್‌ ಮತ್ತು ಪಬ್‌ಗಳಿಗೆ ಶನಿವಾರದಿಂದಲೇ ನಿರ್ಬಂಧಿಸಿ ವಿಧಿಸುವ ನಿರ್ಧಾರ ಕೈಗೊಂಡರು. ಬೆಂಗಳೂರಿನಲ್ಲಿ ಈ ಹಿಂದೆಯೇ ಪಬ್‌ಗಳಿಗೆ ನಿಷೇಧ ಹೇರಲಾಗಿದ್ದರೂ, ಅದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರಲಿಲ್ಲ. ಈಗ ಪಬ್‌ಗಳನ್ನು ಮುಚ್ಚುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದು, ಜೊತೆಗೆ ಈ ಆದೇಶವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿದೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಈಗಾಗಲೇ ಕೆಲವು ಚಟುವಟಿಕೆಗಳಿಗೆ ನಿಷೇಧ ಹೇರಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಕೊರೋನಾ ವೈರಸ್‌ ನಿಯಂತ್ರಣಕ್ಕೆ ಮತ್ತಷ್ಟುಕಠಿಣ ಕ್ರಮ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಬಾರ್‌ ಮತ್ತು ಪಬ್‌ಗಳಿಗೂ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದರು.

ಆಹಾರ ಮತ್ತು ಔಷಧಿಗಳ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಹಾನಗರ ಪ್ರದೇಶದಲ್ಲಿನ ಹೋಟೆಲ್‌ನಲ್ಲಿ ಅಡುಗೆಮನೆಯನ್ನು ಮುಚ್ಚುವ ಅಗತ್ಯ ಇಲ್ಲ. ಆದರೆ ಸ್ವಚ್ಛತೆಯನ್ನು ಕಾಪಾಡಬೇಕು. ಜನರು ಹೋಟೆಲ್‌ಗೆ ಹೋಗಿ ಆಹಾರ ಸೇವಿಸುವ ಬದಲು ಪಾರ್ಸಲ್‌ ತೆಗೆದುಕೊಂಡು ಹೋಗಿ ಮನೆಯಲ್ಲಿ ಸೇವಿಸಬೇಕು ಎಂದು ಇದೇ ವೇಳೆ ಜನತೆಯಲ್ಲಿ ಮನವಿ ಮಾಡಿದರು.

500 ಹೊಸ ವೆಂಟಿಲೇಟರ್‌ ಖರೀದಿ:

ಕೊರೋನಾ ಸೋಂಕಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 500 ವೆಂಟಿಲೇಟರ್‌ಗಳ ಖರೀದಿ ಮತ್ತು 5 ಸಾವಿರ ಆಕ್ಸಿಜನ್‌ ಸೌಲಭ್ಯ ಇರುವ ಹಾಸಿಗೆಗಳ ಸೌಲಭ್ಯ ಸೃಷ್ಟಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಲಬುರಗಿ, ಬಳ್ಳಾರಿಯಲ್ಲಿ ರೀಜೆಂಟ್‌ಗಳ ಅಗತ್ಯ ಇದೆ. ಹುಬ್ಬಳ್ಳಿ, ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿದ್ದು, ಅವರು ಅದಕ್ಕೆ ಸಮ್ಮತಿಸಿದ್ದಾರೆ. ಕೊರೋನಾ ವೈರಸ್ಸನ್ನು ಗಂಭೀರವಾಗಿ ಪರಿಗಣಿಸಿ ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಅಲ್ಲದೇ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಗತ್ಯವಿದ್ದರೆ ಒತ್ತಡ ಹೇರಬಹುದು ಎಂದು ನಿರ್ದೇಶನ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಹೋಟೆಲ್‌ನಲ್ಲಿ ಆಹಾರ ಶೇಖರಿಸುವಂತಿಲ್ಲ: ಸಿಎಂ ಕಟ್ಟಪ್ಪಣೆ

ಕೊರೋನಾ ವೈರಸ್‌ ಗಂಭೀರ ಸ್ವರೂಪದಿಂದ ಕೂಡಿರುವ ಹಿನ್ನೆಲೆಯಲ್ಲಿ ಹೋಟೆಲ್‌ ಮಾಲಿಕರು ಆಹಾರಗಳನ್ನು ಶೇಖರಿಸಿಡುವಂತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖಡಕ್‌ ಆಗಿ ನಿರ್ದೇಶನ ನೀಡಿದ್ದಾರೆ.

ಜನರು ಹೋಟೆಲ್‌ನಲ್ಲಿ ಆಹಾರ ಸಿಗುವುದಿಲ್ಲ ಎಂಬ ಆತಂಕಕ್ಕೊಳಗಾಗುವ ಅಗತ್ಯ ಇಲ್ಲ. ಹೋಟೆಲ್‌ನ ಅಡುಗೆ ಮನೆ ತೆರೆಯುವಂತೆ ತಿಳಿಸಲಾಗಿದೆ. ಹೋಟೆಲ್‌ಗೆ ಹೋಗಿ ಆಹಾರ ಸೇವಿಸುವ ಬದಲು ಪಾರ್ಸಲ್‌ ತಂದು ಮನೆಯಲ್ಲಿ ಸೇವಿಸಬೇಕು. ಹೋಟೆಲ್‌ನಲ್ಲಿ ತುಂಬಾ ಜನ ಕುಳಿತುಕೊಂಡು ಆಹಾರ ಸೇವನೆ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಮನೆಗೆ ಪಾರ್ಸಲ್‌ ತೆಗೆದುಕೊಂಡು ಹೋಗಬೇಕು. ಅಲ್ಲದೇ, ಹೋಟೆಲ್‌ನಲ್ಲಿ ಆಹಾರ ಶೇಖರಣೆ ಮಾಡಬಾರದು ಹಾಗೂ ಈ ಸಂದರ್ಭವನ್ನು ಹೋಟೆಲ್‌ ಮಾಲೀಕರು ದುರುಪಯೋಗ ಮಾಡಿಕೊಳ್ಳಬಾರದು ಎಂದು ಸೂಚಿಸಿದರು.

ವೈನ್‌ಶಾಪ್‌ಗಳು ಬಂದ್‌ ಇಲ್ಲ

ಶನಿವಾರದಿಂದ ರಾಜ್ಯಾದ್ಯಂತ ಬಾರ್‌ಗಳು ಮತ್ತು ಪಬ್‌ಗಳನ್ನು ಮಾ.31ರವರೆಗೆ ಮುಚ್ಚುವಂತೆ ಸರ್ಕಾರ ಆದೇಶಿಸಿದ್ದರೂ ವೈನ್‌ಶಾಪ್‌ಗಳು ಎಂದಿನಂತೆ ತೆರೆದಿರುತ್ತವೆ. ಪಾನಪ್ರಿಯರು ಮದ್ಯವನ್ನು ಈ ಮಳಿಗೆಗಳಿಂದ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.