ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಫ್ಲೈಓವರ್ ಕಾಮಗಾರಿಯಲ್ಲಿ ಗಂಭೀರ ತಾಂತ್ರಿಕ ಲೋಪಗಳನ್ನು 'ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್' ತಜ್ಞರು ಪತ್ತೆಹಚ್ಚಿದ್ದಾರೆ.

ಹುಬ್ಬಳ್ಳಿ (ಜೂ.23): ಇಲ್ಲಿನ ಪ್ರಮುಖ ಕೇಂದ್ರವಾಗಿರುವ ಕಿತ್ತೂರು ಚೆನ್ನಮ್ಮ ವೃತ್ತ (ರಾಣಿ ಚೆನ್ನಮ್ಮ ವೃತ್ತ) ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಫ್ಲೈಓವರ್ (ಮೇಲ್ಸೇತುವೆ) ಕಾಮಗಾರಿಯ ಗುಣಮಟ್ಟದ ಕುರಿತು ತಾಂತ್ರಿಕ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 'ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್' (ICI) ಹುಬ್ಬಳ್ಳಿ-ಧಾರವಾಡ ಕೇಂದ್ರದ ಸದಸ್ಯರು ಕಾಮಗಾರಿಯಲ್ಲಿ ಹಲವು ತಾಂತ್ರಿಕ ಲೋಪದೋಷಗಳನ್ನು ಪತ್ತೆಹಚ್ಚಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರದಂದು ಫ್ಲೈಓವರ್ ನಿರ್ಮಾಣ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಂಜಿನಿಯರ್‌ಗಳ ತಂಡ, ಕಾಮಗಾರಿಯ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸಕ್ಕೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತು ತಾವು ಗುರುತಿಸಿರುವ ಲೋಪದೋಷಗಳ ಸವಿಸ್ತಾರ ವರದಿಯನ್ನು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತಜ್ಞರು ನಿರ್ಧರಿಸಿದ್ದಾರೆ.

2 ವರ್ಷಗಳಿಂದ ತುಕ್ಕು ಹಿಡಿಯುತ್ತಿದೆ ಕಬ್ಬಿಣ!

ಐಸಿಐ ಹುಬ್ಬಳ್ಳಿ-ಧಾರವಾಡ ಕೇಂದ್ರದ ಅಧ್ಯಕ್ಷ ಸುರೇಶ್ ಕಿರೇಸೂರ್ ಹಾಗೂ ಹುಬ್ಬಳ್ಳಿ ಕೇಂದ್ರದ ಅಧ್ಯಕ್ಷ ಉಲಿವೆಪ್ಪ ಸುಣಗಾರ್ ನೇತೃತ್ವದಲ್ಲಿ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ, ಫ್ಲೈಓವರ್ ನಿರ್ಮಾಣಕ್ಕೆ ಬಳಸಲಾಗಿರುವ ಕಬ್ಬಿಣದ ಸರಳುಗಳು ದೀರ್ಘಕಾಲದಿಂದ ಮಳೆ ಮತ್ತು ಗಾಳಿಗೆ ತೆರೆದುಕೊಂಡಿರುವುದರಿಂದ ಸಂಪೂರ್ಣವಾಗಿ ತುಕ್ಕು ಹಿಡಿದಿರುವುದನ್ನು ಕಂಡುಹಿಡಿದರು.

ಸಾಮಾನ್ಯವಾಗಿ ಯಾವುದೇ ನಿರ್ಮಾಣದ ಕಬ್ಬಿಣವನ್ನು ಎರಡು ತಿಂಗಳಿಗಿಂತ ಹೆಚ್ಚು ಕಾಲ ಮಳೆ-ಗಾಳಿಗೆ ಮುಕ್ತವಾಗಿ ಬಿಡಬಾರದು. ಹಾಗೆ ಬಿಟ್ಟರೆ ತುಕ್ಕು ಹಿಡಿದು ಅದು ತನ್ನ ನಿಜವಾದ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಕಬ್ಬಿಣದ ವ್ಯಾಪಾರಿಗಳು ಸಹ ಇವುಗಳನ್ನು 6 ತಿಂಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿ ಇಡುವುದಿಲ್ಲ. ಆದರೆ, ಈ ಫ್ಲೈಓವರ್‌ನ ಕೆಲವು ಭಾಗಗಳಲ್ಲಿ ಕಬ್ಬಿಣದ ಸಳುಗಳನ್ನು ಬರೋಬ್ಬರಿ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಹಾಗೆಯೇ ಬಿಡಲಾಗಿದೆ! ಇದು ಇಡೀ ಫ್ಲೈಓವರ್‌ನ ಸ್ಥಿರತೆ ಮತ್ತು ಸುರಕ್ಷತೆಗೆ ದೊಡ್ಡ ಧಕ್ಕೆ ತರಬಹುದು. ಆದ್ದರಿಂದ ತಕ್ಷಣ ಇದರ ಗುಣಮಟ್ಟ ತಪಾಸಣೆ ನಡೆಸಲೇಬೇಕಿದೆ ಎಂದಿದ್ದಾರೆ.

ಸಾರ್ವಜನಿಕರ ಜೀವಕ್ಕೆ ಗಂಡಾಂತರ; ಸುರಕ್ಷತಾ ಕ್ರಮಗಳೇ ಇಲ್ಲ

ಗುತ್ತಿಗೆದಾರರು ಮತ್ತು ನೋಡಲ್ ಏಜೆನ್ಸಿಯು ಕಾರ್ಮಿಕರ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ತಜ್ಞರ ತಂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಿರ್ಮಾಣ ಪ್ರದೇಶಕ್ಕೆ ಜನರು ಅಥವಾ ವಾಹನಗಳು ನುಗ್ಗದಂತೆ ತಡೆಯಲು ಯಾವುದೇ ಗಟ್ಟಿಮುಟ್ಟಾದ ಬ್ಯಾರಿಕೇಡ್‌ಗಳನ್ನು ಹಾಕಲಾಗಿಲ್ಲ.

ಕಾಮಗಾರಿ ನಡೆಯುವ ಜಾಗದ ಸುತ್ತ ಅಳವಡಿಸಿರುವ ಸುರಕ್ಷತಾ ನೆಟ್‌ಗಳು (ಬಲೆಗಳು) ಸಮರ್ಪಕವಾಗಿಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ನಿರ್ಮಾಣ ಹಂತದ ಸೇತುವೆಯ ಕೆಳಗಡೆಯೇ ಓಡಾಡುವಂತಾಗಿದೆ. ಸರಿಯಾದ ಟ್ರಾಫಿಕ್ ಡೈವರ್ಷನ್ (ಸಂಚಾರ ಮಾರ್ಗ ಬದಲಾವಣೆ) ಅಥವಾ ಎಚ್ಚರಿಕೆ ಫಲಕಗಳನ್ನು ಹಾಕದ ಕಾರಣ ಈಗಾಗಲೇ ಇಲ್ಲಿ ಒಂದೆರಡು ಅಪಘಾತಗಳು ಸಂಭವಿಸಿದ್ದು, ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ, ನಿರಂತರ ವಾಹನ ದಟ್ಟಣೆ ಇರುವ ಚೆನ್ನಮ್ಮ ವೃತ್ತದಲ್ಲಿ ತಕ್ಷಣವೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಂಡ ಎಚ್ಚರಿಸಿದೆ.

5 ವರ್ಷವಾದ್ರೂ ಮುಗಿಯದ ಕೆಲಸ; ಸರ್ಕಾರಕ್ಕೆ ದೂರು

ಐಸಿಐ ಹುಬ್ಬಳ್ಳಿ-ಧಾರವಾಡ ಕೇಂದ್ರದ ಅಧ್ಯಕ್ಷ ಸುರೇಶ್ ಕಿರೇಸೂರ್ ಮಾತನಾಡಿ, "ಈ ಫ್ಲೈಓವರ್ ಕಾಮಗಾರಿ ಆರಂಭವಾಗಿದ್ದು 2021 ರಲ್ಲಿ. ಆದರೆ 5 ವರ್ಷ ಕಳೆದರೂ ಇನ್ನೂ ಕೆಲಸ ಮುಗಿದಿಲ್ಲ. ಗುತ್ತಿಗೆದಾರರು ಈಗಾಗಲೇ ಹಲವು ಡೆಡ್‌ಲೈನ್‌ಗಳನ್ನು ಮಿಸ್ ಮಾಡಿದ್ದಾರೆ. ಸದ್ಯ ಅವರೇ ಹಾಕಿಕೊಂಡಿರುವ ಡಿಸೆಂಬರ್ ಅವಧಿಯೊಳಗೂ ಈ ಕೆಲಸ ಮುಗಿಯುವ ಲಕ್ಷಣ ಕಾಣುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡಿ ನಿಗಾ ವಹಿಸಬೇಕು ಎಂದಿದ್ದಾರೆ.

"ನಾವು ಸಿದ್ಧಪಡಿಸಿರುವ ಈ ತಾಂತ್ರಿಕ ವರದಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶೀಘ್ರದಲ್ಲೇ ಕಳುಹಿಸಿಕೊಡಲಿದ್ದೇವೆ" ಎಂದು ಸುರೇಶ್ ಕಿರೇಸೂರ್ ತಿಳಿಸಿದ್ದಾರೆ.