ಚಿತ್ರದುರ್ಗ ಜಿಲ್ಲೆಯ ಜವಗೊಂಡನಹಳ್ಳಿಯಲ್ಲಿ ಉಳುಮೆ ಮಾಡುವಾಗ ಪಾಳೇಗಾರ ಅರಸ ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ ಕಾಲದ ಶಾಸನವೊಂದು ಪತ್ತೆಯಾಗಿದೆ. ಜನೋಪಕಾರಕ್ಕಾಗಿ ಕೆರೆ ಕಟ್ಟಿಸಿದ ದೊಡ್ಡಗೌಡನಿಗೆ ಅರಸರು ಉಂಬಳಿ ಭೂಮಿ ನೀಡಿದ್ದನ್ನು ಈ ಶಾಸನವು ದಾಖಲಿಸುತ್ತದೆ. ಪ್ರಸ್ತುತ ಈ ಶಾಸನವನ್ನು ಚಿತ್ರದುರ್ಗದ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಗ್ರಾಮದ ಕೆರೆಯ ಪಕ್ಕದ ಹೊಲವೊಂದರಲ್ಲಿ ಉಳುಮೆ ಮಾಡುವಾಗ ಚಿತ್ರದುರ್ಗದ ಪಾಳೇಗಾರ ಅರಸರ ಕಾಲಘಟ್ಟಕ್ಕೆ ಸೇರಿದ ಶಾಸನವೊಂದು ಪತ್ತೆಯಾಗಿದೆ.
ಪ್ರಸ್ತುತ ಈ ಶಾಸನವನ್ನು ಚಿತ್ರದುರ್ಗದ ರಂಗಯ್ಯನ ಬಾಗಿಲಿನಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ. ಕರಿಕಲ್ಲಿನಲ್ಲಿ ಕೆತ್ತಲಾದ ಈ ಶಾಸನವು ಒಟ್ಟು 17 ಸಾಲುಗಳನ್ನು ಒಳಗೊಂಡಿದ್ದು, ಕನ್ನಡ ಲಿಪಿ ಹಾಗೂ ಭಾಷೆಯಲ್ಲಿದೆ. ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ (ಕ್ರಿ.ಶ. 1575-1586) ಆಳ್ವಿಕೆಯ ಅವಧಿಯಲ್ಲಿ ಇದು ರಚನೆಯಾಗಿದೆ ಎಂದು ಗುರುತಿಸಲಾಗಿದೆ.
ಉಂಬಳಿ ಭೂಮಿ ಕೊಡುಗೆ
ಕಾಮಗೇತಿ ಇಮ್ಮಡಿ ಚಿಕ್ಕಣ್ಣ ಅರಸನ ಅಧೀನ ಅಧಿಕಾರಿಯಾಗಿದ್ದ ಲಕ್ಕಜೀಯನ ಮಗ ದೊಡ್ಡಗೌಡ ಎಂಬುವವರು ಜವಗೊಂಡನಹಳ್ಳಿಯಲ್ಲಿ ಜನೋಪಕಾರಕ್ಕಾಗಿ ಕೆರೆಯೊಂದನ್ನು ಕಟ್ಟಿಸಿದ್ದರು. ಈ ಕಾರ್ಯಕ್ಕೆ ಮೆಚ್ಚಿದ ಅರಸರು ದೊಡ್ಡಗೌಡನಿಗೆ ‘ಉಂಬಳಿ ಭೂಮಿ’ಯನ್ನು ಕೊಡುಗೆಯಾಗಿ ನೀಡಿರುವುದೇ ಈ ಶಾಸನದ ಮುಖ್ಯ ವಿಷಯವಾಗಿದೆ.
ಲಿಪಿಕಾರ ಅಥವಾ ಖಂಡರಣೆಕಾರನ ಪ್ರಮಾದದಿಂದಾಗಿ ಶಾಸನದಲ್ಲಿ ಅಲ್ಲಲ್ಲಿ ವ್ಯಾಕರಣ ದೋಷಗಳು ನುಸುಳಿವೆ. ‘ಕಾರ್ತಿಕ ಶುದ್ಧ 10 ಗುರುವಾರ ದಂದು ಇದು ರಚನೆಯಾಗಿದ್ದು, ಶಕವರ್ಷ ಹಾಗೂ ಸಂವತ್ಸರವನ್ನು ಗುರುತಿಸುವ ಅಕ್ಷರಗಳು ಅಸ್ಪಷ್ಟವಾಗಿವೆ.
ಕಾಶಿಯಲ್ಲಿ ಆಕಳನ್ನು ಕೊಂದ ಪಾಪ
ಶಾಸನದ ಕೊನೆಯಲ್ಲಿ ಶಾಪಾಶಯವಿದ್ದು, ಈ ದಾನ ಭೂಮಿಯನ್ನು ದೊಡ್ಡಗೌಡರ ಕುಟುಂಬದವರು ಸೂರ್ಯ-ಚಂದ್ರರಿರುವವರೆಗೂ ಸುಖವಾಗಿ ಅನುಭವಿಸತಕ್ಕದ್ದು. ಯಾರಾದರೂ ಈ ಭೂಮಿಯನ್ನು ಅಪಹರಿಸಿದರೆ ಕಾಶಿಯಲ್ಲಿ ಆಕಳನ್ನು ಕೊಂದ ಪಾಪಕ್ಕೆ ಈಡಾಗುವರು ಎಂದು ಎಚ್ಚರಿಸಲಾಗಿದೆ. ಶಾಸನವು ಅಲ್ಲಲ್ಲಿ ತ್ರುಟಿತವಾಗಿದ್ದು, ಇನ್ನಷ್ಟು ಹೆಚ್ಚಿನ ಅಧ್ಯಯನದ ಅಗತ್ಯವಿದೆ.
ಇದನ್ನೂ ಓದಿ: ಉತ್ಖನನ ವೇಳೆ 30ಕ್ಕೂ ಅಧಿಕ ರಾವಣನ ವಿಗ್ರಹಗಳು ಪತ್ತೆ! ಇತಿಹಾಸ ತಜ್ಞರಲ್ಲಿ ಆಶ್ಚರ್ಯ
ಶಾಸನ ದೊರೆತ ಸ್ಥಳಕ್ಕೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಪ್ರಹ್ಲಾದ್ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಶಾಸನವನ್ನು ಓದಿ ವಿಶ್ಲೇಷಿಸಲು ಡಾ. ರವಿಕುಮಾರ ಕೆ. ನವಲಗುಂದ ಸಹಕರಿಸಿದ್ದಾರೆ.
ಈ ಸಂದರ್ಭದಲ್ಲಿ ಜವನಗೊಂಡನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಮಹಾಂತೇಶ್, ಗ್ರಾಮದ ಮುಖಂಡರಾದ ಜಿ. ಹನುಮಂತೇಗೌಡ, ಕೆ.ಎಚ್. ಚಿತ್ರಲಿಂಗಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ: 356 ಎಕರೆಯ ಪಿಲಿಕುಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್, ತಾರಾಲಯಕ್ಕೆ 10 ಕೋಟಿ ರೂ. ವೆಚ್ಚದ ಲೇಸರ್ ತಂತ್ರಜ್ಞಾನ!


