ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬಂದ ಫ್ಲೈ-91 ವಿಮಾನ, ಲ್ಯಾಂಡಿಂಗ್ ಸಮಸ್ಯೆಯಿಂದಾಗಿ 3 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಡಿ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು. ತಾಂತ್ರಿಕ ದೋಷವೆಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದರೆ, ಹವಾಮಾನ ವೈಪರೀತ್ಯವೇ ಕಾರಣವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿ: ಹೈದರಾಬಾದ್‌-ಹುಬ್ಬಳ್ಳಿ-ಬೆಂಗಳೂರ ನಡುವೆ ಎರಡು ದಿನದ ಹಿಂದೇ (ಏ.17) ವಿಮಾನ ಸೇವೆ ಆರಂಭಿಸಿದ್ದ ಫ್ಲೈ-91 ಭಾನುವಾರ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗದೆ ಬರೋಬ್ಬರೀ 3 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ಸುತ್ತಿದೆ. ಬಳಿಕ ಬೆಂಗಳೂರಿಗೆ ತೆರಳಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಪ್ರಯಾಣಿಕರು ತಾಂತ್ರಿಕ ಕಾರಣವೆಂದರೆ, ಅಧಿಕಾರಿಗಳು ಹವಾಮಾನ ವೈಪರೀತ್ಯದಿಂದ ಹೀಗಾಗಿದೆ ಎಂದು ಹೇಳಿದ್ದಾರೆ.

18 ಜನ ಪ್ರಯಾಣಿಕರು ಸೇರಿದಂತೆ ವಿಮಾನದಲ್ಲಿದ್ದ 25ಕ್ಕೂ ಹೆಚ್ಚು ಜನರು ಸುರಕ್ಷಿತವಾಗಿದ್ದಾರೆ. ಆದರೆ, ಪ್ರಯಾಣಿಕರು ಭಯಭೀತರಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಫ್ಲೈ-91 ಸೇವೆ ಆರಂಭಿಸಿ ಎರಡೇ ದಿನದಲ್ಲಿ ಈ ಘಟನೆ ನಡೆದಿರುವುದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸಂಸ್ಥೆಯ ಸೇವೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ಆಗಿದ್ದೇನು?

ಹೈದರಾಬಾದ್‌ನಿಂದ ಭಾನುವಾರ ಮಧ್ಯಾಹ್ನ 3 ಗಂಟೆಗೆ ಹೊರಟಿದ್ದ ಫ್ಲೈ-91ಏರ್ ಲೈನ್ಸ್ IC3401 (ATRTURBOPROP AT7) ನಿಗದಿಯಂತೆ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಮುಂಡಗೋಡ, ದಾವಣಗೆರೆ, ಶಿವಮೊಗ್ಗದಲ್ಲಿ ಸುತ್ತಾಡಿ ಬಳಿಕ ಬೆಂಗಳೂರಿಗೆ ತೆರಳಿ 7.30ಕ್ಕೆ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಇದರಿಂದ 2 ಗಂಟೆಗೂ ಹೆಚ್ಚು ಆಕಾಶದಲ್ಲಿ ವಿಮಾಣ ಹಾರಾಡಿದ್ದರಿಂದ ಪ್ರಯಾಣಿಕರು ಭಯಭೀತರಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ವಿಮಾನ ಅಲ್ಲಿಂದ ಹುಬ್ಬಳ್ಳಿಗೆ ರಾತ್ರಿ 9ರ ಸುಮಾರಿಗೆ ಆಗಮಿಸಿ ಹೈದರಾಬಾದ್‌ಗೆ ತೆರಳಿದೆ.

ಕಣ್ಣೀರು; ಆತಂಕ

ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡ್‌ ಆಗದೆ ಆಕಾಶದಲ್ಲಿ ಸುತ್ತಿದ ಪರಿಣಾಮ ಪ್ರಯಾಣಿಕರು ಕಣ್ಣೀರು ಹಾಕಿ ತಮ್ಮ ಕುಟುಂಬಸ್ಥರಿಗೆ ವೀಡಿಯೋ ಸಂದೇಶ ಕಳಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಆರಂಭದಲ್ಲಿ ಫ್ಲೈ-91 ವಿಮಾನ ಸಂಸ್ಥೆ ಈ ರೀತಿ ಸೇವೆ ನೀಡಿದರೆ ಮುಂದಿನ ದಿನಗಳಲ್ಲಿ ಏನು ಗತಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲ ಪ್ರಯಾಣಿಕರು ಹುಬ್ಬಳ್ಳಿಯಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್‌ ಆಗದಿದ್ದರೆ ಹೈದರಾಬಾದ್‌ಗೆ ವಾಪಾಸ್‌ ಹೋಗಿ ಎಂದು ಹೇಳಿದ್ದಾರೆ. ಕೆಲವರು ಬೆಳಗಾವಿ ಅಥವಾ ಬೆಂಗಳೂರಿಗೆ ಹೋಗಿ. ವಿಮಾನದಲ್ಲಿ ಯಾವ ಸಮಸ್ಯೆಯಾಗಿದೆ ಎಂದು ಹೇಳಿ ಎಂದು ಸಿಬ್ಬಂದಿಯನ್ನು ಕೇಳುತ್ತಿರುವ ದೃಶ್ಯವೋ ಇದೆ.

ಹವಾಮಾನ ವೈಪರೀತ್ಯ

ಈ ನಡುವೆ ಭಾನುವಾರ ರಾತ್ರಿ ನಡೆದ ಘಟನೆ ಕುರಿತಂತೆ ಫ್ಲೈ- 91 ಸಂಸ್ಥೆಯು, ಯಾವುದೇ ಬಗೆಯ ತಾಂತ್ರಿಕ ದೋಷವಾಗಿಲ್ಲ. ಹವಾಮಾನ ವೈಪರೀತ್ಯದಿಂದ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಮಾಡಲು ಸಾಧ್ಯವಾಗಲಿಲ್ಲ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಳುಹಿಸಿ ಅಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಮಾಡಲಾಯಿತು. ಅಲ್ಲಿಂದ ಮರಳಿ ಹುಬ್ಬಳ್ಳಿಗೆ ಬಂದು, ಹೈದರಾಬಾದ್‌ಗೆ ವಿಮಾನವೂ ತನ್ನ ಯಾನ ಮುಂದುವರಿಸಿತು ಎಂದು ಸ್ಪಷ್ಟನೆ ನೀಡಿತು.

ಹವಾಮಾನ ವೈಪರೀತ್ಯ ಹೇಗೆ ಸಾಧ್ಯ?

ಈ ನಡುವೆ ಸಂಜೆ 5ರ ವೇಳೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಇಂಡಿಗೋ ವಿಮಾನವೂ ಸುರಕ್ಷಿತವಾಗಿಯೇ ಲ್ಯಾಂಡ್‌ ಆಗಿದೆ. ಅದಕ್ಕೆ ಇಲ್ಲದ ಹವಾಮಾನ ವೈಪರೀತ್ಯ, ಫ್ಲೈ- 91ಕ್ಕೆ ಹೇಗಾಯಿತು ಎಂಬ ಪ್ರಯಾಣಿಕರ ಪ್ರಶ್ನೆಗೆ ಉತ್ತರವಿಲ್ಲ.

ಇದನ್ನೂ ಓದಿ: Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ

ಹವಾಮಾನ ವೈಪರೀತ್ಯದಿಂದಾಗಿ ಫ್ಲೈ-91 ವಿಮಾನ ಭಾನುವಾರ ಸಂಜೆ 4.30ಕ್ಕೆ ಲ್ಯಾಂಡ್‌ ಆಗಿರಲಿಲ್ಲ. ಬೆಂಗಳೂರಿಗೆ ಕಳುಹಿಸಿ ಲ್ಯಾಂಡ್‌ ಮಾಡಿಸಲಾಯಿತು. ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಡಿಜಿಎಂ (ಎಂಜಿನಿಯರಿಂಗ್‌ ಸಿವಿಲ್‌) ಪಿ.ಎಂ. ಜಾಧವ ಹೇಳುತ್ತಾರೆ.

ಇದನ್ನೂ ಓದಿ: Dharwad: ಶೀಘ್ರದಲ್ಲಿಯೇ ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಬೆಂಗಳೂರಿಗೆ ಸ್ಥಳಾಂತರ?

Scroll to load tweet…