ಹುಬ್ಬಳ್ಳಿಯ KMCRI ಆಸ್ಪತ್ರೆಯಲ್ಲಿರುವ ರಾಜ್ಯದ ಮೊದಲ "ಜೀವಾಮೃತ ಬ್ಯಾಂಕ್‌" ಎರಡು ವರ್ಷಗಳಲ್ಲಿ 7147 ತಾಯಂದಿರಿಂದ 1,530 ಲೀಟರ್ ಎದೆಹಾಲು ಸಂಗ್ರಹಿಸಿದೆ. ಈ ಮಹತ್ವದ ಕಾರ್ಯದಿಂದಾಗಿ, ತಾಯಿಯ ಹಾಲಿನ ಕೊರತೆಯಿದ್ದ 2,599 ಶಿಶುಗಳಿಗೆ ಪೌಷ್ಟಿಕಾಂಶ ನೀಡಿ ಅವುಗಳ ಆರೋಗ್ಯ ರಕ್ಷಣೆಯಲ್ಲಿ ಯಶಸ್ವಿಯಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ರಾಜ್ಯದ ಮೊದಲ "ಜೀವಾಮೃತ ಬ್ಯಾಂಕ್‌"ಗೆ 2 ವರ್ಷದಲ್ಲೇ 7147 ಮಾತೆಯರು 1,530 ಲೀಟರ್‌ ಎದೆಹಾಲು ದಾನ ಮಾಡುವ ಮೂಲಕ 2,599 ಶಿಶುಗಳಿಗೆ ಮಾತೃಸ್ಪರ್ಶ ನೀಡಿದ್ದಾರೆ.

ಮಗುವಿಗೆ ರೋಗ ನಿರೋಧಕ ಶಕ್ತಿ ವೃದ್ಧಿ ಹಾಗೂ ಪೌಷ್ಟಿಕಾಂಶ ಪಡೆಯಲು ತಾಯಿಯ ಹಾಲು ಬಹುಮುಖ್ಯ ಪಾತ್ರವಹಿಸುತ್ತದೆ. ಮಗು ಜನನದ ಬಳಿಕ ಕೆಲ ಬಾಣಂತಿಯರು ಎದೆಹಾಲಿನ ಕೊರತೆ ಅನುಭವಿಸುವ ಪರಿಣಾಮ ಆ ಮಗು ಹಾಲು ದೊರೆಯದೆ ಅಪೌಷ್ಟಿಕತೆಯಿಂದ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇರುತ್ತದೆ. ಜತೆಗೆ ಸಾವು ಸಹ ಸಂಭವಿಸಿದ ಉದಾಹರಣೆಗಳಿವೆ.

ಇದನ್ನು ಮನಗಂಡು ಕೆಎಂಸಿಆರ್‌ಐನಲ್ಲಿ 2024ರ ಏ. 12ರಂದು "ಹುಬ್ಬಳ್ಳಿ ಮಿಡ್‌ಟೌನ್ ರೋಟರಿ ಕ್ಲಬ್ ಮತ್ತು ಕೊಪ್ಪೆಲ್ ರೋಟರಿ ಕ್ಲಬ್" (ಯುಎಸ್‌ಎ) ಸಹಯೋಗದೊಂದಿಗೆ ರಾಜ್ಯದ ಮೊದಲ "ಜೀಮಾಮೃತ" ಹಾಲು ಬ್ಯಾಂಕ್‌ ಸ್ಥಾಪಿಸಿದೆ. ಆಸ್ಪತ್ರೆಗೆ ಹೆರಿಗೆಗೆ ಬಂದ ತಾಯಂದಿರು ಮಗುವಿಗೆ ಜನ್ಮ ನೀಡಿದ ಬಳಿಕ ಅವರಲ್ಲಿರುವ ಹೆಚ್ಚುವರಿ ಹಾಲನ್ನು ದಾನದ ರೂಪದಲ್ಲಿ ನೀಡುತ್ತಿದ್ದಾರೆ. ಹೀಗೇ ಸಂಗ್ರಹವಾದ ಹಾಲನ್ನು ಜೀವಾಮೃತ ಬ್ಯಾಂಕಿನಲ್ಲಿ ಸಂಗ್ರಹಿಸಿ ಅವಶ್ಯವಿರುವ ಮಗುವಿಗೆ ನೀಡಲಾಗುತ್ತಿದೆ.

ನಿರ್ವಹಣೆ ಹೇಗೆ?

ಮೊದಲಿಗೆ ಎದೆಹಾಲು ನೀಡಲು ಹಿಂದೇಟು ಹಾಕುತ್ತಿದ್ದ ಮಹಿಳೆಯರು ಬಳಿಕ ತಾವೇ ಜೀವಾಮೃತ ಬ್ಯಾಂಕ್‌ಗೆ ಬಂದು ದಾನ ಮಾಡುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಿದ ಪರಿಣಾಮ ಎರಡು ವರ್ಷದಲೇ 7000ಕ್ಕೂ ಹೆಚ್ಚು ಮಾತೆಯರು ದಾನ ಮಾಡಿದ್ದಾರೆ. ಇದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗೆ ಸಂಗ್ರಹಗೊಂಡ ಹಾಲನ್ನು ಒಂದು ತಿಂಗಳ ವರೆಗೆ ಸಂಸ್ಕರಿಸಿ ಬೇಕಾದ ಮಗುವಿಗೆ ನೀಡಲು ಸುಸಜ್ಜಿತ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಏಕಕಾಲಕ್ಕೆ 1500 ಲೀಟರ್‌ ಹಾಲು ಸಂಗ್ರಹಿಸಿ ಇಡಬಹುದಾಗಿದೆ.

7147 ತಾಯಂದಿರಿಂದ ದಾನ

ಈ ಬ್ಯಾಂಕ್ ಮಕ್ಕಳ ಚಿಕಿತ್ಸಾ ವಿಭಾಗದ ಅಡಿ ಕಾರ್ಯನಿರ್ವಹಿಸುತ್ತಿದ್ದು, ನಾಲ್ವರು ದಾದಿಯರು, ಇಬ್ಬರು ಗ್ರೂಪ್ ಡಿ ಕೆಲಸಗಾರರು ಮತ್ತು ಒಬ್ಬ ನೋಡಲ್ ಅಧಿಕಾರಿ ಸೇವೆಯಲ್ಲಿ ಇದ್ದಾರೆ. 7147 ತಾಯಂದಿರು 1530 ಲೀಟರ್‌ ಹಾಲು ದಾನ ಮಾಡಿದ್ದಾರೆ. ಇದನ್ನು ಅವಧಿ ಪೂರ್ವ ಜನಿಸಿದ 1455 ಹಾಗೂ ಅಕಾಲಿಕವಾಗಿ ಜನಿಸಿದ 1444 ಸೇರಿ ಒಟ್ಟು 2599 ಶಿಶುಗಳಿಗೆ ನೀಡಲಾಗಿದೆ. ಈ ವರೆಗೆ 1,492 ಲೀಟರ್ ಹಾಲು ಸಂಸ್ಕರಿಸಲಾಗಿದ್ದು, 9325 ಮಿಲಿ ಲೀಟರ್‌ ಹಾಲು ಈಗ ವಿತರಿಸಲು ಲಭ್ಯವಿದೆ.

ಇದನ್ನೂ ಓದಿ: ಮಂಗಳೂರು-ಮಂತ್ರಾಲಯ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್; ಇತ್ತ ಮುಂಡಗೋಡ-ಪಣಜಿ ಬಸ್ ಸೇವೆ ಆರಂಭ

ವಾರದ ಹಿಂದೆ ಅವಧಿಪೂರ್ವ ಗಂಡು ಮಗುವಿಗೆ ಜನ್ಮ ನೀಡಿದ್ದು, ನಾನು ಎದೆಹಾಲು ನೀಡಲು ಸಾಧ್ಯವಾಗಲಿಲ್ಲ. ಜೀವಾಮೃತ ಬ್ಯಾಂಕಿನ ಹಾಲು ನೀಡಿದ ಪರಿಣಾಮ ಮಗು ಆರೋಗ್ಯಪೂರ್ಣವಾಗಿದೆ ಎಂದು ಬಾಣಂತಿ ವಂದನಾ ಹೇಳಿದರು.

ಕೆಎಂಸಿಆರ್‌ಐನಲ್ಲಿ 2024ರಿಂದ ಪ್ರಾರಂಭಿಸಿರುವ ಜೀವಾಮೃತ ಹಾಲಿನ ಬ್ಯಾಂಕಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಗುವಿಗೆ ತಾಯಿಯ ಹಾಲಿನ ಮಹತ್ವ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಹೇಳಿದರು.

ಇದನ್ನೂ ಓದಿ: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸುವ ಮಾರ್ಗ ಅಂತಿಮ

Scroll to load tweet…