ಬೆಂಗಳೂರು :  ನಮ್ಮ ಪೂರ್ವಜರು ಮಾಡಿರುವ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. 

ನಗರದ ಶ್ರೀ ಗಾಯತ್ರಿ ಮಾಂಗಲ್ಯ ಮಂದಿರಲ್ಲಿ ಭಾನುವಾರ ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟ, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದಿಂದ ಆಯೋಜಿಸಿದ್ದ ಹೊಯ್ಸಳ ಕರ್ನಾಟಕ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಇತಿಹಾಸದಲ್ಲಿ ಬ್ರಾಹ್ಮಣ ಸಮಾಜ ಎಲ್ಲಾ ಸಮುದಾಯಗಳೊಂದಿಗೆ ಸಂಬಂಧ ಕಾಪಾಡಿಕೊಂಡು ಬರುತ್ತಿದೆ. ಅಲ್ಲದೆ ಸನಾತನ ಧರ್ಮವನ್ನು ಅನುಸರಿಸಿಕೊಂಡು ಬರುತ್ತಿದ್ದು, ಸಮುದಾಯದ ಬಾಂಧವ್ಯವನ್ನು ಮೈಸೂರು ಸಂಸ್ಥಾನ ಹೀಗೆ ಮುಂದುವರಿಸಿಕೊಂಡು ಹೋಗುತ್ತದೆ ಎಂದರು. 

ಧಾರ್ಮಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬ್ರಾಹ್ಮಣ ಸಮುದಾಯ ತನ್ನದೆ ಆದ ಕೊಡುಗೆಗಳನ್ನು ನೀಡಿದೆ. ಮೈಸೂರು ಸಂಸ್ಥಾನ ಶೃಂಗೇರಿ ಪೀಠದಲ್ಲಿನ ರಾಜಗುರುಗಳ ಮಾರ್ಗ ದರ್ಶನದಿಂದ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿ ಕೊಂಡಿದೆ. ಮುಂದೆಯೂ ಮೈಸೂರು ಸಂಸ್ಥಾನ ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸಲಿದೆ ಎಂದರು. ಮಾಜಿ ಶಾಸಕ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ಬ್ರಾಹ್ಮಣ ಸಮುದಾಯ ಪ್ರಕೃತಿ ಆರಾಧನೆ ಹಾಗೂ ಸಂಸ್ಕೃತಿ ಪುರಸ್ಕಾರ ಮಾಡುತ್ತಾ ವಿಕೃತಿಯನ್ನು ತಿರಸ್ಕರಿಸಿದೆ ಎಂದರು. 

"

ಸಮಾವೇಶದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾಜಿ ಸಭಾಪತಿ ಡಿ.ಎಚ್.ಶಂಕರ್‌ಮೂರ್ತಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸುವ ಹೊಣೆ ಯುವಜನತೆಯ ಮೇಲಿರುವುದರಿಂದ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಅವರ ಮನಸ್ಥಿತಿ ಉತ್ತಮ ಪಡಿಸಬೇಕಿದೆ ಎಂದರು. 

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಬ್ರಾಹ್ಮಣ ಸಮಾಜವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬ್ರಾಹ್ಮಣ ಸಮಾಜ ತಮ್ಮದೇ ಕೊಡುಗೆ ನೀಡಿದೆ ಎಂದರು. ಬ್ರಾಹ್ಮಣ ಸಮುದಾಯದಲ್ಲಿ ಇನ್ನೂ ಸಹ ಅನೇಕ ಜನರು ಆರ್ಥಿಕವಾಗಿ ಸಬಲರಾಗಿಲ್ಲ. ಹಾಗಾಗಿ ಅವರನ್ನು ಸಹ ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಬ್ರಾಹ್ಮಣ ಸಮುದಾಯ ಮುಂದಾ ಗುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. 

ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ ಮಾತನಾಡಿ, ಇಂದು ಸಮಾಜದ ಪ್ರಮುಖ ಅಂಗಗಳಲ್ಲಿ ಸಾಮಾಜಿಕ ಬದ್ಧತೆ, ನೈತಿಕತೆ ಕುಸಿದಿದೆ. ಹಣದ ವ್ಯಾಮೋಹ ಹೆಚ್ಚಾಗಿ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಈ ಸಂದರ್ಭ ದಲ್ಲಿ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು. ಪ್ರತಿಯೊಬ್ಬರೂ ತಮ್ಮಲ್ಲಿ ಸದಾಚಾರ ಅಳವಡಿಸಿಕೊಂಡಾಗ ರಾಷ್ಟ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ರಾಷ್ಟ್ರದ ಹಿತಕ್ಕಾಗಿ ಸಂಕಲ್ಪಮಾಡಿಕೊಂಡು ಸದಾ ಚಾರವನ್ನು ನಮ್ಮ ದೇಹದ ಅಂಗಾಂಗಳಾಗಿ ಅಳವಡಿಸಿಕೊಂಡು ದೇಶ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು. 50 ನಿವೃತ್ತ ಯೋಧರನ್ನು ಗೌರವಿಸಲಾಯಿತು. 

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಎಂ. ವೇಣುಗೋಪಾಲ್, ಹೊಯ್ಸಳ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಎನ್. ವೆಂಕಟೇಶಮೂರ್ತಿ, ಸಂಸ್ಕೃತ ವಿದ್ವಾನ್ ಜಗದೀಶ್ ಶರ್ಮಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.