ಮುಂದಿನ ಬಾರಿಯೂ ನಾನೇ ಎಂಎಲ್‌ಎ ಆಗೋದು, ಯಲಬುರ್ಗಾ ಕ್ಷೇತ್ರದ ಜನರ ಶ್ರೀರಕ್ಷೆ ಇದೆ, ಯಾವುದೇ ಅನುಮಾನ ಬೇಡ ಎಂದ ಸಚಿವ ಹಾಲಪ್ಪ ಆಚಾರ್‌

ಕುಕನೂರು(ಆ.28): ಗ್ರಾಮದಲ್ಲಿರುವ ಬಿಪಿಎಲ್‌ ಕಾರ್ಡ್‌ ಹೊಂದಿರುವಂತಹ ಪ್ರತಿ ಕುಟುಂಬಕ್ಕೆ ಮನೆಗಳನ್ನು ಮಂಜೂರು ಮಾಡಿಸುತ್ತೇನೆ. ಅಂತಹವರ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದ್ದಾರೆ. ತಾಲೂಕಿನ ತಾಲೂಕಿನ ಶಿರೂರು ಗ್ರಾಮದಲ್ಲಿ ಶನಿವಾರ ಹಿರೇಹಳ್ಳ ಯೋಜನೆಯ ಪುನರ್ನಿರ್ಮಾಣ ಅಡಿಯಲ್ಲಿ ಪುನರ್ವಸತಿ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ಗ್ರಂಥಾಲಯ ಕಟ್ಟಡ, ಶೌಚಾಲಯ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ಕಾಂಪೌಂಡ್‌ ಗೋಡೆ ನಿರ್ಮಾಣ, ನೀರಿನ ಪೈಪ್‌ಲೈನ್‌ ಅಳವಡಿಕೆ ಹಾಗೂ ಪಾರ್ಕ್ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಯಲಬುರ್ಗಾ ಮತ್ತು ಕುಕನೂರು ತಾಲೂಕಿಗೆ 4,500 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. ಗ್ರಾಮದಲ್ಲಿ .16.65 ಕೋಟಿ ಕಾಮಗಾರಿಯನ್ನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.

20ರಿಂದ 25 ವರ್ಷಗಳಿಂದ ಹಿರೇಹಳ್ಳ ಮುಳುಗಡೆ ಹೊಂದಿರುವ ಪ್ರದೇಶವನ್ನು ಯಾರೂ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ವಿಧಾನ ಪರಿಷತ್‌ ಸದಸ್ಯನಿದ್ದಾಗ ಅಂದು ಮುಖ್ಯಮಂತ್ರಿಯನ್ನು ಕರೆತಂದು .56 ಕೋಟಿ ಪರಿಹಾರವನ್ನು ಮಂಜೂರು ಮಾಡಿಸಿದ್ದೇನೆ. 30 ವರ್ಷಗಳಿಂದ ಆಡಳಿತ ಮಾಡಿದ ನಾಯಕರಿಗೆ ಈ ಗ್ರಾಮವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಮುಳುಗಡೆ ಹೊಂದಿರುವ ಶಿರೂರು, ವಿರಾಪುರ, ಮುತ್ತಾಳ, ಮುದ್ಲಾಪುರ ಗ್ರಾಮಗಳಿಗೆ ಸರ್ಕಾರದಿಂದ ನಾನು ಪರಿಹಾರ ವಿತರಿಸಿದ್ದೇನೆ ಎಂದು ಆಚಾರ್‌ ವಿವರಿಸಿದರು.

ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್‌ ಇಲ್ಲ: ಸಚಿವ ಹಾಲಪ್ಪ ಆಚಾರ್‌

ತಾಲೂಕಿನಲ್ಲಿ ಉದ್ಯೋಗವಿಲ್ಲದೆ ಗೋವಾ, ಬೆಂಗಳೂರು, ಮಂಗಳೂರು ಕಡೆಗಳಿಗೆ ಗುಳೆ ಹೋಗುತ್ತಾರೆ. ಕ್ಷೇತ್ರದಲ್ಲಿ ನೀರಾವರಿ ಮಾಡಿದ್ದರೆ ಯುವಕರಿಗೆ, ರೈತರಿಗೆ, ಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಭಾರತ ದೇಶ ಆರ್ಥಿಕವಾಗಿ ಶಕ್ತಿಶಾಲಿಯಾಗಿದೆ ಎಂದು ವಿದೇಶಿಗರು ಹೇಳುತ್ತಾರೆ. ದೇಶದ 10 ಕೋಟಿ ಕುಟುಂಬಕ್ಕೆ ಉಜ್ವಲ ಗ್ಯಾಸ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳು ಉನ್ನತಮಟ್ಟದ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಸಾವಿರ ಕೋಟಿ ರು. ಮಂಜೂರು ಮಾಡಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ ಬಾಂಡ್‌ ವಿತರಿಸಿ ಹೆಣ್ಣುಮಕ್ಕಳಿಗೆ ಆಶ್ರಯ ಕಲ್ಪಿಸಿದ್ದಾರೆ ಎಂದರು.

ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ, ತಾಪಂ ಇಒ ರಾಮಣ್ಣ ದೊಡ್ಡಮನಿ, ಶಿರೂರು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಮಾಲಿಪಾಟೀಲ್‌, ಉಪಾಧ್ಯಕ್ಷೆ ದೇವಕ್ಕ ವಾಲ್ಮೀಕಿ, ಹಿರೇಬೀಡಿನಾಳ ಗ್ರಾಪಂ ಅಧ್ಯಕ್ಷ ರೇವಣಸಿದ್ದನಗೌಡ, ಮುಖಂಡರಾದ ಬಸಲಿಂಗಪ್ಪ ಭೂತೆ, ಸಿ.ಎಚ್‌. ಪಾಟೀಲ್‌, ಕಳಕಪ್ಪ ಕಂಬಳಿ, ಬಸವನಗೌಡ ತೊಂಡಿಹಾಳ, ಪ್ರಭುಗೌಡ ಪಾಟೀಲ್‌, ನಿವೃತ್ತ ಎಸ್‌ಪಿ ಯು. ಶರಣಪ್ಪ, ಈಶಪ್ಪ ದೊಡ್ಡಮನಿ, ಲಿಂಗನಗೌಡ ಇನಾಮತಿ, ದತ್ತನಗೌಡ ಮಾಲೀಪಾಟೀಲ್‌, ಪ್ರಭುರಾಜ ಕಲಬುರ್ಗಿ ಇತರರಿದ್ದರು.

ಮುಂದಿನ ಸಲ ನಾನೇ ಎಂಎಲ್‌ಎ

ಮುಂದಿನ ಬಾರಿಯೂ ನಾನೇ ಎಂಎಲ್‌ಎ ಆಗೋದು, ಯಲಬುರ್ಗಾ ಕ್ಷೇತ್ರದ ಜನರ ಶ್ರೀರಕ್ಷೆ ಇದೆ, ಯಾವುದೇ ಅನುಮಾನ ಬೇಡ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು. ಸಚಿವ ಆಚಾರ್‌ ಬಳಿ ಶಿರೂರು ಗ್ರಾಮದ ಮಹಿಳೆಯೊಬ್ಬರು ಮನೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ವೇದಿಕೆ ಬಳಿ ಬಂದು ಕೋರಿದರು. ಇನ್ನು 6 ತಿಂಗಳಲ್ಲಿ ನಿಮ್ಮ ಅಧಿಕಾರ ಮುಗಿದು ಹೋಗುತ್ತದೆ. ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಹೇಳುತ್ತಿದ್ದಂತೆಯೇ, ಮುಂದಿನ ಸಲ ನಾನೇ ಬರೋದು, ಮುಂದಿನ ಸಲ ನಾನೇ ಎಂಎಲ್‌ಎ ಎಂದು ಆತ್ಮವಿಶ್ವಾಸದಿಂದ ಹೇಳಿದರು.