ಜಗದೀಶ ವಿರಕ್ತಮಠ 

ಬೆಳಗಾವಿ(ಡಿ.26): ಕಳೆದ ಒಂದು ತಿಂಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದ ಸಾರ್ವಜನಿಕರು ಅಷ್ಟೇ ಅಲ್ಲ, ಹೊಟೇಲ್‌ ಉದ್ಯಮಗಳು ಕೂಡ ನಲುಗಿ ಹೋಗಿವೆ. ಇದರಿಂದ ಈರುಳ್ಳಿಯಲ್ಲಿ ತಯಾರಿಸುವ ಪದಾರ್ಥಗಳನ್ನು ಮಾಡಲು ಹಿಂಜರಿಯುತ್ತಿರುವುದರಿಂದ ಹೋಟೆಲ್‌ ಉದ್ಯಮಕ್ಕೆ ಬೆಲೆ ಏರಿಕೆ ಬಿಸಿ ತಟ್ಟುತ್ತಲೇ ಇದೆ.

ಕಳೆದ ಒಂದು ತಿಂಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈರುಳ್ಳಿ ದರದಿಂದಾಗಿ ಹೋಟೆಲ್‌ನಲ್ಲಿ ಕಾಂದಾ (ಈರುಳ್ಳಿ) ಭಜ್ಜಿ, ಉತ್ತಪ್ಪ, ಎಗ್ ಬುರ್ಜಿ ಬಡಂಗ, ಪಾವ ಭಾಜಿ ಮಾಡಲು ಹಿಂಜರಿಯುತ್ತಿದ್ದಾರೆ. ಇನ್ನು ಹೆಚ್ಚಿನ ದರ ನೀಡಲು ಗ್ರಾಹಕರ ಒಪ್ಪಿದಲ್ಲಿ ಮಾತ್ರ ಈರುಳ್ಳಿಯಿಂದ ತಯಾರಿಸುವ ಆಹಾರ ಪದಾರ್ಥಗಳನ್ನು ತಯಾರಿಸಿ ಕೊಡಲಾಗುತ್ತಿದೆ. ಊಟದಲ್ಲಿ ಈರುಳ್ಳಿ ಅತ್ಯವಶ್ಯಕವಾದರೂ ಕೆಲವೇ ಕೆಲವು ಕಾಂದಾ ತುಣುಕುಗಳನ್ನು ನೀಡುತ್ತಿದ್ದಾರೆ. ಗ್ರಾಹಕರು ಹೆಚ್ಚಾಗಿ ಈರುಳ್ಳಿ ಕೇಳಿದಲ್ಲಿ ಅದಕ್ಕೂ 10 ರಿಂದ  15 ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಈರುಳ್ಳಿ ಬೆಲೆ ಏರಿಕೆಯಿಂದ ಹೋಟೆಲ್‌ ಉದ್ಯಮ ಅಷ್ಟೇ ಅಲ್ಲ ಬೆಲೆ ಏರಿಕೆ ಅಥವಾ ತಮಗೆ ಬೇಕಾದ ಆಹಾರವನ್ನು ತಯಾರಿಸಲು ಮುಂದಾಗದಿರುವುದರಿಂದ ಗ್ರಾಹಕರಿಗೂ ಬಿಸಿ ಮುಟ್ಟಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಕೆಲವು ದಿನಗಳ ಹಿಂದೆ ಪ್ರತಿ ಕ್ವಿಂಟಲ್‌ ಈರುಳ್ಳಿಗೆ ಗುಣಮಟ್ಟದ ಆಧಾರದಲ್ಲಿ 8500 ರಿಂದ . 15 ಸಾವಿರ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ 130 ರಿಂದ 170 ಗಡಿದಾಟಿತ್ತು. ಇದರಿಂದ ಕಂಗೆಟ್ಟಿದ್ದ ಹೋಟೆಲ್‌ ಮಾಲೀಕರು ದಿನನಿತ್ಯ ಅಡುಗೆ ಈರುಳ್ಳಿ ಅತ್ಯವಶ್ಯಕವಾಗಿದ್ದರಿಂದ ಬೆಲೆ ಹೆಚ್ಚಾದರೂ ಅನಿವಾರ್ಯತೆಯಿಂದ ಖರೀದಿಸಿಕೊಂಡು ಬರುತ್ತಿದ್ದರು. ಒಂದೆರಡು ದಿನಗಳಲ್ಲಿ ಈರುಳ್ಳಿ ದರದಲ್ಲಿ ಇಳಿಕೆ ಆಗಬಹುದು ಎಂಬ ಲೆಕ್ಕಾಚಾರ ಹೊಂದಿದ್ದ ಗ್ರಾಹಕರಿಗೂ ಹಾಗೂ ಹೋಟೆಲ್‌ ಉದ್ಯಮಿಗಳು ಹೆಚ್ಚುತ್ತಿರುವ ದರದಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ.

ಅಲ್ಲದೇ ಕೆಲವರು ಗ್ರಾಹರಿಂದಲೇ ಹೆಚ್ಚಿಗೆ ಹಣ ಪಡೆದು ಅವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ತಯಾರಿಸಿಕೊಡುತ್ತಿದ್ದಾರೆ. ಇನ್ನೂ ಕೆಲವು ಗ್ರಾಹಕರೂ ಹೋಟೆಲ್‌ಗೆ ಬರದಿದ್ದರೂ ಪರವಾಗಿಲ್ಲ ಈರುಳ್ಳಿಯಿಂದ ತಯಾರಿಸುವ ಕಾಂದಾ ಭಜ್ಜಿ, ಉತ್ತಪ್ಪ, ಎಗ್ ಬುರ್ಜಿ, ಪಾವಭಜಿ ತಯಾರಿಸುವ ಗೋಜಿಗೆ ಹೋಗುತ್ತಿಲ್ಲ. ನೇರಾ ನೇರವಾಗಿ ಈರುಳ್ಳಿ ದರ ಹೆಚ್ಚಾಗಿದ್ದರಿಂದ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ. ಇನ್ನು ಸಣ್ಣ ಸಣ್ಣ ಹೋಟೆಲ್‌ ಹಾಗೂ ಗೂಡಂಗಡಿದಾರರು ಭಜ್ಜಿಯಲ್ಲಿ ಈರುಳ್ಳಿ ಬದಲಾಗಿ ಎಲೆಕೋಸು (ಕ್ಯಾಬಿಜ್‌) ಹಾಕಿ ಕಾಂದಾ ಭಜ್ಜಿ ಮಾಡುತ್ತಿದ್ದಾರೆ. ಅಲ್ಲದೇ ಬಡಂಗನಲ್ಲಿಯೂ ಈರುಳ್ಳಿಗಿಂತ ಹೆಚ್ಚಾಗಿ ಇದೆ ಎಲೆಕೋಸು (ಕ್ಯಾಬಿಜ್‌) ಮಿಶ್ರಣ ಮಾಡಿ ಕೊಡುತ್ತಿದ್ದಾರೆ.

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರ ನಡೆದ ಈರುಳ್ಳಿ ಬೆಲೆ ನಿಗದಿ ಸಮಯದಲ್ಲಿ ನೆರೆಯ ಮಹಾರಾಷ್ಟ್ರದಿಂದ 15 ಹಾಗೂ ಬೆಳಗಾವಿ ಹಾಗೂ ನೆರೆಯ ಜಿಲ್ಲೆಗಳಿಂದ 10 ಲಾರಿಗಳು ಸೇರಿದಂತೆ ಒಟ್ಟು ಕೇವಲ 25 ಲಾರಿ ಈರುಳ್ಳಿ ಮಾತ್ರ ಮಾರುಕಟ್ಟೆಗೆ ಈರುಳ್ಳಿ ಬಂದಿತ್ತು. ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 8500ರಿಂದ 9000, ಮಧ್ಯಮ ಗಾತ್ರ ಈರುಳ್ಳಿ 7500 ಹಾಗೂ ಸಾಧಾರಣ ಈರುಳ್ಳಿ 3000 ರಿಂದ 6000ವರೆಗೆ ಮಾರಾಟವಾಗಿದೆ. ಹಿಂದೆ ಕನಿಷ್ಠ 60 ರಿಂದ 70 ಲಾರಿ ಈರುಳ್ಳಿ ಆಗಮಿಸುತ್ತಿತ್ತು. ಆದರೆ ಬುಧವಾರ 25 ಲಾರಿ ಈರುಳ್ಳಿ ಆಗಮಿಸಿರುವುದು ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಈರುಳ್ಳಿ ದರ ಹೆಚ್ಚಾಗಿದ್ದರಿಂದ ಎಗ್‌ಬುರ್ಜಿ, ಆಮ್ಲೆಟ್‌ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಮಾಡುತ್ತಿಲ್ಲ. ಅಲ್ಲದೇ ಊಟದಲ್ಲಿ ಈ ಮೊದಲು ಗ್ರಾಹಕರಿಗೆಬೇಕಾದಷ್ಟುಕೊಡುತ್ತಿದ್ದೆವು. ಆದರೆ ದರ ಹೆಚ್ಚಾಗಿದ್ದರಿಂದ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಕೊಡಲಾಗುತ್ತಿದೆ. ಈರುಳ್ಳಿ ದರ ಹೆಚ್ಚಾಗಿದ್ದರಿಂದ ಹೋಟೆಲ್‌ ಉದ್ಯಮ ನಲುಗಿದೆ ಎಂದು ಹೊಟೇಲ್‌ ಉದ್ಯಮಿಯೊಬ್ಬರು ಹೇಳಿದ್ದಾರೆ.