ಬೆಳಗಾವಿ ಜಿಲ್ಲೆಯ ಸಂಕೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟಿಪ್ಪರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯ. ಗಾಯಾಳುಗಳನ್ನು ಸಂಕೇಶ್ವರ ಆಸ್ಪತ್ರೆಗೆ ದಾಖಲು.

ಚಿಕ್ಕೋಡಿ (ಅ.9): ಟಿಪ್ಪರ್ ಹಿಂಬದಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ಮೃತ, 12ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ.

ಬಸ್ ಚಾಲಕ ಸ್ಥಳದಲ್ಲೇ ದುರ್ಮರಣ

ಬಸ್ ಚಾಲಕ ಸಂಗಪ್ಪ ತಳವಾರ ಸ್ಥಳದಲ್ಲೇ ಸಾವು, ಮೃತ ಬಸ್ ಚಾಲಕ ಗದಗ ಜಿಲ್ಲೆಯ ರೋಣ ತಾಲೂಕಿನ ಸವದಿ ನಿವಾಸಿ ಎಂದು ಮಾಹಿತಿ ಲಭಿಸಿದೆ. ಈ ದುರಂತದಲ್ಲಿ ಹನ್ನೆರಡು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಂಕೇಶ್ವರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಂಗಾವತಿ ಕೊಲ್ಲಾಪುರ ನಡುವೆ ಸಂಚರಿಸುವ ಬಸ್ ಭೀಕರ ಅಪಘಾತ:

ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಕೊಲ್ಲಾಪುರಕ್ಕೆ ಸಂಚರಿಸುತ್ತಿದ್ದ ಈಶಾನ್ಯ ಸಾರಿಗೆ ಬಸ್. ಅಪಘಾತದ ವೇಳೆ ಬಸ್‌ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದಾರೆಂಬ ಮಾಹಿತಿ ಸಿಕ್ಕಿಲ್ಲ. ಆದರೆ ಟಿಪ್ಪರ್ ಹಿಂಬದಿ ಗುದ್ದಿದ ರಭಸಕ್ಕೆ ಚಾಲಕ ಸಂಗಪ್ಪ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಬಸ್‌ನಲ್ಲಿ ನಿದ್ದೆ ಮಂಪರಿನಲ್ಲಿದ್ದ ಪ್ರಯಾಣಿಕರು ದುರಂತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣ ಏನೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.