ಬೆಂಗಳೂರಿನ ಯುವತಿಯೊಬ್ಬಳು ಬಲವಂತದ ಮದುವೆ ವಿರೋಧಿಸಿ, ತಂದೆಯಿಂದ ಮರ್ಯಾದೆ ಹತ್ಯೆಯಾಗುವ ಭೀತಿಯಿಂದ ಹೈಕೋರ್ಟ್‌ಗೆ ಮೊರೆ ಹೋಗಿದ್ದಾಳೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಯುವತಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ವೈಟ್‌ಫೀಲ್ಡ್ ಪೊಲೀಸರಿಗೆ ನಿರ್ದೇಶನ ನೀಡಿದೆ.

ಬೆಂಗಳೂರು: ಮರ್ಯಾದೆ ಹತ್ಯೆಯ ಭೀತಿಯಿಂದ ಜೀವ ರಕ್ಷಣೆ ಕೋರಿ ಯುವತಿಯೊಬ್ಬಳು ಹೈಕೋರ್ಟ್ ಮೊರೆ ಹೋಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಕಾಜಲ್ ರಾಜಪುರೋಹಿತ್ ಅವರು ತಮ್ಮ ತಂದೆಯ ವಿರುದ್ಧವೇ ರಿಟ್ ಅರ್ಜಿ ಸಲ್ಲಿಸಿ, ಜೀವ ಭದ್ರತೆ ಒದಗಿಸುವಂತೆ ನ್ಯಾಯಾಲಯವನ್ನು ವಿನಂತಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪ್ಪನ ವಿರುದ್ಧ ಹೋಗಲು ಕಾರಣವಿದು

ಅರ್ಜಿದಾರೆ ಕಾಜಲ್ ರಾಜಪುರೋಹಿತ್ ದೂರಿನಲ್ಲಿ ಉಲ್ಲೇಖಿಸಿದಂತೆ , ತಮ್ಮ ಒಪ್ಪಿಗೆಗೆ ವಿರುದ್ಧವಾಗಿ ತಂದೆ ಅಶೋಕ್ ರಾಜಪುರೋಹಿತ್ ಅವರು ಬೇರೆಯವರ ಜೊತೆಗೆ ವಿವಾಹ ನಿಶ್ಚಯ ಮಾಡಿದ್ದು, ಈ ಸಂಬಂಧ ಯಾವುದೇ ಸಲಹೆ ಅಥವಾ ಅನುಮತಿ ಪಡೆಯದೇ ಮುಂದಿನ ಮದುವೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಯ ಅಭಿಪ್ರಾಯವನ್ನು ಪರಿಗಣಿಸದೇ, ರಾಜಸ್ಥಾನ ಮೂಲದ ಡಾ. ಯಶ್ ಪಾಲ್ ಅವರೊಂದಿಗೆ ವಿವಾಹ ಮಾಡಲು ಒತ್ತಾಯಿಸಲಾಗುತ್ತಿದೆ ಎಂಬುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಪರಿಸ್ಥಿತಿಯಲ್ಲಿ ತಮ್ಮ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಕಾಜಲ್ ಆತಂಕ ವ್ಯಕ್ತಪಡಿಸಿದ್ದು, ಮರ್ಯಾದೆ ಹತ್ಯೆಯ ಭೀತಿ ಹಿನ್ನೆಲೆಯಲ್ಲಿ ತಕ್ಷಣವೇ ರಕ್ಷಣೆ ಒದಗಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ವೈಟ್‌ಫೀಲ್ಡ್ ಪೊಲೀಸರಿಗೆ ಮಹತ್ವದ ನಿರ್ದೇಶನ

ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ವಿಷಯದ ಗಂಭೀರತೆಯನ್ನು ಪರಿಗಣಿಸಿ, ವೈಟ್‌ಫೀಲ್ಡ್ ಪೊಲೀಸರಿಗೆ ಮಹತ್ವದ ನಿರ್ದೇಶನ ನೀಡಿದೆ. ಕಾಜಲ್ ರಾಜಪುರೋಹಿತ್ ಅವರಿಗೆ ಯಾವುದೇ ರೀತಿಯ ಅಪಾಯ ಉಂಟಾಗದಂತೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಇದೇ ವೇಳೆ, ತಂದೆಯಿಂದಲೇ ಜೀವಭಯವಿದೆ ಎಂಬ ಆರೋಪದ ಹಿನ್ನೆಲೆ ಪ್ರಕರಣವು ಹೆಚ್ಚಿನ ಗಮನ ಸೆಳೆದಿದ್ದು, ಯುವತಿಯ ಸ್ವಾತಂತ್ರ್ಯ ಹಾಗೂ ಭದ್ರತೆ ಕುರಿತಂತೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಹೈಕೋರ್ಟ್‌ನ ಈ ನಿರ್ದೇಶನದಿಂದ ಕಾಜಲ್ ಅವರಿಗೆ ತಾತ್ಕಾಲಿಕ ರಕ್ಷಣೆಯ ಭರವಸೆ ದೊರೆತಿದೆ.