Asianet Suvarna News Asianet Suvarna News

ಖಾಕಿ ಅಂಗಿ ಧರಿಸಿ ಬಸ್ ಬಾರದ ಗ್ರಾಮಕ್ಕೆ ಬಸ್ ಓಡಿಸ್ಕೊಂಡು ಬಂದ ಹೊನ್ನಾಳಿ ಶಾಸಕ!

ಸ್ವತಹ ಬಸ್‌ ಚಾಲನೆ ಮಾಡಿದ ಅಚ್ಚರಿ ಮೂಡಿಸಿದ ಶಾಸಕ ರೇಣು!| ಬಸ್‌ನ್ನೇ ಕಾಣದ ಗ್ರಾಮಕ್ಕೆ ಬಸ್‌ ಸೌಕರ್ಯ ಕಲ್ಪಿಸಿದ ಸಂಭ್ರಮ| ಸೋಷಿಯಲ್‌ ಮೀಡಿಯಾದಲ್ಲಿ ಶಾಸಕರ ಬಗ್ಗೆ ಕಾಂಗ್ರೆಸ್‌ ಟೀಕೆ

Honnali BJP MLA MP Renukacharya Drives Govt Bus To Benakanahalli
Author
Bangalore, First Published Jan 6, 2020, 8:26 AM IST

ದಾವಣಗೆರೆ:[ಜ.06]: ಸದಾ ಒಂದಿಲ್ಲೊಂದು ಸುದ್ದಿಯಲ್ಲೇ ಇರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಬಸ್‌ ಸೌಕರ್ಯವನ್ನೇ ಕಾಣದಿದ್ದ ಗ್ರಾಮಕ್ಕೆ ಸರ್ಕಾರಿ ಬಸ್‌ ಚಾಲನೆ ಮಾಡಿಕೊಂಡು ಹೋಗಿ ಗ್ರಾಮಸ್ಥರ ಮನ ಗೆದ್ದ ಘಟನೆ ಹೊನ್ನಾಳಿ ತಾಲೂಕಿನಲ್ಲಿ ಭಾನುವಾರ ನಡೆದಿದೆ.

ಹೊನ್ನಾಳಿ ಪಟ್ಟಣದಿಂದ ಬೆನಕನಹಳ್ಳಿಗೆ ಈವರೆಗೂ ಬಸ್‌ ಸೌಕರ್ಯ ಇರಲಿಲ್ಲ. ತಮ್ಮ ಊರಿಗೆ ಬಸ್‌ ಸೌಕರ್ಯ ಕಲ್ಪಿಸಬೇಕೆಂಬ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ರೇಣುಕಾಚಾರ್ಯ ಅಲ್ಲಿಗೆ ಬಸ್‌ ವ್ಯವಸ್ಥೆ ಮಾಡಿದರಲ್ಲದೇ, ತಾವೇ ಖುದ್ದಾಗಿ ಬಸ್‌ನ್ನು ಗ್ರಾಮಕ್ಕೆ ಚಾಲನೆ ಮಾಡಿಕೊಂಡು ಹೋಗಿದ್ದು ತುಂಬಾ ವಿಶೇಷವಾಗಿತ್ತು.

ರಾಜ್ಯದಲ್ಲಿ ಡಿಸಿಎಂ ಬೇಡ : ರೇಣುಕಾಚಾರ್ಯ ಹೊಸ ಸ್ವರ!

ರಾಜ್ಯ ರಸ್ತೆ ಸಾರಿಗೆ ಬಸ್‌ ಚಾಲಕರು ಧರಿಸುವ ಖಾಕಿ ಅಂಗಿಯನ್ನು ತಾವು ಧರಿಸಿದ್ದ ಅಂಗಿಯ ಮೇಲೆ ಹಾಕಿಕೊಂಡ ಶಾಸಕ ರೇಣುಕಾಚಾರ್ಯ ಸೀದಾ ಬಸ್‌ ಚಾಲಕನ ಸೀಟನ್ನು ಏರಿದ್ದಾರೆ. ಅಲ್ಲದೇ ಸ್ವತಃ ತಾವೇ ಬಸ್‌ ಚಾಲನೆ ಮಾಡಿಕೊಂಡು ಬೆನಕನಹಳ್ಳಿವರೆಗೂ ಹೋಗಿದ್ದಾರೆ. ತಮ್ಮ ಊರಿಗೆ ಬಸ್‌ ಬಂದ ಖುಷಿಯಲ್ಲಿ ಗ್ರಾಮಸ್ಥರು ಸಂಭ್ರಮಿಸಿದರೆ, ತಮ್ಮ ಶಾಸಕರಿಗೆ ಬಸ್‌ ಚಾಲನೆ ಮಾಡಲು ಬೆಂಬಲಿಸಲು ಹುರುಪು ತುಂಬಿದರು.

ಅತ್ತ ಶಾಸಕರು ತಮ್ಮಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲ. ಆದರೂ ಚಾಲನೆ ಮಾಡಿಕೊಂಡು ಹೋದೆ ಎಂಬುದಾಗಿ ಹೇಳಿದ್ದಾರೆಂಬ ವಿಚಾರವನ್ನೇ ಮುಂದಿಟ್ಟುಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಕಾಂಗ್ರೆಸ್ಸಿಗರಂತೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಾಲೆಳೆಯುವುದನ್ನು ಬಿಟ್ಟಿಲ್ಲ.

ಅಬಕಾರಿ ಪೂರ್ಣ ಸ್ವಾತಂತ್ರ್ಯ ಬಗ್ಗೆ ಮಾತಾಡಿದ್ರೆ ಕಾಂಟ್ರವರ್ಸಿ ಆಗುತ್ತೆ ಎಂದ ಸಚಿವ

ನನಗೆ ಆತ್ಮವಿಶ್ವಾವಿದೆ. ಹಾಗಾಗಿ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದಿದ್ದರೂ ಬಸ್‌ ಓಡಿಸಿದೆ ಎಂಬುದಾಗಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆಂಬುದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ಯುವ ಮುಖಂಡ ಕೆ.ಎಲ್‌.ಹರೀಶ ಬಸಾಪುರ ‘ಇನ್ಮೇಲೆ ಸಾರ್ವಜನಿಕರು ಸಹ ಪೊಲೀಸರು ಡ್ರೈವಿಂಗ್‌ ಲೈಸೆನ್ಸ್‌ ಕೇಳಿದರೆ, ನಮಗೆ ಆತ್ಮವಿಶ್ವಾಸವಿದೆ. ಡ್ರೈವಿಂಗ್‌ ಲೈಸೆನ್ಸ್‌ ಅವಶ್ಯಕತೆ ಇಲ್ಲವೆಂದು ಹೇಳಬಹುದಲ್ವಾ ಎಂದು ರೇಣುಕಾಚಾರ್ಯ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ.

ದೀಪಾವಳಿ ಹಬ್ಬದ ವೇಳೆ ಹೋರಿ ಬೆದರಿಸಲು ಹೋಗಿದ್ದ ವೇಳೆ ಎರಡು ಸಲ ಹೋರಿ ಗುದ್ದುವುದು, ಹಾಯುವುದು ಸ್ವಲ್ಪದರಲ್ಲೇ ತಪ್ಪಿತ್ತು. ಈಗ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದಿದ್ದರೂ ಅದರಲ್ಲೂ ಸರ್ಕಾರಿ ಬಸ್‌ನ್ನು ಹೀಗೆ ಶಾಸಕರು ಚಾಲನೆ ಮಾಡಿದ್ದು ಕಾಂಗ್ರೆಸ್‌ ಮುಖಂಡರ ಬಾಯಲ್ಲಿ ಆಡಿಕೊಳ್ಳಲು ಅನುವು ಮಾಡಿಕೊಟ್ಟಂತಾಗಿದೆ.

ಹೋರಿ ಜೊತೆ ಎಚ್ಚರ: ರೇಣುಗೆ ಸಿಎಂ ಯಡಿಯೂರಪ್ಪ ಸೂಚನೆ!

ಭಾರೀ ವಾಹನ ಚಲಾಯಿಸಲು ಪರವಾನಿಗೆ

ಈ ಹಿಂದೆಯೂ ಹೊನ್ನಾಳಿ ಶಾಸಕ ಕೆಎಸ್‌ಆರ್‌ಟಿಸಿ ಬಸ್ ಓಡಿಸಿ ಸದ್ದು ಮಾಡಿದ್ದರು. ಹೀಗಿರುವಾಗ ಶಾಸಕರೊಬ್ಬರು ಬೇಕಾಬಿಟ್ಟಿ ಬಸ್ ಓಡಿಸಲು ಹೇಗೆ ಸಾಧ್ಯ? ಪರವಾನಿಗೆ ಬೇಡ್ವೇ? ಎಂಬ ಕೂಗು ಎದ್ದಿತ್ತು. ಈ ವೇಳೆ ಸ್ಪಷ್ಟನೆ ನೀಡಿದ್ದ ಶಾಸಕ ರೇಣುಕಾಚಾರ್ಯ ತನ್ನ ಬಳಿ ಭಾರೀ ವಾಹನ ಓಡಿಸಲು ಪರವಾನಿಗೆ ಇದೆ. ತಾನು ಈ ಹಿಂದೆ ಭಾರೀ ವಾಹನಗಳನ್ನು ಚಲಾಯಿಸಿರುವುದಾಗಿ ಹೇಳಿದ್ದರು.

Follow Us:
Download App:
  • android
  • ios